ಮಗಳಿಗಾಗಿ ಪತ್ನಿಯನ್ನು ಅಪಹರಿಸಿದ ನಿರ್ಮಾಪಕ: ಏನಿದು ಪ್ರಕರಣ?

Producer Harshawardhan: ನಿರ್ಮಾಪಕನೋರ್ವ ತನ್ನ ಮಗಳಿಗಾಗಿ ತನ್ನ ಪತ್ನಿಯನ್ನೇ ಅಪಹರಣ ಮಾಡಿರುವ ಘಟನೆ ನಡೆದಿದೆ. ಪ್ರಕರಣ ಬ್ಯಾಟರಾಯನಪುರ ಪೊಲೀಸ್ ಠಾಣೆ ಏರಿದ್ದು ಆರೋಪಿಯ ವಿಚಾರಣೆಯನ್ನು ಪೊಲೀಸರು ಮಾಡಿದ್ದಾರೆ. ಏನಿದು ಪ್ರಕರಣ? ಯಾರು ಈ ನಿರ್ಮಾಪಕ ಹರ್ಷವರ್ಧನ್? ಅಪಹರಣ ಮಾಡಿದ್ದೇಕೆ? ಇಲ್ಲಿದೆ ಪೂರ್ಣ ಮಾಹಿತಿ...

ಮಗಳಿಗಾಗಿ ಪತ್ನಿಯನ್ನು ಅಪಹರಿಸಿದ ನಿರ್ಮಾಪಕ: ಏನಿದು ಪ್ರಕರಣ?
Harshavardhan

Updated on: Dec 16, 2025 | 5:42 PM

ಸಿನಿಮಾ (Cinema) ನಿರ್ಮಾಪಕ, ನಟನೊಬ್ಬ, ತನ್ನ ಮಗಳಿಗಾಗಿ ಪತ್ನಿಯನ್ನೇ ಅಪಹರಿಸಿ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿನಿಮಾ ನಿರ್ಮಾಣ ಮಾಡಿ, ನಟನೆಯನ್ನೂ ಮಾಡಿರುವ ಹರ್ಷವರ್ಧನ್ ಎಂಬುವರು ಪತ್ನಿಯನ್ನೇ ಅಪಹರಿಸಿ ಬಳಿಕ ಅವರನ್ನು ಮನೆಯವರಿಗೆ ಒಪ್ಪಿಸಿದ್ದಾರೆ. ಆದರೆ ಹೀಗೆ ಪತ್ನಿಯನ್ನೇ ಅಪಹರಿಸಲು ಅವರ ಮಗಳೇ ಕಾರಣ. ಇದೀಗ ಪತಿ-ಪತ್ನಿ ಇಬ್ಬರೂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಇದು ಕೌಟುಂಬಿಕ ವಿಷಯ, ತಾವು ಇದನ್ನು ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಆಗಿದ್ದಿಷ್ಟು, ಹರ್ಷವರ್ಧನ್, ವರ್ಧನ್ ಸಿನಿಮಾಸ್ ಕಂಪೆನಿ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿದ್ದು, ‘ನಿನ್ನಲ್ಲೇನೋ ಹೇಳಬೇಕು’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾನಲ್ಲಿ ಚೈತ್ರಾ ಎಂಬುವರು ನಟಿಸಿದ್ದರು. ಬಳಿಕ ಅವರಿಬ್ಬರೇ ಪ್ರೀತಿಸಿ ಮದುವೆ ಸಹ ಆಗಿದ್ದಾರೆ. ಇಬ್ಬರಿಗೂ ಹೆಣ್ಣು ಮಗು ಸಹ ಇದೆ. ಆದರೆ ಕೌಟುಂಬಿಕ ಕಲಹಗಳಿಂದಾಗಿ ಹರ್ಷವರ್ಧನ್ ಮತ್ತು ಚೈತ್ರಾ ಇಬ್ಬರೂ ದೂರಾಗಿದ್ದು, ಮಗು, ಚೈತ್ರಾ ಅವರ ಜೊತೆಗೆ ಇದೆ.

ಮಗಳನ್ನು ನೋಡಲು ಪತ್ನಿ ಅವಕಾಶ ಮಾಡಿಕೊಡುತ್ತಿರಲಿಲ್ಲವಂತೆ. ಇದರಿಂದ ಬೇಸರಗೊಂಡ ಹರ್ಷವರ್ಧನ್, ತನ್ನ ಗೆಳೆಯನೊಟ್ಟಿಗೆ ಸೇರಿಕೊಂಡು ಪತ್ನಿಯನ್ನೇ ಅಪಹರಿಸಿದ್ದಾರೆ. ಗೆಳೆಯನ ಮೂಲಕ, ಶೂಟಿಂಗ್ ಇದೆಯೆಂದು ಹೇಳಿ ಚೈತ್ರಾ ಅವರಿಗೆ 20 ಸಾವಿರ ರೂಪಾಯಿ ಅಡ್ವಾನ್ಸ್ ಕೊಡಿಸಿ, ಮೈಸೂರಿಗೆ ಶೂಟಿಂಗ್​​ಗೆ ಎಂದು ಕರೆಸಿಕೊಂಡಿದ್ದಾರೆ. ಬಳಿಕ ಪತ್ನಿಯನ್ನು ಅಪಹರಣ ಮಾಡಿ, ಚೈತ್ರಾ ಅವರ ತಾಯಿಗೆ ಕರೆ ಮಾಡಿ, ‘ನಿಮ್ಮ ಮಗಳನ್ನು ಅಪಹರಣ ಮಾಡಿದ್ದೇನೆ, ನನ್ನ ಮಗಳನ್ನು ಕಳಿಸಿದರೆ ನಾನು ನಿಮ್ಮ ಮಗಳನ್ನು ಬಿಟ್ಟು ಕಳಿಸುತ್ತೀನಿ’ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ:ಕನ್ನಡ ಸಿನಿಮಾ ಟೀಕಿಸಲು ಬಂದ ಸಂದರ್ಶಕನಿಗೆ ಉಪೇಂದ್ರ ಖಡಕ್ ಉತ್ತರ

ಕೂಡಲೇ ಚೈತ್ರಾ ಅವರ ಸಹೋದರಿ, ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ತಿಳಿಸಿ, ದೂರು ನೀಡಿದ್ದಾರೆ. ಬಳಿಕ ಹರ್ಷವರ್ಧನ್ ಅವರೇ ಪತ್ನಿಯನ್ನು ಕರೆದುಕೊಂಡು ಬಂದು ಅವರ ಕುಟುಂಬದವರಿಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿ, ‘ಇದು ಕೌಟುಂಬಿಕ ವಿಷಯ ನಾವು ಇದನ್ನು ಬಗೆಹರಿಸಿಕೊಳ್ಳುತ್ತೇವೆ’ ಎಂದು ಪೊಲೀಸರ ಮುಂದೆ ಚೈತ್ರಾ ಮತ್ತು ಹರ್ಷವರ್ಧನ್ ಹೇಳಿದ್ದಾರೆ. ಪೊಲೀಸರು, ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕೆಂದು ಹೇಳಿ ಹರ್ಷವರ್ಧನ್ ಅನ್ನು ಬಿಟ್ಟು ಕಳಿಸಿದ್ದಾರೆ.

ತನ್ನ ಮಗಳ ಮುಖ ನೋಡಲು ಅವಕಾಶ ಮಾಡಿಕೊಟ್ಟಿರಲಿಲ್ಲ, ಮಗುವಿನ ಜೊತೆ ಮಾತನಾಡಲು ಸಹ ಅವಕಾಶ ಮಾಡಿಕೊಡುತ್ತಿರಲಿಲ್ಲ ಪದೇ ಪದೇ ಕೇಳಿಕೊಂಡರೂ ಸಹ ಮಗುವಿನ ಮುಖ ತೋರಿಸುತ್ತಿರಲಿಲ್ಲ ಹಾಗಾಗಿ ನಾನು ಹೀಗೆ ಮಾಡಿದೆ ಎಂದು ಪೊಲೀಸರ ಎದುರು ಹರ್ಷವರ್ಧನ್ ಹೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:40 pm, Tue, 16 December 25