ಕನ್ನಡ ಚಿತ್ರರಂಗ (Sandalwood) ಕಂಡ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ನಟಿಯರಲ್ಲಿ ಪ್ರೇಮಾ (Prema) ಸಹ ಒಬ್ಬರು. ವೃತ್ತಿ ಜೀವನದಲ್ಲಿ ಔನ್ಯತ್ತದಲ್ಲಿದ್ದಾಗಲೇ ಮದುವೆಯಾಗಿ ಆ ನಂತರ ಚಿತ್ರರಂಗದಿಂದಲೂ ದೂರಾಗಿ, ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಏರು-ಪೇರು ಅನುಭವಿಸಿದರು. ಅವರ ಅನಾರೋಗ್ಯದ ಬಗ್ಗೆಯೂ ಗಟ್ಟಿಯಾಗಿ ಸುದ್ದಿಯಾಗಿತ್ತು. ಇದೀಗ ಮತ್ತೆ ಸಾಮಾಜಿಕ ಜೀವನಕ್ಕೆ ಮರಳಿರುವ ನಟಿ ಪ್ರೇಮಾ, ತೆಲಗು ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಜೀವನದಲ್ಲಿ ಎದುರಿಸಿದ ಸಮಸ್ಯೆಗಳು ಹಾಗೂ ಅವುಗಳ ವಿರುದ್ಧ ಹೋರಾಡಿದ ರೀತಿಯನ್ನು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಮದುವೆಯ (Marriage) ಬಗ್ಗೆಯೂ ಪ್ರೇಮಾ ಮಾತನಾಡಿದ್ದಾರೆ.
2006 ರಲ್ಲಿ ಜೀವನ್ ಅಪ್ಪಚ್ಚು ಎಂಬುವರನ್ನು ವಿವಾಹವಾದ ಪ್ರೇಮಾ ಆ ಬಳಿಕ ಅವರಿಂದ ವಿಚ್ಛೇದನ ಪಡೆದುಕೊಂಡರು. ವೈವಾಹಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ ಪ್ರೇಮಾ, ಖಿನ್ನತೆಗೆ ಸಹ ಒಳಗಾದರು. ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡುತ್ತಾ, ”ಮದುವೆ ಎಂಬುದು ಬೇಕು, ಯಾರಾದರೂ ಒಳ್ಳೆಯ ವ್ಯಕ್ತಿ ಸಿಕ್ಕರೆ ಖಂಡಿತ ಮದುವೆ ಆಗುತ್ತೀನಿ. 70ರ ವಯಸ್ಸಿನಲ್ಲಿ ಸಹ ಮದುವೆಯಾಗುವವರು ಇದ್ದಾರೆ. ನಾನ್ಯಾಕೆ ಆಗಬಾರದು. ಅಲ್ಲದೆ ಇದು ನನ್ನ ಬದುಕು, ನನಗೆ ಇಷ್ಟವಾದರೆ ಖಂಡಿತ ಮದುವೆಯಾಗುತ್ತೀನಿ” ಎಂದಿದ್ದಾರೆ.
ಅನಾರೋಗ್ಯದ ಬಗ್ಗೆ ಮಾತನಾಡಿದ ನಟಿ ಪ್ರೇಮಾ, ನಾನು ಖಿನ್ನತೆಗೆ ಒಳಗಾಗಿದ್ದೆ ಎಂಬುದು ನಿಜ ಆದರೆ ನನಗೆ ಪ್ರಾಣಾಂತಿಕ ಕಾಯಿಲೆ ಇದೆ, ನಾನು ಕ್ಯಾನ್ಸರ್ನಿಂದ ಬಳಲುತ್ತಿದ್ದೇನೆ ಎಂದೆಲ್ಲ ಸುಳ್ಳು ಸುದ್ದಿ ಹರಡಿದ್ದರು. ಅಸಲಿಗೆ ನಾನು ಕೆಲ ಕಾಲ ಆಸ್ಟ್ರೇಲಿಯಾಕ್ಕೆ ತೆರಳಿದ್ದೆ ಅಲ್ಲಿ ನನ್ನ ಗೆಳತಿಯೊಟ್ಟಿಗೆ ಸಮಯ ಕಳೆದೆ ಅಲ್ಲಿಯೇ ಕೆಲವು ಧ್ಯಾನ, ಯೋಗ ಕೇಂದ್ರಗಳಿಗೆ ಹೋಗುತ್ತಿದ್ದೆ ಅದನ್ನೇ ಆಧಾರವಾಗಿರಿಸಿ ಇಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಿದರು. ಆದರೆ ಅವೆಲ್ಲವೂ ನನ್ನನ್ನು ಇನ್ನಷ್ಟು ಗಟ್ಟಿಯನ್ನಾಗಿಸಿತು ಎಂದಿದ್ದಾರೆ ಪ್ರೇಮಾ.
ಇದನ್ನೂ ಓದಿ: Prema: 2ನೇ ಮದುವೆ ಗಾಸಿಪ್ಗೆ ಪ್ರೇಮಾ ಪ್ರತಿಕ್ರಿಯೆ; ಕೊರಗಜ್ಜನ ದೇವಸ್ಥಾನಕ್ಕೆ ತೆರಳಿದ್ದರ ಬಗ್ಗೆ ನಟಿ ಮಾತು
ಅವರವರ ಜೀವನ ಅವರವರ ಕೈಯಲ್ಲಿಯೇ ಇರುತ್ತದೆ. ಯಾವುದೇ ಸನ್ನಿವೇಶ, ಸಂಬಂಧ ಇಷ್ಟವಾಗುತ್ತಿಲ್ಲವೆಂದರೆ ಅದರಿಂದ ಹೊರಗೆ ಬರುವುದು ಸಹ ಅವರ ಕೈಯಲ್ಲಿಯೇ ಇರುತ್ತದೆ. ನಾನು ಸಹ ಬಹಳ ಕಷ್ಟಪಟ್ಟೆ, ಬಹಳ ನೊಂದೆ, ಭಾವುಕಳಾಗಿಬಿಡುತ್ತಿದ್ದೆ. ಆದರೆ ಕೊನೆಗೆ ನಿಶ್ಚಯಿಸಿ ವಿಚ್ಛೇದನ ಪಡೆದುಕೊಂಡೆ. ನನ್ನ ತಂದೆ-ತಾಯಿಗೆ ಹೇಳಿದೆ ಇದು ನನ್ನ ನಿರ್ಣಯ ಹಾಗಾಗಿ ನಾನೇ ಓಡಾಡಿ ಇದನ್ನು ಮುಗಿಸುತ್ತೇನೆಂದು ಹೇಳಿ ಪ್ರತಿದಿನವೂ ನಾನೇ ನ್ಯಾಯಾಲಯಕ್ಕೆ ಹೋಗುತ್ತಿದ್ದೆ ಅದಕ್ಕೊಂದು ಪೂರ್ಣ ವಿರಾಮ ಹಾಕಿ ಬಂದೆ ಎಂದು ವಿಚ್ಛೇದನದ ಬಗ್ಗೆ ಹೇಳಿದರು ಪ್ರೇಮಾ.
ಇದೀಗ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಳ್ಳುತ್ತಿರುವ ಪ್ರೇಮಾ, 2017 ರಲ್ಲಿ ಉಪೇಂದ್ರ ಮತ್ತೆ ಬಾ ಸಿನಿಮಾದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ 2022 ರಲ್ಲಿ ಬಿಡುಗಡೆ ಆದ ವೆಡ್ಡಿಂಗ್ ಗಿಫ್ಟ್ ಹೆಸರಿನ ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ಪ್ರೇಮಾ ನಟಿಸಿಲ್ಲ. ಇತ್ತೀಚೆಗಷ್ಟೆ ಬಿಜೆಪಿ ಸಚಿವ ಬಿಸಿ ಪಾಟೀಲ್ ಪರವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ