ನಟ ಕಿಚ್ಚ ಸುದೀಪ್ (Sudeep) ಇಂದು (ಜುಲೈ 15) ತಮ್ಮ ವಿರುದ್ಧ ಆರೋಪ ಮಾಡಿರುವ ಎಂಎನ್ ಕುಮಾರ್ ಹಾಗೂ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅದರ ಬೆನ್ನಲ್ಲೆ, ನಿರ್ಮಾಪಕರ ಕುಮಾರ್ (Producer NM Kumar) ತಮ್ಮ ವರಸೆ ಬದಲಿಸಿದಂತಿದ್ದಾರೆ. ಇಂದು ಫಿಲಂ ಚೇಂಬರ್ನಲ್ಲಿ (Film Chamber) ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಕುಮಾರ್, ಮಾಧ್ಯಮಗಳೊಟ್ಟಿಗೆ ಮಾತನಾಡಿ, ”ನಾನು ಸುದೀಪ್ ವಿರುದ್ಧ ದೂರು ನೀಡಿಲ್ಲ, ಯಾವುದೇ ಆರೋಪ ಮಾಡಿಲ್ಲ” ಎಂದಿದ್ದಾರೆ.
”ನಟ ಕಿಚ್ಚ ಸುದೀಪ್ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿಲ್ಲ, ನಾನು ನೀಡಿರುವುದು ಮನವಿಪತ್ರವಷ್ಟೇ, ಯಾವುದೇ ದೂರು ನೀಡಿಲ್ಲ, ಸಮಸ್ಯೆ ಬಗೆಹರಿಸಿಕೊಳ್ಳಲು ಸುದೀಪ್ ಅವರನ್ನು ಹುಡುಕಿಕೊಂಡು ಹೋದರೆ ಇಲ್ಲವೆಂದು ಹೇಳುವಂತೆ ಸಹಾಕರಿಗೆ ತಿಳಿಸುತ್ತಿದ್ದರು. ಸುದೀಪ್ರ ಮ್ಯಾನೇಜರ್ ನನಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ, ಹಾಗಾಗಿ ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿಪತ್ರ ನೀಡಿದೆ” ಎಂದಿದ್ದಾರೆ ಕುಮಾರ್.
”ನಾನು ಚಿತ್ರರಂಗಕ್ಕೆ ಬಂದು 40 ವರ್ಷವಾಗಿದೆ, ಸಾಕಷ್ಟು ಅನುಭವವಿದೆ, ಕಲಾವಿದರಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ದೇವಸ್ಥಾನವಿದ್ದಂತೆ, ವಾಣಿಜ್ಯ ಮಂಡಳಿಗೆ ಬಂದು ಮಾತನಾಡಿ ಎಂದು ಸುದೀಪ್ಗೆ ಮನವಿ ಮಾಡಿದ್ದೆವು, ನಟ ಸುದೀಪ್ರಿಂದ ಯಾವುದೇ ಸಹಾಯಧನ ಕೇಳಿಲ್ಲ. ನಿರ್ಮಾಪಕರು ಅಂದರೆ ಹತ್ತಾರು ಜನರಿಗೆ ಕೆಲಸ ಕೊಡುವವರು, ಕೋರ್ಟ್ ನೋಟಿಸ್ ಬಂದರೆ ಫಿಲ್ಮ್ ಚೇಂಬರ್ಗೆ ತಂದು ಕೊಡುತ್ತೇನೆ, ವಾಣಿಜ್ಯ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಹೇಳಿದಂತೆ ನಡೆಯುವೆ” ಎಂದಿದ್ದಾರೆ.
ಇದನ್ನೂ ಓದಿ:ಬಾಯಿದೆ ಅಂತ ಏನೇನೋ ಮಾಡಾಬರಾದು, ಎಲ್ಲವನ್ನೂ ನ್ಯಾಯಾಲಯ ನೋಡಿಕೊಳ್ಳಲಿದೆ: ಸುದೀಪ್
”ಸುದೀಪ್ ನ್ಯಾಯಲಯಕ್ಕೆ ಹೋಗಿದ್ದಾರೆ ಎಂದು ಮಾಧ್ಯಮಗಳಿಂದ ತಿಳಿಯಿತು, ನೋಟಿಸ್ ಬರೋವರೆಗು ಆ ಬಗ್ಗೆ ಮಾತನಾಡಲ್ಲ, ನಾನು ಅವರ ಬಗ್ಗೆ ಆರೋಪ ಮಾಡಿಲ್ಲ, ಅವರು ಸಿಗೋದಿಲ್ಲ ಅಂತ ಹೇಳಿದ್ದೀನಿ, ನೋಟಿಸ್ ಸೋಮವಾರ ಬಂದ ಮೇಲೆ ಆ ನೊಟೀಸ್ ಅನ್ನು ವಾಣಿಜ್ಯ ಮಂಡಳಿಗೆ ಕೊಡುತ್ತೀನಿ. ಮುಂದೆ ಏನು ಮಾಡಬೇಕು ಎಂದು ಅವರು ತೀರ್ಮಾನ ಮಾಡುತ್ತಾರೆ. ಸುದೀಪ್ ಯಾವ ವಿಚಾರಕ್ಕೆ ಕೋರ್ಟ್ಗೆ ಹೋಗಿದ್ದಾರೋ ಗೊತ್ತಿಲ್ಲ” ಎಂದಿದ್ದಾರೆ ನಿರ್ಮಾಪಕ ಎಂಎನ್ ಕುಮಾರ್.
ಈ ಹಿಂದೆ ಸುದೀಪ್ ಕಳಿಸಿದ್ದ ಪತ್ರಕ್ಕೆ ನಿನ್ನೆ ಅವರಿಗೆ ಉತ್ತರ ಕೊಟ್ಟಿದ್ದೀನಿ. ಅವರು ಕಳಿಸಿದ್ದ ನೋಟಿಸ್ ಇಂಗ್ಲಿಷ್ನಲ್ಲಿತ್ತು, ಅದನ್ನು ಕನ್ನಡದಲ್ಲಿ ತಿಳಿಸಿ ಎಂದಿದ್ದೇನೆ, ನಾನು ಯಾರದ್ದೋ ಮಾತನ್ನು ಕೇಳಿಕೊಂಡು ಅರೋಪ ಮಾಡಲ್ಲ, ನನಗೆ ನೋಟಿಸ್ ಬಂದರೆ ಕೋರ್ಟ್ಗೆ ಹೋಗ್ತೇನೆ, ಅದರೆ ಸಮಸ್ಯೆಯನ್ನು ನಾನು ವಾಣಿಜ್ಯ ಮಂಡಳಿಯಲ್ಲೇ ಇತ್ಯರ್ಥ ಮಾಡಿಕೊಳ್ಳುತ್ತೇನೆ, ಈ ವಿಚಾರವನ್ನು ನಾನು ಈಗಾಗಲೇ ಶಿವಣ್ಣ ಗಮನಕ್ಕೂ ತಂದಿದ್ದೇನೆ, ಏನೇ ಸಮಸ್ಯೆ ಇದ್ರೂ ಮಾತುಕತೆ ಮೂಲಕ ಬಗೆಹರಿಸಿಕೊಂದರೆ ಒಳ್ಳೇದು” ಎಂದಿದ್ದಾರೆ.
ಆರೋಪಗಳ ಹಿಂದೆ ಸೂರಪ್ಪ ಬಾಬು ಕೈವಾಡ ಇದೆಯಾ ಎಂಬ ಪ್ರಶ್ನೆಗೆ, ”ಸೂರಪ್ಪ ಬಾಬುಗಿಂತಲೂ ಮೊದಲು ನಿರ್ಮಾಪಕ ಆದವನು ನಾನು, ಸೂರಪ್ಪ ಬಾಬು ನನ್ನ ಸ್ನೇಹಿತ, ಒಂದಷ್ಟು ಸಲಹೆ ಕೊಡುತ್ತಾರೆ ಅಷ್ಟೇ” ಎಂದಿದ್ದಾರೆ. ನಟ ಸುದೀಪ್ ಸಿನಿಮಾ ಮಾಡಿಕೊಡುವುದಾಗಿ ಅಡ್ವಾನ್ಸ್ ಹಣ ಪಡೆದು ವರ್ಷಗಳಾದರೂ ಡೇಟ್ಸ್ ಕೊಡುತ್ತಿಲ್ಲ, ಅಡ್ವಾನ್ಸ್ ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂದು ನಿರ್ಮಾಪಕ ಎನ್ಎಂ ಕುಮಾರ್ ಮತ್ತು ಸುರೇಶ್ ಆರೋಪ ಮಾಡಿದ್ದಾರೆ. ಆರೋಪ ಮಾಡಿದ ನಿರ್ಮಾಪಕರ ವಿರುದ್ಧ ಕಿಚ್ಚ ಸುದೀಪ್ ಇಂದು (ಜುಲೈ 15) ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Sat, 15 July 23