‘ಫ್ಯಾಮಿಲಿ ಮ್ಯಾನ್’ ಸೀರೀಸ್ ಮುಖಾಂತರ ದೇಶದೆಲ್ಲೆಡೆ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಮಣಿ, ‘ಡಿಆರ್56’ ಚಿತ್ರದ ಮುಖಾಂತರ ಕನ್ನಡಕ್ಕೆ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿರುವ ಪಿಆರ್ (ಪ್ರವೀಣ್ ರೆಡ್ಡಿ ಟಿ) ಜನ್ಮ ದಿನದ ಅಂಗವಾಗಿ ಚಿತ್ರತಂಡ ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿದೆ. ಕುತೂಹಲಕಾರಿಯಾಗಿರುವ ಟೀಸರ್ನಲ್ಲಿ ಪ್ರಿಯಾಮಣಿ ತನಿಖಾಧಿಕಾರಿಯಾಗಿ ಅಬ್ಬರಿಸಿದ್ದು, ಸಖತ್ ಖಡಕ್ ಡೈಲಾಗ್ಗಳ ಮೂಲಕ ಗಮನ ಸೆಳೆದಿದ್ದಾರೆ. ಪಿಆರ್ ಭರವಸೆ ಮೂಡಿಸಿದ್ದಾರೆ. ಸಸ್ಪೆನ್ಸ್, ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಇದರೊಂದಿಗೆ ಕತೆಯು ಸೈನ್ಸ್ ಫಿಕ್ಷನ್ ಮಾದರಿಯಲ್ಲಿದೆ. ಈ ಮೂಲಕ ಕನ್ನಡಕ್ಕೆ ಹೊಸ ಮಾದರಿಯ ಚಿತ್ರದ ಪರಿಚಯವಾಗುತ್ತಿದೆ. ವಿಶೇಷವೆಂದರೆ ಈ ಚಿತ್ರ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದ್ದು, ಎರಡೂ ಭಾಷೆಗಳಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ.
2019ರಲ್ಲಿ ತೆರೆಕಂಡಿದ್ದ ‘ನನ್ನ ಪ್ರಕಾರ’ ಚಿತ್ರದ ನಂತರ ಪ್ರಿಯಾಮಣಿ ಕನ್ನಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಡಿಆರ್56ನಲ್ಲಿ ಮಾಸ್ ಅವತಾರ ತೊಟ್ಟಿರುವ ಪ್ರಿಯಾಮಣಿ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಪಿಆರ್ (ಪ್ರವೀಣ್ ರೆಡ್ಡಿ ಟಿ) ಅವರೇ ಹೊತ್ತುಕೊಂಡಿದ್ದಾರೆ. ಹರಿಹರ ಪಿಚ್ಚರ್ಸ್ ಬ್ಯಾನರ್ನಲ್ಲಿ ಚಿತ್ರ ಮೂಡಿಬರುತ್ತಿದೆ.
ಡಿಆರ್56 ಚಿತ್ರಕ್ಕೆ ರಾಜೇಶ್ ಆನಂದ್ಲೀಲ ಆಕ್ಷನ್ ಕಟ್ ಹೇಳಿದ್ದಾರೆ. ರಮೇಶ್ ಭಟ್, ದೀಪಕ್ ಶೆಟ್ಟಿ, ಯತಿರಾಜ್, ವೀಣಾ ಪೊನ್ನಪ್ಪ ಮೊದಲಾದವರು ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಕ್ಕೆ ನಾಬಿನ್ ಪೌಲ್ ಸಂಗೀತವಿದ್ದು, ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಮಾಡಿದ್ದಾರೆ. ಹಾಡುಗಳಿಗೆ ಡಾ.ವಿ ನಾಗೇಂದ್ರ ಪ್ರಸಾದ್ ಹಾಗೂ ವಿಜಯ್ ಈಶ್ವರ್ ಸಾಹಿತ್ಯ ರಚಿಸಿದ್ದಾರೆ.
ಪ್ರಿಯಾಮಣಿ ಈ ಚಿತ್ರವಲ್ಲದೇ ಇನ್ನೂ ಎರಡು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರೀಕರಣದ ಕೆಲಸಗಳು ಸಾಗುತ್ತಿವೆ. ಇವುಗಳಲ್ಲದೇ ಎರಡು ತೆಲುಗು ಚಿತ್ರಗಳು, ಎರಡು ಹಿಂದಿ ಚಿತ್ರಗಳು ಹಾಗೂ ಒಂದು ತಮಿಳು ಚಿತ್ರದಲ್ಲಿ ಪ್ರಿಯಾಮಣಿ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಾಗೂ ಬಾಲಿವುಡ್ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕಿರುತೆರೆ ಶೋಗಳಲ್ಲಿ ನಿರ್ಣಾಯಕಿಯಾಗಿ ಹಾಗೂ ವೆಬ್ ಸೀರೀಸ್ಗಳಲ್ಲೂ ಅವರು ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ:
ಫಿಟ್ನೆಸ್ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ? ಕೇಸ್ ದಾಖಲು
Rajkummar Rao: ನಿಶ್ಚಿತಾರ್ಥ ಮಾಡಿಕೊಂಡ ಬಾಲಿವುಡ್ ಪ್ರೇಮ ಪಕ್ಷಿಗಳು; ಸುಂದರ ಕ್ಷಣದ ವಿಡಿಯೋ ಇಲ್ಲಿದೆ