ಟೀಚರಮ್ಮ ಪ್ರೇಮಾರನ್ನು ಮತಯಾಚನೆಗೆ ಕರೆತಂದ ‘ಕೌರವ’ ಬಿಸಿ ಪಾಟೀಲ್
ಕೌರವ ಅಲಿಯಾಸ್ ಸಚಿವ ಬಿಸಿ ಪಾಟೀಲ್ ಮತ್ತೊಂದು ಚುನಾವಣೆ ಎದುರಿಸಲು ಸಜ್ಜಾಗಿದ್ದು, ತಮ್ಮ ಕ್ಷೆತ್ರ ಹಿರೇಕೆರೂರಿಗೆ 'ಟೀಚರಮ್ಮ'ನನ್ನು ಕರೆತಂದಿದ್ದಾರೆ.
ಚಿತ್ರರಂಗದಲ್ಲಿ (Sandalwood) ಮಿಂಚಿ ಬಳಿಕ ರಾಜಕೀಯದಲ್ಲಿಯೂ ಯಶಸ್ಸು ಗಳಿಸಿದ ಕೆಲವರಲ್ಲಿ ಬಿ.ಸಿ.ಪಾಟೀಲ್ (BC Patil) ಸಹ ಒಬ್ಬರು. 2004 ರಲ್ಲಿ ಜನತಾ ದಳದಿಂದ ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಬಿಸಿ ಪಾಟೀಲ್ ಆ ಬಳಿಕ ಕಾಂಗ್ರೆಸ್ ಸೇರಿ ಅದೇ ಕ್ಷೇತ್ರದಿಂದ ಗೆದ್ದರು. 2013 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸೋತರು. 2018 ರಲ್ಲಿ ಕಾಂಗ್ರೆಸ್ನಿಂದಲೇ ಸ್ಪರ್ಧಿಸಿ ಗೆದ್ದರಾದರೂ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿ ಸಚಿವರೂ ಆದರು. ಇದೀಗ ಮತ್ತೊಂದು ಚುನಾವಣೆ (Karnataka Assembly Election 2023) ಎದುರಿಸಲು ಸಜ್ಜಾಗಿದ್ದಾರೆ.
ವಿಧಾನಸಭೆ ಚುನಾವಣೆಗೆ ಹಿರೇಕೆರೂರು (Hirekeruru) ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಹುತೇಕ ಬಿ.ಸಿ.ಪಾಟೀಲ್ ಅವರಿಗೆ ಖಾತ್ರಿಯಾಗಿದ್ದು, ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದಾರೆ ಬಿ.ಸಿ.ಪಾಟೀಲ್. ಸಿನಿಮಾ ರಂಗದಲ್ಲಿಯೂ ಸಾಕಷ್ಟು ಪರಿಚಯವುಳ್ಳ ಬಿ.ಸಿ.ಪಾಟೀಲ್ ಪ್ರಚಾರಕ್ಕೆ ಚಿತ್ರರಂಗದ ತಾರೆಗಳನ್ನು ಕರೆತಂದಿದ್ದಾರೆ. ಬಿ.ಸಿ.ಪಾಟೀಲ್ಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಕೊಟ್ಟು ಜೀವನಕ್ಕೆ ತಿರುವು ಕೊಟ್ಟ ಸಿನಿಮಾ ಆಗಿರುವ ಕೌರವ ಸಿನಿಮಾದ ನಾಯಕಿ ಪ್ರೇಮಾ (Prema) ಅವರನ್ನು ಬಿ.ಸಿ.ಪಾಟೀಲ್ ಇಂದು ಪ್ರಚಾರಕ್ಕೆ ಕರೆತಂದಿದ್ದರು. ಜೊತೆಗೆ ನಟಿ ಶ್ರುತಿ ಸಹ ಇದ್ದರು.
ಕೇಸರಿ ಮಹಿಳಾ ಬ್ರಿಗೇಡ್ನ ಮಹಾಸಂಗಮ ಕಾರ್ಯಕ್ರಮವನ್ನು ಇಂದು ಹಿರೇಕೆರೂರಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ನಟಿ ಪ್ರೇಮಾ ಹಾಗೂ ನಟಿ ಶ್ರುತಿ ಅವರುಗಳು ಬಿಸಿ ಪಾಟೀಲ್ ಆಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಿಜೆಪಿ ಶಾಲು ಧರಿಸಿ ಬಿಸಿ ಪಾಟೀಲ್ಗೆ ಬೆಂಬಲ ನೀಡಿದ್ದು ಮಾತ್ರವಲ್ಲದೆ ಅವರ ಪರವಾಗಿ ಮತಯಾಚನೆಯನ್ನೂ ಮಾಡಿದರು.
ನಟಿ ಪ್ರೇಮಾ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಸಿ ಪಾಟೀಲ್, ”ನನ್ನ ಜೀವನದಲ್ಲಿ ತಿರುವು ಕೊಟ್ಟಂಥಹಾ ಸಿನಿಮಾ ಕೌರವ. ಆ ಸಿನಿಮಾದಲ್ಲಿ ಟೀಚರಮ್ಮ ಪಾತ್ರದಲ್ಲಿ ಪ್ರೇಮಾ ನಟಿಸಿದ್ದರು. ನೀವೆಲ್ಲ ಸಿನಿಮಾ ನೋಡಿದ್ದೇರೆಂದು ಭಾವಿಸಿದ್ದೇನೆ. ಟೀಚರಮ್ಮನನ್ನು ನಿಮಗೆ ತೋರಿಸಬೇಕೆಂದು ಅವರನ್ನು ಕರೆದುಕೊಂಡು ಬಂದಿದ್ದೇನೆ. ಅವರು ಆ ಸಿನಿಮಾದಲ್ಲಿ ನಟಿಸಿದ್ದು ನನ್ನ ಪುಣ್ಯ. ಆಗ ಅವರು ಬಹಳ ದೊಡ್ಡ ನಟಿಯಾಗಿದ್ದರು. ನಾನು ವಿಲನ್ ಆಗಿದ್ದವನು ಹೀರೋ ಆಗಲು ಹೊರಟಿದ್ದೆ. ಮಹೇಂದ್ರ ಅವರು ಅವರ ಮನೆಗೆ ಹೋಗಿ ಕತೆ ಹೇಳಿ, ಪ್ರೇಮಾ ಅವರು ನಟಿಸುತ್ತೇನೆ ಎಂದಾಗ ನನಗೆ ಬಹಳ ಖುಷಿಯಾಗಿತ್ತು. ಅವರೊಬ್ಬ ಅದ್ಭುತ ನಟಿ, ಇಂದು ನಮ್ಮ ಆಹ್ವಾನದ ಮೇರೆಗೆ ಇಲ್ಲಿಗೆ ಆಗಮಿಸಿದ್ದಾರೆ” ಎಂದರು.
ನಟಿ ಶ್ರುತಿ ಬಗ್ಗೆಯೂ ಚುಟುಕಾಗಿ ಮಾತನಾಡಿದ ಬಿಸಿ ಪಾಟೀಲ್, ”ಬೆಂಗಳೂರಿನಿಂದ ಆಗಮಿಸಿ ನಿಮ್ಮನ್ನುದ್ದೇಶಿಸಿ ಮಾತನಾಡಿ, ಮಂತ್ರಮುಗ್ಧರನ್ನಾಗಿ ಮಾಡಿ, ಬಿಜೆಪಿಯ ಮಹತ್ವ, ಮಹಿಳೆಯರ ಸ್ವಾಭಿಮಾನದ ಬಗ್ಗೆ ಶ್ರುತಿ ಅವರು ಮಾತನಾಡಿದ್ದಾರೆ ಅವರಿಗೆ ಧನ್ಯವಾದ” ಎಂದರು ಬಿ.ಸಿ.ಪಾಟೀಲ್.
ಇದನ್ನೂ ಓದಿ: ‘ಓಂ ಸಿನಿಮಾ ಟೈಮ್ನಲ್ಲಿ ನನಗೆ ಬೈಯ್ಯುತ್ತಿದ್ರು’; ಆ ದಿನಗಳನ್ನು ಮೆಲುಕು ಹಾಕಿದ ನಟಿ ಪ್ರೇಮಾ
ಪೊಲೀಸ್ ಇಲಾಖೆ ಕೆಲಸ ತ್ಯಜಿಸಿ ಸಿನಿಮಾಗಳಿಗೆ ಬಂದ ಬಿ.ಸಿ.ಪಾಟೀಲ್ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುತ್ತಿದ್ದರು. ಅವರು ನಾಯಕರಾಗಿ ನಟಿಸಿದ ಕೌರವ ಸಿನಿಮಾ ಬಹುದೊಡ್ಡ ಹಿಟ್ ಆಯಿತು. ಆ ಸಿನಿಮಾ ಅವರ ಮುಂದಿನ ಜೀವನಕ್ಕೆ ಬಹುದೊಡ್ಡ ತಿರುವು ನೀಡಿತು. ಆ ಸಿನಿಮಾದ ಹಾಡುಗಳು ಇಂದಿಗೂ ಬಹಳ ಜನಪ್ರಿಯ. ಆ ಸಿನಿಮಾದ ಬಳಿಕ ಬಿ.ಸಿ.ಪಾಟೀಲ್ ಅವರನ್ನು ಕೌರವ ಎಂದೇ ಗುರುತಿಸುವಂತಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ