ಕರ್ನಾಟಕ ಬಂದ್ ದಿನ ಧ್ರುವ ಸರ್ಜಾ ಮನಸ್ಸಲ್ಲಿ ಇದ್ದ ನೋವು ಏನು? ಎಲ್ಲವನ್ನೂ ತೆರೆದಿಟ್ಟ ಪ್ರಥಮ್
ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’ ಸಿನಿಮಾದ ಸುದ್ದಿಗೋಷ್ಠಿ ಭಾನುವಾರ (ಅ.1) ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ಮೇಘನಾ ರಾಜ್, ಸುಂದರ್ ರಾಜ್, ಪ್ರಥಮ್ ಮುಂತಾದವರು ಹಾಜರಿ ಹಾಕಿದ್ದರು. ಈ ವೇಳೆ ಪ್ರಥಮ್ ಅವರು ಒಂದು ವಿಚಾರವನ್ನು ಬಹಿರಂಗಪಡಿಸಿದರು.
ನಟ ಧ್ರುವ ಸರ್ಜಾ (Dhruva Sarja) ಅವರು ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ನಲ್ಲಿ ಭಾಗಿ ಆಗಿದ್ದರು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ರೈತರಿಗೆ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಈ ಪ್ರತಿಭಟನೆಯಲ್ಲಿ ಇಡೀ ಕನ್ನಡ ಚಿತ್ರರಂಗ ಭಾಗಿ ಆಗಿತ್ತು. ಅಂದು ಧ್ರುವ ಸರ್ಜಾ ಅವರು ಮುನಿಸಿಕೊಂಡಿದ್ದರೇ ಎಂಬ ಅನುಮಾನ ಕೆಲವರಿಗೆ ಮೂಡಿದ್ದುಂಟು. ಬೇರೆ ನಟರ ಜೊತೆ ಅವರು ಹೆಚ್ಚು ಮಾತನಾಡದೇ ಇದ್ದಿದ್ದೇ ಅದಕ್ಕೆ ಕಾರಣ ಆಗಿತ್ತು. ಅಷ್ಟಕ್ಕೂ ಅಂದು ಧ್ರುವ ಸರ್ಜಾ ಸೈಲೆಂಟ್ ಆಗಿ ಇದ್ದಿದ್ದು ಯಾಕೆ ಎಂಬುದನ್ನು ನಟ ಪ್ರಥಮ್ (Pratham) ವಿವರಿಸಿದ್ದಾರೆ. ‘ರಾಜಮಾರ್ತಾಂಡ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ (Rajamarthanda Press meet) ಅವರು ಈ ವಿಚಾರ ಹಂಚಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’ ಸಿನಿಮಾದ ಸುದ್ದಿಗೋಷ್ಠಿ ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ಮೇಘನಾ ರಾಜ್, ಸುಂದರ್ ರಾಜ್, ಪ್ರಥಮ್ ಮುಂತಾದವರು ಹಾಜರಿ ಹಾಕಿದ್ದರು. ಈ ವೇಳೆ ಪ್ರಥಮ್ ಅವರು ಒಂದು ವಿಚಾರವನ್ನು ಬಹಿರಂಗಪಡಿಸಿದರು. ‘ಯಾರಿಗೂ ಗೊತ್ತಿಲ್ಲದ ಒಂದು ವಿಚಾರ ಹೇಳ್ತೀನಿ. ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ನಡೆಯಿತು. ಅದರ ಹಿಂದಿನ ದಿನ ಒಂದು ಘಟನೆ ನಡೆದಿತ್ತು. ಧ್ರುವ ಸರ್ಜಾ ಅವರ ಅಭಿಮಾನಿ ರಘುನಾಥ್ ರಸ್ತೆ ಅಪಘಾತದಲ್ಲಿ ನಿಧನನಾದ’ ಎಂದು ಪ್ರಥಮ್ ಹೇಳಿದ್ದಾರೆ.
ಅಣ್ಣನ ಕೊನೆಯ ಸಿನಿಮಾ ‘ರಾಜಮಾರ್ತಾಂಡ‘ ಬಗ್ಗೆ ಧ್ರುವ ಸರ್ಜಾ ಭಾವುಕ ಮಾತು
‘ರಘುನಾಥ್ ಒಬ್ಬ ಸಾಫ್ಟ್ವೇರ್ ಇಂಜಿನಿಯರ್. ಧ್ರುವ ಸರ್ಜಾ ನಟನೆಯ ಸಿನಿಮಾಗೆ ನಿರ್ದೇಶನ ಮಾಡಬೇಕು ಎಂಬುದು ರಘುನಾಥ್ ಕನಸಾಗಿತ್ತು. ಒಮ್ಮೆ ಧ್ರುವ ಅವರನ್ನು ಭೇಟಿ ಮಾಡಿ ಮಾತನಾಡಬೇಕು ಎಂದು ಕಾಯುತ್ತಿದ್ದ. ಅದನ್ನು ನಾನು ಧ್ರುವ ಅವರಿಗೂ ಹೇಳಿದ್ದೆ. ಆದರೆ ಒಮ್ಮೆಯೂ ಭೇಟಿ ಮಾಡಲು ಸಾಧ್ಯವಾಗದೇ ಆತ ನಿಧನನಾಗಿರುವ ವಿಷಯ ತಿಳಿದು ಧ್ರುವ ಅವರು ಖಿನ್ನತೆಗೆ ಜಾರಿದರು. ಅದು ಯಾರಿಗೂ ಗೊತ್ತಿಲ್ಲ. ರಘುನಾಥ್ ಅಂತ್ಯ ಸಂಸ್ಕಾರಕ್ಕೆ ನಾನು ಕೂಡ ಹೋಗೋಕೆ ಸಾಧ್ಯವಾಗಲಿಲ್ಲ’ ಎಂದಿದ್ದಾರೆ ಪ್ರಥಮ್.
‘ಈ ರೀತಿಯ ಹಲವು ನೋವುಗಳನ್ನು ನುಂಗಿಕೊಂಡು ಧ್ರುವ ಸರ್ಜಾ ಅವರು ಈ ವೇದಿಕೆಯಲ್ಲಿ ಕುಳಿತಿದ್ದಾರೆ. ಅವರಿಗೆ ಚೈತನ್ಯ ನೀಡಬೇಕು ಎಂದರೆ ಅಕ್ಟೋಬರ್ 6ರಂದು ರಾಜಮಾರ್ತಾಂಡ ಸಿನಿಮಾ ನೋಡಿ, ಆ ಚಿತ್ರವನ್ನು ಗೆಲ್ಲಿಸಿ. ಆ ಮೂಲಕ ಅವರಿಗೆ ಒಂದು ಶಕ್ತಿಯಾಗಿ ನಿಂತುಕೊಳ್ಳಿ. ಅದರಿಂದ ನಿರ್ಮಾಪಕರು ನಗಲು ಸಾಧ್ಯವಾಗುತ್ತದೆ. ಈ ಸಿನಿಮಾ ಗೆದ್ದರೆ ಮೇಘನಾ ರಾಜ್ ಅವರಿಗೆ ಉತ್ತೇಜನ ಸಿಗುತ್ತದೆ. ರಾಯನ್ ಭವಿಷ್ಯಕ್ಕೆ ಒಂದು ದೊಡ್ಡ ಶಕ್ತಿ ಆಗುತ್ತದೆ. ಸುಂದರ್ ರಾಜ್ ಅವರಿಗೆ ಸ್ಫೂರ್ತಿ ಸಿಗುತ್ತದೆ’ ಎಂದು ಪ್ರಥಮ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.