”ಡಿಜಿಟಲ್, ಸ್ಯಾಟಲೈಟ್ ಎಂದು ದಾರಿ ತಪ್ಪದಿರಿ, ಸಿನಿಮಾ ನಿರ್ಮಾಣ ಕಷ್ಟ, ಮಲ್ಟಿಪ್ಲೆಕ್ಸ್ಗಳೇ ಬಾಗಿಲು ಹಾಕಿಕೊಳ್ಳುತ್ತಿವೆ”
K Manju: ಸ್ಯಾಂಡಲ್ವುಡ್ಗೆ ಹಲವು ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಆದರೆ ಅನುಭವಿ ನಿರ್ಮಾಪಕ ಕೆ ಮಂಜು, ಹೊಸ ನಿರ್ಮಾಪಕರಿಗೆ ಎಚ್ಚರಿಕೆ ನೀಡಿದ್ದು, ಸಿನಿಮಾ ನಿರ್ಮಾಣ ಸುಲಭವಲ್ಲ ಎಂದು ಉದಾಹರಣೆ ಸಹಿತ ವಿವರಿಸಿದ್ದಾರೆ.
ಡಿಜಿಟಲ್ ಹಕ್ಕು (Digital Rights), ಸ್ಯಾಟಲೈಟ್ ಹಕ್ಕು ಆಡಿಯೋ ಹಕ್ಕು, ಪ್ಯಾನ್ ಇಂಡಿಯಾ ಮಾದರಿ, ಡಬ್ಬಿಂಗ್ ಇನ್ನಿತರೆಗಳು ಬಂದ ಬಳಿಕ ಸಿನಿಮಾ ನಿರ್ಮಾಣ ಸುಲಭವಾಗಿದೆ. ಹಾಕಿದ ಹಣಕ್ಕೆ ಮೋಸವಾಗುತ್ತಿಲ್ಲ, ಕಂಟೆಂಟ್ ತುಸು ಗಟ್ಟಿಯಿದ್ದರೆ ಸಾಕು ಸಿನಿಮಾ ಲಾಭ ಮಾಡಿಕೊಡುತ್ತದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದ್ದವು. ಆದರೆ ಅವೆಲ್ಲ ಸುಳ್ಳು ಎಂದು ಕನ್ನಡ ಚಿತ್ರರಂಗದ ಯಶಸ್ವಿ, ಅನುಭವಿ ನಿರ್ಮಾಪಕ ಕೆ ಮಂಜು (K Manju) ತಳ್ಳಿ ಹಾಕಿದ್ದಾರೆ. ತಮ್ಮದೇ ನಿರ್ಮಾಣದ ರಾಜಾಹುಲಿ ಸಿನಿಮಾದ ಹೆಸರನ್ನೇ ಇರಿಸಿಕೊಂಡ ಹೊಸ ಕನ್ನಡ ಸಿನಿಮಾ ಮಿಸ್ಟರ್ ಆಂಡ್ ಮಿಸಸ್ ರಾಜಾಹುಲಿ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ನಿರ್ಮಾಪಕರಿಗೆ ಅದರಲ್ಲಿಯೂ ಹೊಸ ನಿರ್ಮಾಪಕರಿಗೆ ಎಚ್ಚರಿಕೆ ಹೇಳಿದರು.
ಸಿನಿಮಾ ನಿರ್ಮಾಣ ಎಂಬುದು ಬಹಳ ಕಷ್ಟ ಎಂದ ಕೆ ಮಂಜು, ಡಿಜಿಟಲ್ ಹಕ್ಕು, ಒಟಿಟಿ, ಸ್ಯಾಟಲೈಟ್ ರೈಟ್ಸ್, ಥಿಯೇಟರ್ ರೈಟ್ಸ್ ಎಂದೆಲ್ಲ ಹೊಸ ನಿರ್ಮಾಪಕರನ್ನು ದಾರಿ ತಪ್ಪಿಸಲಾಗುತ್ತಿದೆ ಆದರೆ ಅದೆಲ್ಲ ಸುಳ್ಳು, ಈ ಒಟಿಟಿಗಳೆಲ್ಲ ಯಾವುದೋ ಕೆಲವು ನಟರ, ಕೆಲವು ಸಂಸ್ಥೆಗಳ ಸಿನಿಮಾಗಳನ್ನು ಮಾತ್ರವೇ ಖರೀದಿ ಮಾಡುತ್ತಿವೆ. ಹಿಂದೆಂದಿಗಿಂತಲೂ ಸಿನಿಮಾ ನಿರ್ಮಾಣ ಎಂಬುದು ಬಹಳ ಕಷ್ಟವಾಗಿದೆ. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳೇ ಸಿನಿಮಾ ನಿರ್ಮಾಣ ಮಾಡಲಾಗದೆ ಬಾಗಿಲು ಹಾಕಿಕೊಳ್ಳುತ್ತಿವೆ ಎಂದಿದ್ದಾರೆ.
ಯಾವುದೋ ಕೆಲವು ನಟರ ಸಿನಿಮಾಗಳಷ್ಟೆ ಚಿತ್ರಮಂದಿರಗಳಲ್ಲಿ ಓಡುತ್ತಿವೆ. ಈಗಾಗಲೇ ನೂರೈವತ್ತಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚಿಹೋಗಿವೆ. ಮಲ್ಟಿಪ್ಲೆಕ್ಸ್ಗಳು ಮುಚ್ಚಿಹೋಗಿದ್ದು ಯಾರೂ ಕೇಳಿರಲಿಲ್ಲ, ಈಗ ನೋಡಿದರೆ ಮಲ್ಟಿಪ್ಲೆಕ್ಸ್ಗಳೇ ಬಾಗಿಲು ಹಾಕಿಕೊಳ್ಳುತ್ತಿವೆ. ಇಂಥಹಾ ಸಮಯದಲ್ಲಿ ಸಿನಿಮಾ ನಿರ್ಮಾಣ ಎಂಬುದು ಬಹಳ ಬಹಳ ಕಷ್ಟದ ಕೆಲಸವಾಗಿ ಪರಿಣಮಿಸಿದೆ ಎಂದರು ಕೆ ಮಂಜು.
ಇದನ್ನೂ ಓದಿ:ಕಾಶ್ಮೀರದಲ್ಲಿ ತೀವ್ರ ಚಳಿ: ಕನಿಷ್ಠ ತಾಪಮಾನಕ್ಕೆ ಮಂಜುಗಡ್ಡೆಯಂತಾದ ದಾಲ್ ಸರೋವರ
ಸಂಬಂಧಿಗಳಿಂದ ಹಣ ಸಾಲಪಡೆದು ಸಿನಿಮಾ ನಿರ್ಮಾಣ ಮಾಡಿರುವುದಾಗಿ ಮಿಸ್ಟರ್ ಆಂಡ್ ಮಿಸಸ್ ರಾಜಾಹುಲಿ ನಿರ್ಮಾಪಕ ಹೇಳಿದ್ದಕ್ಕೆ ಬೇಸರವ್ಯಕ್ತಪಡಿಸಿದ ಕೆ ಮಂಜು, ಸಂಬಂಧಿಕರಿಂದ ಹಣ ಪಡೆದು ಸಿನಿಮಾ ಮಾಡಿರುವುದು ಬಹಳ ಕಷ್ಟದ ಕೆಲಸ, ಖಂಡಿತ ನೀವು ಕಷ್ಟಕ್ಕೆ ಸಿಲುಕಿತ್ತೀರ. ದಯವಿಟ್ಟು ಹೊಸ ನಿರ್ಮಾಪಕರು ಹೀಗೆ ಮಾಡಬೇಡಿ. ಉದ್ಯಮದಲ್ಲಿರುವ ಹಳೆಯ ನಿರ್ಮಾಪಕರ ಈಗಿನ ಸ್ಥಿತಿ ಹೇಗಿದೆ ಎಂದು ನೋಡಿಕೊಳ್ಳಿ, 25ಕ್ಕೂ ಹೆಚ್ಚು ಸಿನಿಮಾ ನಿರ್ಮಾಣ ಮಾಡಿರುವ ಹಲವು ನಿರ್ಮಾಪಕರಿದ್ದಾರೆ ಅವರ ಈಗಿನ ಪರಿಸ್ಥಿತಿ ಹೇಗಿದೆ ಎಂದು ಒಮ್ಮೆ ನೋಡಿ ಅವಲೋಕನ ಮಾಡಿ ಆಮೇಲೆ ಇಂಡಸ್ಟ್ರಿಗೆ ಕಾಲಿಡಿ ಎಂದರು ಕೆ ಮಂಜು.
ಒಂದು ಸಿನಿಮಾ ಬಿಡುಗಡೆ ಮಾಡಲು ಸುಮಾರು 1.50 ಕೋಟಿ ಹಣ ಖರ್ಚಾಗುತ್ತದೆ. ಪ್ರಿಂಟ್, ಡಿಜಿಟಲ್ ಪ್ರಿಂಟ್, ಯುಎಫ್ಓ, ಕ್ಯೂಬ್, ಡಿಟಿಎಸ್, ಪೋಸ್ಟರ್, ಪ್ರಚಾರ ಇತರೆಗಳ ಖರ್ಚು ಕಡಿಮೆ ಇಲ್ಲ. ನೀವು (ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ) ಸಿನಿಮಾದ ಬಿಡುಗಡೆ ಬಹಳ ತಡ ಮಾಡಿಬಿಟ್ಟಿದ್ದೀರಿ, ಸಂಬಂಧಿಗಳಿಂದ ಹಣ ಪಡೆದು ಸಿನಿಮಾ ಮಾಡಿದ್ದೀರಿ, ನಿಮಗೆ ಒಳ್ಳೆಯದಾಗಲಿ ಎಂಬುದು ನನ್ನ ಹಾರೈಕೆ ಆದರೆ ಒಳ್ಳೆಯದಾಗುವುದು ಸುಲಭವಿಲ್ಲ ಎಂದು ಅನುಭವದ ನುಡಿ ನುಡಿದರು ಮಂಜು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Sun, 28 May 23