‘ದಯವಿಟ್ಟು ಎಲ್ಲ ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ‘ಡೇರ್ಡೆವಿಲ್ ಮುಸ್ತಫಾ’ (Daredevil Musthafa) ಸಿನಿಮಾವನ್ನು ನೋಡಬೇಕು. ಇದು ಅದ್ಭುತವಾದ ಸಿನಿಮಾ. ನಮ್ಮ ಮೈಸೂರು ಹುಡುಗರು ಮಾಡಿದ್ದಾರೆ. ನಟ, ನಿರ್ಮಾಪಕ ಡಾಲಿ ಧನಂಜಯ್ ಅವರು ಹೊಸ ಹುಡುಗರನ್ನು ಬೆಳೆಸುವಂತಹ ಕೆಲಸ ಮಾಡುತ್ತಿದ್ದಾರೆ. ಹೊಸಬರನ್ನು ಬೆಳೆಸುವಂತಹ ಹೃದಯವಂತಿಕೆ ಬೇರೆ ಎಲ್ಲರಿಗೂ ಬರಬೇಕು. ಅದಕ್ಕೆ ಧನಂಜಯ್ ಅವರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಒಳ್ಳೆಯ ಮನಸ್ಸಿನಿಂದ ಹೇಳುತ್ತೇನೆ.. ಈ ಸಿನಿಮಾದಲ್ಲಿ ಯಾವುದೇ ಪೂರ್ವಾಗ್ರಹಗಳು ಇಲ್ಲ. ಧನಂಜಯ್ ಅವರು ಈ ಚಿತ್ರವನ್ನು ಪ್ರಚಾರ ಮಾಡುತ್ತಿರುವುದು ಶ್ಲಾಘನೀಯ ಕೆಲಸ. ಕನ್ನಡ ಚಿತ್ರರಂಗದ (Kannada Film Industry) ಎಲ್ಲ ನಟರು ಇದನ್ನು ಅನುಸರಿಸಬೇಕು. ನಮ್ಮ ಮೈಸೂರು ಹುಡುಗರಿಗೆ ಈ ರೀತಿಯ ಸಿನಿಮಾಗಳನ್ನು ಇನ್ನಷ್ಟು ಮಾಡಲು ತಾಯಿ ಚಾಮುಂಡೇಶ್ವರಿ ಶಕ್ತಿ ನೀಡಲಿ’; ಮೈಸೂರಿನಲ್ಲಿ ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರವನ್ನು ನೋಡಿದ ಬಳಿಕ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ ಮಾತುಗಳಿವು. ಇಡೀ ಸಿನಿಮಾ ಹೇಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಚಿತ್ರವನ್ನು ಅವರು ಬಹಳ ಮೆಚ್ಚಿಕೊಂಡಿದ್ದಾರೆ.
‘ಈ ಸಿನಿಮಾದಲ್ಲಿ ಬಿಗಿಯಾದ ನಿರೂಪಣೆ ಇದೆ. ಎಲ್ಲಿಯೂ ಬೋರ್ ಆಗಲ್ಲ. ನಿಜಕ್ಕೂ ಖುಷಿ ಆಗುತ್ತದೆ. ಸಂಭಾಷಣೆ ಬಹಳ ಚೆನ್ನಾಗಿದೆ. ಸಿನಿಮಾದಲ್ಲಿ ನೀಡಿದ ಸಂದೇಶ ಅನುಕರಣೀಯವಾಗಿದೆ. ಕಾಂತಾರ ಸಿನಿಮಾ ಬಂದಾಗ ಎಲ್ಲರೂ ಪ್ರೋತ್ಸಾಹಿಸಿದ ಹಾಗೆ ಡೇರ್ಡೆವಿಲ್ ಮುಸ್ತಫಾ ಸಿನಿಮಾವನ್ನೂ ಕೂಡ ನಿಮ್ಮದಾಗಿಸಿಕೊಳ್ಳಿ. ಇದಕ್ಕೆ ದೊಡ್ಡ ಯಶಸ್ಸು ಸಿಗುವಂತೆ ಮಾಡಿ. ಇಂಥ ಸಿನಿಮಾಗೆ ಪ್ರೋತ್ಸಾಹ ನೀಡಿದರೆ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಒಳ್ಳೆಯ ಸಿನಿಮಾಗಳು ಬರಲು ಸಾಧ್ಯವಾಗುತ್ತದೆ’ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
‘ನಾವೆಲ್ಲರೂ ಸೌಹಾರ್ದಯುತವಾಗಿ ಬದುಕಬೇಕು ಎಂಬುದನ್ನು ಈ ಸಿನಿಮಾ ನೋಡಿ ಕಲಿಯಬೇಕು. ಎಲ್ಲರೂ ಅನುಸರಿಸಬಹುದಾದ ಸಂದೇಶ ಇದರಲ್ಲಿ ಇದೆ. ಬೋಧನೆ ಮಾಡುವಂತಹ ಸ್ಟೋರಿ ಇದಲ್ಲ. ಇದು ಖುಷಿ ನೀಡುತ್ತದೆ. ಸಾಕಷ್ಟು ಮನರಂಜನೆ ಇದೆ. ಸಣ್ಣ ಪಾತ್ರಗಳಿಗೂ ಪ್ರತಿ ಕಲಾವಿದರು ಜೀವ ತುಂಬಿದ್ದಾರೆ. ಟೈಮ್ ಪಾಸ್ಗೆ ಅಂತ ನೋಡುತ್ತೀರೋ, ಖುಷಿಗಾಗಿ ನೋಡುತ್ತೀರೋ ಅಥವಾ ಒಳ್ಳೆಯ ಸಿನಿಮಾ ಎಂಬ ಕಾರಣಕ್ಕೆ ನೋಡುತ್ತೀರೋ ಗೊತ್ತಿಲ್ಲ. ಯಾವ ದೃಷ್ಟಿಕೋನದಿಂದ ನೋಡಿದರೂ ಕೂಡ ನಿಮ್ಮ ಮನಸ್ಸಿಗೆ ಖುಷಿ ಆಗುತ್ತದೆ’ ಎಂದಿದ್ದಾರೆ ಪ್ರತಾಪ್ ಸಿಂಹ.
ಇದನ್ನೂ ಓದಿ: Daredevil Musthafa Review: ಭರಪೂರ ನಗಿಸುತ್ತಾ ಮತಗಳ ಜಗಳ ಬಿಡಿಸುವ ‘ಡೇರ್ಡೆವಿಲ್ ಮುಸ್ತಫಾ’
‘ಡಾಲಿ ಧನಂಜಯ್ ಅವರು ಮೈಸೂರಿನಲ್ಲಿ ಓದಿ ಬೆಳೆದವರು. ಅವರು ಈಗಾಗಲೇ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ತಾವು ಬೆಳೆಯುವ ಹಂತದಲ್ಲೇ ಇತರರನ್ನು ಬೆಳೆಸುವ ಹುಮ್ಮಸ್ಸು ತೋರಿಸುತ್ತಿದ್ದಾರೆ. ಅವರಿಗೆ ದೇವರು ಇನ್ನಷ್ಟು ಚೈತನ್ಯ ನೀಡಲಿ. ಅದರಿಂದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಅನುಕೂಲ ಆಗುತ್ತದೆ’ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಅವರಿಂದ ಬೆಂಬಲ ಸಿಕ್ಕಿದ್ದಕ್ಕೆ ಡಾಲಿ ಧನಂಜಯ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೇವಸ್ಥಾನಗಳ ತೆರವಿಗೆ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ; ಅನಧಿಕೃತ ಮಸೀದಿ ನಿರ್ಮಾಣ ತಪ್ಪು ಅನ್ನಿಸಲ್ವಾ? ಎಂದು ಪ್ರಶ್ನೆ
‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾಗೆ ಶಶಾಂಕ್ ಸೋಗಾಲ್ ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಶಿಶಿರ್ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್ ಭಾರದ್ವಾಜ್, ಆಶಿತ್ ಶ್ರೀವತ್ಸಾ, ಅಭಯ್, ಮಂಡ್ಯ ರಮೇಶ್, ಉಮೇಶ್, ಪ್ರೇರಣಾ ಮುಂತಾದ ಕಲಾವಿದರು ಇದರಲ್ಲಿ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.