‘ಕರಿಕಾನು ಗುಡ್ಡದ ಮೇಲೆ’ ಪ್ರಮೋದ್ ಶೆಟ್ಟಿ ‘ಅಧಿಕ ಪ್ರಸಂಗ’

|

Updated on: Aug 31, 2023 | 9:57 PM

Pramod Shetty: ಪ್ರತಿಭಾವಂತ ನಟ ಪ್ರಮೋದ್ ಶೆಟ್ಟಿ ಇಂದು (ಆಗಸ್ಟ್ 31) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ.

ಕರಿಕಾನು ಗುಡ್ಡದ ಮೇಲೆ ಪ್ರಮೋದ್ ಶೆಟ್ಟಿ ಅಧಿಕ ಪ್ರಸಂಗ
ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ
Follow us on

ಪೋಷಕ ಪಾತ್ರ, ಹಾಸ್ಯ ಪಾತ್ರ, ವಿಲನ್, ನಾಯಕ ನಟ ಹೀಗೆಯೇ ಹಲವು ಮಾದರಿಯ ಪಾತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸುತ್ತಿರುವ ನಟ ಪ್ರಮೋದ್ ಶೆಟ್ಟಿ (Pramod Shetty) ಇಂದು (ಆಗಸ್ಟ್ 31) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರಮೋದ್​ರ ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾಗಳ ಬಗ್ಗೆ ಅಪ್​ಡೇಟ್​ಗಳು ಹೊರಬಿದ್ದಿವೆ. ಕೆಲವು ಆಸಕ್ತಿಕರ ಸಿನಿಮಾಗಳ ಭಾಗವಾಗಿದ್ದಾರೆ ನಟ ಪ್ರಮೋದ್ ಶೆಟ್ಟಿ. ಅವುಗಳಲ್ಲಿ ಒಂದು ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’.

‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಸಿನಿಮಾ ಊರೊಂದರಲ್ಲಿ ಆದ ಅಪಾರ್ಥ, ಅನಾಹುತವಾಗಿವಾಗಿ ಮಾರ್ಪಟ್ಟು ಆ ಅನಾಹುತ ಅಧಿಕ ಪ್ರಸಂಗವಾಗಿ ನಡೆಯುವ ಘಟನೆಗಳ ಕತೆಯನ್ನು ಒಳಗೊಂಡಿದೆ. ‘ವಡ್ಡಾರಾಧಕ’ ಹಾಗೂ ‘ಶಬರಿ’ ಹೆಸರಿನ ಕಿರು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಯುವ ಪ್ರತಿಭೆ ಅನೀಶ್ ಶರ್ಮ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ಮೊದಲ ಸಿನಿಮಾ.

ಶಿವಮೊಗ್ಗ ಜಿಲ್ಲೆ ಇಡುವಾಣಿ ಹೆಸರಿನ ಹಳ್ಳಿಯಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಇಡುವಾಣಿ ಗ್ರಾಮವನ್ನೇ ಸಿನಿಮಾ ಸೆಟ್ಟನ್ನಾಗಿಸಿಕೊಂಡು, ಸ್ಥಳೀಯ ಜನರನ್ನೇ ಬಳಸಿಕೊಂಡು ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ಚಿತ್ರೀಕರಿಸಲಾಗಿದೆ. ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ. ಸಿನಿಮಾಕ್ಕೆ ಸಿನಿಮಾಟೊಗ್ರಫಿಯನ್ನು ಸುಮತ್ ಶರ್ಮಾ ಮಾಡಿದ್ದಾರೆ. ಎಡಿಟಿಂಗ್ ಜವಾಬ್ದಾರಿಯನ್ನು ಸಂಜೀವ್ ಜಾಗೀರ್ದಾರ್ ನಿರ್ವಹಿಸಿದ್ದಾರೆ. ಹಿನ್ನೆಲೆ ಸಂಗೀತವನ್ನು ಚೇತನ್ ಕುಮಾರ್ ನೀಡಿದ್ದಾರೆ. ಗನ್ನಿ ಬ್ಯಾಗ್ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಿತ್ತರಂಜನ್ ಕಶ್ಯಪ್, ವಲ್ಲಭ್ ಸೂರಿ, ಸುನಿತ್ ಹಲಗೇರಿ ನಿರ್ಮಾಣ ಮಾಡಿದ್ದು, ಊರ್ ಮನೆ ಪ್ರೊಡಕ್ಷನ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದೆ. ರಾಘು ಶಿವಮೊಗ್ಗ, ಕಿರಣ್ ನಾಯಕ್, ಮಂಜುನಾಥ್ ಹೆಗಡೆ, ಕೆಜಿ ಕೃಷ್ಣಮೂರ್ತಿ ಚಂದ್ರಕಲಾ ಇನ್ನೂ ಕೆಲವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Pramod Shetty: ರಿಷಬ್ ಶೆಟ್ಟಿ ಬಗ್ಗೆ ಯಾರಿಗೂ ಗೊತ್ತಿರದ ವಿಷಯ ಹಂಚಿಕೊಂಡ ಗೆಳೆಯ ಪ್ರಮೋದ್ ಶೆಟ್ಟಿ

ಈ ಸಿನಿಮಾದ ಫಸ್ಟ್ ಲುಕ್ ಇಂದು (ಆಗಸ್ಟ್ 31) ಬಿಡುಗಡೆ ಆಗಿದೆ. ಪೇಂಟಿಗ್ ಮಾದರಿಯ ಪೋಸ್ಟರ್ ಇದಾಗಿದ್ದು, ಪ್ರಮೋದ್ ಶೆಟ್ಟಿ ಆಶ್ಚರ್ಯ ಚಕಿತರಾಗಿ ಏನನ್ನೋ ದಿಟ್ಟಿಸಿರುವ ಚಿತ್ರವನ್ನು ಪೊಸ್ಟರ್​ಗೆ ಬಳಸಿಕೊಳ್ಳಲಾಗಿದೆ. ಪೋಸ್ಟರ್​ನಲ್ಲಿ ‘ನಮ್ಮೂರಿಗೆ ಬೇಕಾಗಿರುವುದು ಕೇವಲ ಮನರಂಜನೆಯಷ್ಟೆ ಅಲ್ಲ, ಮೂಲಭೂತ ಸೌಕರ್ಯ’ ಎಂಬ ಬೋರ್ಡ್ ಗಮನ ಸೆಳೆಯುತ್ತಿದೆ. ಆದಷ್ಟು ಬೇಗ ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಸಿನಿಮಾ ಬಿಡುಗಡೆ ಆಗಲಿದೆ.

‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’, ‘ರಿಕ್ಕಿ’, ‘ಬೆಲ್ ಬಾಟಂ’, ‘ಅವನೇ ಶ್ರೀಮನ್ನಾರಾಯಣ’, ‘ಕಾಂತಾರ’, ‘ಹೀರೋ’ ಹೀಗೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಪ್ರಮೋದ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ರಿಷಬ್ ಶೆಟ್ಟಿ ನಿರ್ಮಾಣದ ‘ಲಾಫಿಂಗ್ ಬುದ್ಧ’ ಅನ್ನೋ ಸಿನಿಮಾದಲ್ಲಿ ಹೀರೋ ಆಗಿಯೂ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾದ ಪೋಸ್ಟರ್ ಸಹ ಇಂದು ಬಿಡುಗಡೆ ಆಗಿದೆ. ‘ಲಾಫಿಂಗ್ ಬುದ್ಧ’ ಸಿನಿಮಾದ ಸಹ ಬಹುತೇಕ ಮುಕ್ತಾಯವಾಗಿದ್ದು, ಆ ಸಿನಿಮಾ ಸಹ ಶೀಘ್ರವೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ