‘ಒಲವೇ ಮಂದಾರ 2’: ಹನ್ನೆರಡು ವರ್ಷ ಹಳೆಯ ಸಿನಿಮಾದ ಮುಂದಿನ ಭಾಗವಾ?
Olave Mandara 2: 2011 ರಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದ್ದ ಸುಂದರ ಪ್ರೇಮಕತೆ ಸಿನಿಮಾ 'ಒಲವೇ ಮಂದಾರ'. ಈಗ ಅದೇ ಹೆಸರಿಟ್ಟುಕೊಂಡು ಹೊಸದೊಂದು ಸಿನಿಮಾ ಬರುತ್ತಿದೆ. 'ಒಲವೇ ಮಂದಾರ 2' ಸೆಪ್ಟೆಂಬರ್ 15 ರಂದು ಬಿಡುಗಡೆ ಆಗಲಿದೆ.
2011 ರಲ್ಲಿ ಬಿಡುಗಡೆ ಆಗಿದ್ದ ‘ಒಲವೇ ಮಂದಾರ’ (Olave Mandara) ಸಿನಿಮಾ ತನ್ನ ನವಿರುತನ, ಪ್ರೀತಿಯ ಉತ್ಕಟತೆ ತುಂಬಿದ್ದ ಕತೆ, ಹಾಡುಗಳು, ರಂಗಾಯಣ ರಘು (Rangayana Raghu) ಇನ್ನಿತರೆ ನಟರ ಸಹಜವಾದ ನಟನೆ ಅದ್ಭುತವಾದ ಸಂಭಾಷಣೆಗಳ ಕಾರಣದಿಂದ ಹಿಟ್ ಎನಿಸಿಕೊಂಡಿತ್ತು. ಹಲವರ ನೆನಪಿನಲ್ಲಿಯೂ ಇಂದಿಗೂ ಹಸಿರಾಗಿರುವ ‘ಒಲವೆ ಮಂದಾರ’ ಹೆಸರನ್ನೇ ಇಟ್ಟುಕೊಂಡು ಹೊಸ ಸಿನಿಮಾ ಬರಲು ಸಜ್ಜಾಗಿದೆ. ಅದೇ ಹಳೆಯ ಸಿನಿಮಾದ ಮುಂದುವರಿದ ಭಾಗವಾ? ಅಥವಾ ಇದು ಹೊಸ ಸಿನಿಮಾನಾ?
ಇದು ಹೊಸ ಕತೆಯುಳ್ಳ ಹೊಸದೇ ಸಿನಿಮಾ ಆದರೆ ಹೆಸರು ಮಾತ್ರ ‘ಒಲವೇ ಮಂದಾರ 2’. ಸಿನಿಮಾವನ್ನು ಎಸ್ ಆರ್ ಪಾಟೀಲ್ ನಿರ್ದೇಶನ ಮಾಡುತ್ತಿದ್ದು, ಸನತ್, ನಾಯಕನಾಗಿ ನಟಿಸಿದ್ದಾರೆ. ”ನನಗೆ “ಒಲವೇ ಮಂದಾರ” ಸಿನಿಮಾ ಬಹಳ ಇಷ್ಟ, ಹಾಗಾಗಿ ಅದೇ ಹೆಸರನ್ನು ಸಿನಿಮಾಕ್ಕೆ ಇಟ್ಟಿದ್ದೇವೆ. ಆ ಸಿನಿಮಾದ ಕಥೆಗೂ ನಮ್ಮ ಸಿನಿಮಾಕ್ಕೂ ಹೋಲಿಕೆ ಇಲ್ಲ. ಎರಡೂ ಕತೆಗಳು ಬೇರೆ-ಬೇರೆ. ನಮ್ಮ ಸಿನಿಮಾದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು ಹಿಟ್ ಆಗಿವೆ. ಸಿನಿಮಾ ಸೆಪ್ಟೆಂಬರ್ 15 ಕ್ಕೆ ಬಿಡುಗಡೆ ಆಗಲಿದೆ” ಎಂದಿದ್ದಾರೆ.
“ಒಲವೇ ಮಂದಾರ 2” ಸ್ವಚ್ಛ ಪ್ರೇಮಕತೆ. ಪ್ರೀತಿ ಮಾಡುವವರನ್ನು ಪೋಷಕರು ಅಪರಾಧ ಮಾಡಿರುವ ಹಾಗೆ ನೋಡುತ್ತಾರೆ. ಅದರಲ್ಲಿಯೂ ಹೆಣ್ಣುಮಕ್ಕಳನ್ನು. ಆದರೆ ಅದು ತಪ್ಪು, ಒಬ್ಬರನೊಬ್ಬರು ಅರಿತುಕೊಂಡು ಮಾಡುವ ಪ್ರೀತಿ ಯಾವತ್ತು ತಪ್ಪಲ್ಲ, ಹಾಗೆ ಪ್ರೀತಿ ಮಾಡಿದವರು ಕೊನೆಯ ಕ್ಷಣದವರೆಗೂ ತಮ್ಮ ಪ್ರೀತಿಯನ್ನು ಅವರ ತಂದೆ ತಾಯಿಗೆ ಒಪ್ಪಿಸಲು ಪ್ರಯತ್ನಿಸಬೇಕು ಹೊರತು ಬೇರೆ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ಸಂದೇಶ ಈ ಚಿತ್ರದಲ್ಲಿದೆ ಎಂದು ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ ನಿರ್ದೇಶಕ ಪಾಟೀಲ್.
ಇದನ್ನೂ ಓದಿ:ವಿದೇಶಕ್ಕೆ ಹೊರಟ ‘ಹಾಸ್ಟೆಲ್ ಹುಡುಗರು’: ಹೊಸಬರ ಸಿನಿಮಾಗೆ ಸಿಕ್ಕಿದೆ ಭರ್ಜರಿ ಸಕ್ಸಸ್
“ಕಮರೊಟ್ಟು ಚೆಕ್ ಪೋಸ್ಟ್” ಚಿತ್ರದ ಮೂಲಕ ನಟನೆ ಆರಂಭಿಸಿರುವ ಸನತ್ಗೆ ‘ಒಲವೆ ಮಂದಾರ 2’ ಎರಡನೇ ಸಿನಿಮಾ. ನಾಯಕ ನಟ ಆಗಬೇಕು ಎಂಬುದು ನನ್ನಂಥಹ ಮಧ್ಯಮ ವರ್ಗದ ಹುಡುಗನ ಕನಸು. ಆ ಕನಸನ್ನು ನನಸಾಗುವಂತೆ ಮಾಡಿದ ಎಲ್ಲರಿಗೂ ಧನ್ಯವಾದ. ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ಸನತ್.
ನಿರ್ಮಾಪಕರಾದ ರಮೇಶ್ ಮರಗೋಳ, ಬಿ.ಎಂ.ಸತೀಶ್ ಹಾಗೂ ಸಹ ನಿರ್ಮಾಪಕರಾದ ಯಲ್ಲಾಲಿಂಗ ಮುಗುಟಿ ಹಾಗೂ ರಾಮದೇವ್ ರಾಥೋಡ್ ಚಿತ್ರ ನಿರ್ಮಾಣದ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಡಾ ಕಿರಣ್ ತೋಟಂಬೈಲ್ ಹಾಡುಗಳ ಬಗ್ಗೆ ಹಾಗೂ ನಾಯಕಿ ಪ್ರಜ್ಞಾ ಭಟ್, ಅನುಪಾ ಸತೀಶ್, ಹಿರಿಯ ನಟಿ ಭವ್ಯ, ಡಿಂಗ್ರಿ ನಾಗರಾಜ ಕಾಮಿಡಿ ಕಿಲಾಡಿ ಮಡೆನೂರ ಮನು ,ಶಿವಾನಂದ ಸಿಂದಗಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು.