ಸ್ಯಾಂಡಲ್ವುಡ್ನಲ್ಲಿ ಹಾಡುಗಳು ಪ್ರೇಕ್ಷಕರ ಮನಗೆಲ್ಲುತ್ತಿವೆ. ಉತ್ತಮವಾದ ಹಾಡುಗಳ ಹಕ್ಕುಗಳನ್ನು ಪಡೆಯುವಲ್ಲಿ ಆಡಿಯೋ ಕಂಪನಿಗಳ ನಡುವೆ ಪೈಪೋಟಿ ಇದೆ. ಟೈಟಲ್ ಮತ್ತು ಪಾತ್ರವರ್ಗದ ಕಾರಣದಿಂದ ನಿರೀಕ್ಷೆ ಮೂಡಿಸಿರುವ ‘ಜಲಂಧರ’ ಸಿನಿಮಾದ ಹಾಡುಗಳ ಬಗ್ಗೆ ಈಗಾಗಲೇ ಟಾಕ್ ಶುರುವಾಗಿದೆ. ಈ ಸಿನಿಮಾದ ಆಡಿಯೋ ಹಕ್ಕಗಳನ್ನು ‘ಜಂಕಾರ್ ಆಡಿಯೋ’ ಸಂಸ್ಥೆ ಪಡೆದುಕೊಂಡಿದೆ. ಕನ್ನಡ ಚಿತ್ರರಂಗ ಟಾಪ್ ಆಡಿಯೋ ಸಂಸ್ಥೆಗಳಲ್ಲಿ ಇದು ಕೂಡ ಒಂದಾಗಿದೆ. ‘ಜಲಂಧರ’ ಚಿತ್ರದ ಸಾಂಗ್ಸ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಈ ವರ್ಷ ‘ಲಾಫಿಂಗ್ ಬುದ್ಧ’ ಸಿನಿಮಾದ ಮೂಲಕ ನಟ ಪ್ರಮೋದ್ ಶೆಟ್ಟಿ ಅವರು ಹೀರೋ ಆಗಿ ಗಮನ ಸೆಳೆದರು. ಕನ್ನಡ ಚಿತ್ರರಂಗದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರು ನಾಯಕನಾಗಿ ಅಭಿನಯಿಸಿರುವ ‘ಜಲಂಧರ’ ಸಿನಿಮಾನ್ನು ‘ಸ್ಟೆಪ್ ಅಪ್ ಪಿಕ್ಚರ್ಸ್’ ಮೂಲಕ ಮದನ್ ಎಸ್. ಅವರು ನಿರ್ಮಾಣ ಮಾಡುತ್ತಿದ್ದಾರೆ. ಹೂಡಿ ಚಂದ್ರಮೋಹನ್, ಸಿ.ಎಲ್. ರಮೇಶ್ ರಾಮಚಂದ್ರ ಮತ್ತು ಪದ್ಮನಾಭನ್ ಮಂಗುದೊಡ್ಡಿ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಹಲವು ಸಿನಿಮಾಗಳಲ್ಲಿ ಕ್ರಿಯೇಟಿವ್ ಹೆಡ್ ಮತ್ತು ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಪಡೆದಿರುವ ವಿಷ್ಣು ವಿ. ಪ್ರಸನ್ನ ಅವರು ‘ಜಲಂಧರ’ ಚಿತ್ರಕ್ಕೆ ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಶ್ಯಾಮ್ ಸುಂದರ್ ಹಾಗೂ ಅಕ್ಷಯ್ ಕುಮಾರ್ ಅವರು ಚಿತ್ರಕಥೆ ಬರವಣಿಗೆಯಲ್ಲಿ ಸಹಾಯ ಮಾಡಿದ್ದಾರೆ. ಕೇರಳ ಮೂಲದ ಸರಿನ್ ರವೀಂದ್ರನ್ ಹಾಗೂ ವಿದ್ಯಾ ಶಂಕರ್ ಪಿ.ಎಸ್. ಅವರು ಛಾಯಾಗ್ರಹಣ ಮಾಡಿದ್ದಾರೆ. ಜಿ. ಜತಿನ್ ದರ್ಶನ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ‘ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು’ ಸಿನಿಮಾಗೆ ವೀರೇಂದ್ರ ಹೆಗ್ಗಡೆ ಬೆಂಬಲ
ವೆಂಕಿ ಯು.ಡಿ.ವಿ. ಅವರ ಸಂಕಲನ ಈ ಚಿತ್ರಕ್ಕಿದೆ. ಪ್ರಮೋದ್ ಶೆಟ್ಟಿ ಅವರ ಜೊತೆ ಇನ್ನೊಂದು ಪ್ರಮುಖ ಪಾತ್ರದಲ್ಲಿ ಸ್ಟೆಪ್ ಅಫ್ ಲೋಕಿ ಕೂಡ ನಟಿಸಿದ್ದಾರೆ. ಅವರಿಗೆ ರಂಗಭೂಮಿ ಹಿನ್ನೆಲೆ ಇದೆ. ಈ ಸಿನಿಮಾಗೆ ಕಥೆ ಬರೆದಿದ್ದು ಕೂಡ ಲೋಕಿ ಅವರೇ. ಶಿವರಾಜ್ಕುಮಾರ್ ನಟನೆಯ ‘ಟಗರು’ ಸಿನಿಮಾದ ಕಾನ್ಸ್ಟೇಬಲ್ ಸರೋಜಾ ಎಂಬ ಪಾತ್ರದಲ್ಲಿ ಫೇಮಸ್ ಆಗಿದ್ದ ನಟಿ ಋಷಿಕಾ ರಾಜ್ ಅವರು ಕೂಡ ‘ಜಲಂಧರ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಬಲರಾಜ್ ವಾಡಿ, ಆರೋಹಿತಾ ಗೌಡ, ರಘು ರಾಮನಕೊಪ್ಪ, ಪ್ರತಾಪ್ ನನಸು, ನವೀನ್ ಸಾಗರ್, ಆದಿ ಕೇಶವರೆಡ್ಡಿ, ವಿಜಯರಾಜ್, ಭೀಷ್ಮಾ ರಾಮಯ್ಯ, ಪ್ರಸಾದ್, ಅಂಬು ಅವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.