Daredevil Musthafa: ‘ಇಂಥ ದೇಶ ಬೇಕು ಅಂತ ಯುವ ಜನರು ನಮಗೆ ಹೇಳ್ತಿದ್ದಾರೆ’: ‘ಡೇರ್​ಡೆವಿಲ್​ ಮುಸ್ತಫಾ’ ನೋಡಿ ಪ್ರತಿಕ್ರಿಯೆ ತಿಳಿಸಿದ ಪ್ರಕಾಶ್​ ರಾಜ್​

|

Updated on: Jun 13, 2023 | 7:57 AM

Prakash Raj: ‘ಡೇರ್​ಡೆವಿಲ್​ ಮುಸ್ತಫಾ’ ರೀತಿಯ ಸಿನಿಮಾ ಯಾಕೆ ಮುಖ್ಯ ಎಂಬುದನ್ನು ಪ್ರಕಾಶ್​ ರೈ ಅವರು ತಿಳಿಸಿದ್ದಾರೆ. ಇಡೀ ತಂಡದ ಪ್ರಯತ್ನಕ್ಕೆ ಅವರು ಮೆಚ್ಚುಗೆ ಸೂಚಿಸಿದ್ದಾರೆ.

Daredevil Musthafa: ‘ಇಂಥ ದೇಶ ಬೇಕು ಅಂತ ಯುವ ಜನರು ನಮಗೆ ಹೇಳ್ತಿದ್ದಾರೆ’: ‘ಡೇರ್​ಡೆವಿಲ್​ ಮುಸ್ತಫಾ’ ನೋಡಿ ಪ್ರತಿಕ್ರಿಯೆ ತಿಳಿಸಿದ ಪ್ರಕಾಶ್​ ರಾಜ್​
‘ಡೇರ್​ಡೆವಿಲ್​ ಮುಸ್ತಫಾ’ ಪೋಸ್ಟರ್​, ಪ್ರಕಾಶ್​ ರಾಜ್​
Follow us on

ಶಶಾಂಕ್​ ಸೋಗಾಲ ನಿರ್ದೇಶನದ ‘ಡೇರ್​ಡೆವಿಲ್​ ಮುಸ್ತಫಾ’ (Daredevil Musthafa) ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ಚಿತ್ರ ಬಿಡುಗಡೆಯಾಗಿ 25 ದಿನ ಕಳೆದಿದೆ. ಇನ್ನೂ ಹಲವು ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾವನ್ನು ನೋಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈಗ ಖ್ಯಾತ ನಟ ಪ್ರಕಾಶ್​ ರಾಜ್​ (Prakash Raj) ಅವರು ಕೂಡ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾ ನೋಡಿದ್ದಾರೆ. ಬಳಿಕ ಅವರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಇಂಥ ಸಿನಿಮಾದ ಅಗತ್ಯ ಎಷ್ಟಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ಡೇರ್​ಡೆವಿಲ್​ ಮುಸ್ತಫಾ’ ರೀತಿಯ ಸಿನಿಮಾ ಯಾಕೆ ಮುಖ್ಯ ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ. ಇಡೀ ತಂಡದ ಪ್ರಯತ್ನಕ್ಕೆ ಪ್ರಕಾಶ್​ ರೈ (Prakash Rai) ಮೆಚ್ಚುಗೆ ಸೂಚಿಸಿದ್ದಾರೆ.

‘ಸಿನಿಮಾ ರಂಗದಲ್ಲಿ ಇಷ್ಟು ವರ್ಷ ಕೆಲಸ ಮಾಡಿದವನಾಗಿ ಹಾಗೂ ಒಬ್ಬ ಕನ್ನಡಿಗನಾಗಿ ನನಗೆ ಬಹಳ ಹೆಮ್ಮೆ ಎನಿಸುತ್ತಿದೆ. ಬಹಳ ನಂಬಿಕೆ ಬರುತ್ತಿದೆ. ಇವತ್ತಿನ ನಮ್ಮ ಯುವಕರು, ಕನ್ನಡದ ಮಕ್ಕಳು, ಸಾಹಿತ್ಯವನ್ನು ಓದಿಕೊಂಡಿರುವ ಮಕ್ಕಳು ಬಹಳ ಪ್ರಸ್ತುತತೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ದುಡ್ಡು ಮಾಡೋಕೆ ಅಥವಾ ಚೆನ್ನಾಗಿ ನಟನೆ ಮಾಡಿದ್ದೇವೆ ಅಂತ ಹೇಳಿಕೊಳ್ಳೋಕೆ ಕೆಲವರು ಸಿನಿಮಾ ಮಾಡ್ತಾರೆ. ಆದರೆ ಒಂದು ಆಲೋಚನೆಯ ಜೊತೆ ಯಾವ ರೀತಿಯ ಸಿನಿಮಾ ಮಾಡಬೇಕು? ನಾವು ಯಾವ ರೀತಿ ಗುರುತಿಸಿಕೊಳ್ಳಬೇಕು ಎಂಬುದಕ್ಕೆ ಇಲ್ಲಿ ಪ್ರಾಮಾಣಿಕ ಪ್ರಯತ್ನ ಆಗಿದೆ’ ಎಂದು ಪ್ರಕಾಶ್​ ರಾಜ್​ ಹೇಳಿದ್ದಾರೆ.

ಇದನ್ನೂ ಓದಿ: Daredevil Musthafa: ‘ಎಲ್ಲರೂ ಡೇರ್​ಡೆವಿಲ್​ ಮುಸ್ತಫಾ ಚಿತ್ರ ನೋಡಿ, ಇದರಿಂದ ನಾವು ಸೌಹಾರ್ದತೆಯ ಪಾಠ ಕಲಿಯಬೇಕು’: ಪ್ರತಾಪ್​ ಸಿಂಹ

‘ನಮ್ಮ ತೇಜಸ್ವಿ ಅವರ ಮಾತುಗಳನ್ನು ಇಟ್ಟುಕೊಂಡು ಹಾಗೂ ಕುವೆಂಪು ಹೇಳಿದ ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ಇಟ್ಟುಕೊಂಡು ಇವತ್ತಿನ ಚಿಕ್ಕ ಮಕ್ಕಳು, ಯುವಕ-ಯುವತಿಯರು ಮಾಡಿರುವ ಸಿನಿಮಾ ಇದು. ನಾವು ಕಟ್ಟಿಕೊಟ್ಟಿರುವ ಸಮಾಜವನ್ನು ಹಾಗೂ ಇಲ್ಲಿನ ದುರಂತವನ್ನು ಅವರು ಹೇಗೆ ನೋಡುತ್ತಿದ್ದಾರೆ? ಅವರು ತಮಗೆ ಯಾವ ರೀತಿಯ ಸಮಾಜ ಬೇಕು ಅಂತ ಹೇಳುತ್ತಿದ್ದಾರೆ ಎಂಬುದನ್ನು ಈ ಸಿನಿಮಾ ಮೂಲಕ ಆ ಮಕ್ಕಳೇ ತಿಳಿಸಿದ್ದಾರೆ. ಯಾವಾಗಲೂ ಚಿಕ್ಕವರಿಗೆ ಹಿರಿಯರು ಬುದ್ಧಿ ಹೇಳಬೇಕು. ಆದರೆ ಇಲ್ಲಿ ತುಂಬ ನಂಬಿಕೆ ಹುಟ್ಟಿಸುವ ಸಂಗತಿ ಏನೆಂದರೆ, ಚಿಕ್ಕವರು ನಮಗೆ ಈ ರೀತಿಯ ಸಮಾಜ ಬೇಕು ಅಂತ ಸಿನಿಮಾ ಮೂಲಕ ಹೇಳುತ್ತಿದ್ದಾರೆ’ ಎಂದಿದ್ದಾರೆ ಪ್ರಕಾಶ್​ ರಾಜ್​.

ಇದನ್ನೂ ಓದಿ: Daredevil Musthafa Review: ಭರಪೂರ ನಗಿಸುತ್ತಾ ಮತಗಳ ಜಗಳ ಬಿಡಿಸುವ ‘ಡೇರ್​ಡೆವಿಲ್​ ಮುಸ್ತಫಾ’

‘ಪ್ರತಿ ಕಲಾವಿದರು ಕೂಡ ಬಹಳ ಅದ್ಭುತವಾಗಿ ನಟಿಸಿದ್ದಾರೆ. ಅದು ಬರೀ ನಟಿಸೋದು ಅಲ್ಲ. ಆಲೋಚನೆಗಳ ಜೊತೆ ಬದುಕೋದು. ಬರವಣಿಗೆ, ಸಂಗೀತ, ಸಂಕಲನ ಚೆನ್ನಾಗಿದೆ. ತುಂಬ ಆರೋಗ್ಯಯುತ ತಂಡ ಈ ಸಿನಿಮಾವನ್ನು ಮಾಡಿದೆ. ಆ ಮಕ್ಕಳು ತಮಗೆ ಮುಂದಿನ ಬದುಕು ಹೇಗೆ ಬೇಕು ಎಂಬುದನ್ನು ಹೇಳ್ತಾ ಇದ್ದಾರೆ. ಇದು ನಮ್ಮೆಲ್ಲರ ಜವಾಬ್ದಾರಿ. ಈ ರೀತಿಯ ಪ್ರತಿಭೆಗಳನ್ನು ಬೆಳೆಸಬೇಕು. ಇವರೇ ನಮಗೆ ಹೆಮ್ಮೆ ತರುವಂಥವರು. ಇವರೇ ಸರ್ವಜನಾಂಗದ ಶಾಂತಿಯ ತೋಟವನ್ನು ಸೃಷ್ಟಿಸುವಂಥವರು’ ಎಂದು ಪ್ರಕಾಶ್​ ರಾಜ್​ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  ಡೇರ್​ಡೆವಿಲ್ ಮುಸ್ತಾಫಾ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಕೋರಿ ಮನವಿ: ಅಸ್ತು ಎನ್ನುತ್ತಾರೆಯೇ ಸಿದ್ದರಾಮಯ್ಯ

ಶಿಶಿರ್​ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್​ ಭಾರದ್ವಾಜ್​, ಆಶಿತ್​ ಶ್ರೀವತ್ಸಾ, ಅಭಯ್​, ಮಂಡ್ಯ ರಮೇಶ್​, ಉಮೇಶ್​, ಪ್ರೇರಣಾ ಮುಂತಾದ ಕಲಾವಿದರು ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಮೈಸೂರು ಸಂಸದ ಪ್ರತಾಪ್​ ಸಿಂಹ ಅವರು ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:29 am, Tue, 13 June 23