‘ಬಾಕಿ ಸಂಭಾವನೆ ಕೊಟ್ಟಿದ್ದಾರೆ, ಆದರೆ ಪ್ರಚಾರಕ್ಕೆ ಬರಬೇಡಿ ಎಂದಿದ್ದಾರೆ’; ಪ್ರಜ್ವಲ್ ದೇವರಾಜ್
'ಕರಾವಳಿ' ಚಿತ್ರದ ವಿವಾದದ ಕುರಿತು ನಟ ಪ್ರಜ್ವಲ್ ದೇವರಾಜ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತಮ್ಮ ಅನುಮತಿಯಿಲ್ಲದೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಮತ್ತು ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇ ವಿವಾದಕ್ಕೆ ಅಸಲಿ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಿಕ್ಸ್-ಪ್ಯಾಕ್ ಲುಕ್‌ಗೂ ಇದಕ್ಕೂ ಸಂಬಂಧವಿಲ್ಲ ಎಂದಿರುವ ನಟ, ಚಿತ್ರತಂಡವೇ ತಮ್ಮನ್ನು ಪ್ರಚಾರದಿಂದ ಹೊರಗಿಟ್ಟಿದೆ ಎಂದು ಬಹಿರಂಗಪಡಿಸಿದ್ದಾರೆ.

ಮುಖ್ಯಾಂಶಗಳು
- ‘ಕರಾವಳಿ’ ವಿವಾದದ ಅಸಲಿ ಸತ್ಯ ಬಿಚ್ಚಿಟ್ಟ ಪ್ರಜ್ವಲ್
- ಚಿತ್ರತಂಡವೇ ನನ್ನನ್ನು ಪ್ರಚಾರದಿಂದ ದೂರ ಇಟ್ಟಿದೆ
- ವಿವಾದಕ್ಕೆ ಪೂರ್ಣ ವಿರಾಮ ಇಟ್ಟ 'ಡೈನಾಮಿಕ್ ಪ್ರಿನ್ಸ್'
‘ಕರಾವಳಿ’ ಸಿನಿಮಾದ (Karavali Movie) ಸುತ್ತ ಸಾಕಷ್ಟು ವಿವಾದ ಎದ್ದಿದೆ. ಪ್ರತಿ ಹಂತದಲ್ಲೂ ಪ್ರಜ್ವಲ್ ಅವರದ್ದೇ ತಪ್ಪು ಎಂದು ಆರೋಪಿಸಲಾಗುತ್ತಿದೆ. ಈ ವಿವಾದದ ಕುರಿತು ನಟ ಪ್ರಜ್ವಲ್ ದೇವರಾಜ್ ಅವರು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರದ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕ ಗುರುದತ್ ಗಣಿಗ ಅವರು ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಅವರು, ಅಭಿಮಾನಿಗಳು ಮತ್ತು ಮಾಧ್ಯಮಗಳ ಮುಂದೆ ಕೆಲವು ವಾಸ್ತವಾಂಶಗಳನ್ನು ಹಂಚಿಕೊಂಡಿದ್ದಾರೆ.
ವಿವಾದಕ್ಕೆ ಅಸಲಿ ಕಾರಣವೇನು?
‘ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ನನ್ನ ಯಾವುದೇ ಪೂರ್ವ ಮಾಹಿತಿ ಅಥವಾ ಅನುಮತಿಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿತ್ತು. ಅಷ್ಟೇ ಅಲ್ಲದೆ, ನನಗೆ ಒಪ್ಪಿಗೆಯಾಗಿದ್ದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಇದೇ ಕಾರಣಕ್ಕೆ ನಾನು ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಗೈರಾಗಿದ್ದೆ’ ಎಂದು ಪ್ರಜ್ವಲ್ ಹೇಳಿಕೆಯಲ್ಲಿ ಬರೆದುಕೊಂಡಿದ್ದಾರೆ.
ಹೇಳಿದ್ದನ್ನು ಮಾಡಿರಲಿಲ್ಲ ಎಂಬುದಕ್ಕೆ ಉತ್ತರ
ಪ್ರಜ್ವಲ್ ದೇವರಾಜ್ ಅವರು ಸ್ವಲ್ಪ ತೆಳ್ಳಗಾಗಬೇಕಿತ್ತು, ಆದರೆ ಅವರು ಅದನ್ನು ಮಾಡಿಲ್ಲ ಎಂದು ಚಿತ್ರತಂಡ ಹೇಳಿಕೆ ನೀಡಿತ್ತು. ಆದರೆ ಇದನ್ನು ನಿರಾಕರಿಸಿರುವ ಪ್ರಜ್ವಲ್, ‘ನನ್ನ ಸಿಕ್ಸ್-ಪ್ಯಾಕ್ ಲುಕ್‌ಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ಅನುಮತಿಯಿಲ್ಲದ ಡಬ್ಬಿಂಗ್ ಮತ್ತು ಬಾಕಿ ಇದ್ದ ಸಂಭಾವನೆಯೇ ಇದಕ್ಕೆ ಮೂಲ ಕಾರಣ. ಬಾಕಿ ಹಣ ಪಾವತಿಸಿದ ತಕ್ಷಣ ಡಬ್ಬಿಂಗ್ ಮಾಡಲು ಮತ್ತು ಪ್ರಚಾರದಲ್ಲಿ ಭಾಗವಹಿಸಲು ನಾನು ಸಿದ್ಧನಿದ್ದೆ’ ಎಂದಿದ್ದಾರೆ.
ಪ್ರಚಾರದಿಂದ ಹೊರಗಿಟ್ಟಿದ್ದು ಚಿತ್ರತಂಡ
ಟ್ರೇಲರ್ ಬಿಡುಗಡೆಯಾದ ಮರುದಿನ ಜಿಎಸ್‌ಟಿ ಹೊರತುಪಡಿಸಿ ಬಾಕಿ ಸಂಭಾವನೆಯನ್ನು ಪಾವತಿಸಲಾಯಿತು ಎಂದು ಪ್ರಜ್ವಲ್ ಹೇಳಿದ್ದಾರೆ. ‘ಹಣ ಸಂದಾಯವಾದ ಬೆನ್ನಲ್ಲೇ, ಚಿತ್ರತಂಡವು ನನ್ನ ಮ್ಯಾನೇಜರ್‌ಗೆ ಕರೆ ಮಾಡಿ ಇನ್ನು ಮುಂದೆ ಡಬ್ಬಿಂಗ್ಗೆ ಬರಬೇಡಿ, ಚಿತ್ರದ ಪ್ರಚಾರದಲ್ಲಿ ಭಾಗವಹಿಸೋದು ಬೇಡ ಎಂದಿದ್ದಾರೆ. ಹೀಗಾಗಿ ಚಿತ್ರದಿಂದ ದೂರ ಉಳಿದಿರುವುದು ನನ್ನ ಸ್ವಂತ ನಿರ್ಧಾರವಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
View this post on Instagram
ಸಾರ್ವಜನಿಕ ಹೇಳಿಕೆಗೆ ಬೇಸರ
ತಮ್ಮ ಧ್ವನಿ ಈ ಪಾತ್ರಕ್ಕೆ ಸೂಕ್ತವಲ್ಲ ಎಂಬ ಚಿತ್ರತಂಡದ ಸಾರ್ವಜನಿಕ ಹೇಳಿಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಟ, ‘ನನಗೆ ಡಬ್ಬಿಂಗ್ ಮಾಡಲು ಅವಕಾಶವನ್ನೇ ನೀಡದೆ ಈ ರೀತಿ ಹೇಳಿರುವುದು ನೋವುಂಟು ಮಾಡಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ನಾನು ಗಳಿಸಿರುವ ವೃತ್ತಿಪರ ಗೌರವ ಮತ್ತು ಪ್ರೇಕ್ಷಕರ ಪ್ರೀತಿಗೆ ಧಕ್ಕೆ ತರುವ ಇಂತಹ ಬೆಳವಣಿಗೆಗಳು ಬೇಸರ ತರಿಸಿವೆ’ ಎಂದಿದ್ದಾರೆ.
ವಿವಾದಕ್ಕೆ ಪೂರ್ಣ ವಿರಾಮ
ಈ ವಿಷಯದ ಕುರಿತು ಸಾರ್ವಜನಿಕವಾಗಿ ನಡೆಯುವ ಚರ್ಚೆ ಮತ್ತು ವಾಗ್ವಾದಗಳಿಗೆ ತಾವು ಇಲ್ಲೇ ಪೂರ್ಣ ವಿರಾಮ ಇಡುತ್ತಿರುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಇನ್ನು ಮುಂದೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ವೈಯಕ್ತಿಕ ಭಿನ್ನಾಭಿಪ್ರಾಯಗಳು ಚಿತ್ರತಂಡದ ಪರಿಶ್ರಮವನ್ನು ಮರೆಮಾಚಬಾರದು ಎಂದು ಆಶಿಸಿದ್ದಾರೆ.
ಇದನ್ನೂ ಓದಿ: ‘ಕರಾವಳಿ’ ಸಿನಿಮಾ ಹಾಡಿಗೆ ಹಿರಿಯ ಗಾಯಕಿ ಬಿ ಜಯಶ್ರೀ ಧ್ವನಿ
‘ಕರಾವಳಿ’ ಚಿತ್ರದ ತಂಡಕ್ಕೆ ಶುಭ ಹಾರೈಸಿರುವ ಪ್ರಜ್ವಲ್ ದೇವರಾಜ್, ಅಭಿಮಾನಿಗಳು ಮತ್ತು ಸಿನಿಪ್ರೇಕ್ಷಕರು ಚಿತ್ರಮಂದಿರಗಳಿಗೆ ತೆರಳಿ ಸಿನಿಮಾವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದ್ದಾರೆ. ಅಲ್ಲದೆ ಕಷ್ಟದ ಸಮಯದಲ್ಲಿ ತಮಗೆ ಬೆಂಬಲವಾಗಿ ನಿಂತ ಮಾಧ್ಯಮ ಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:46 pm, Sat, 11 July 26




