ಬಾಯಿ ಇದೆ ಅಂತ ಏನೇನೋ ಮಾತಾಡಬಾರದು, ಎಲ್ಲವನ್ನೂ ನ್ಯಾಯಾಲಯ ನೋಡಿಕೊಳ್ಳಲಿದೆ: ಸುದೀಪ್

Sudeep: ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ ಸುದೀಪ್, ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಾಯಿ ಇದೆ ಅಂತ ಏನೇನೋ ಮಾತಾಡಬಾರದು, ಎಲ್ಲವನ್ನೂ ನ್ಯಾಯಾಲಯ ನೋಡಿಕೊಳ್ಳಲಿದೆ: ಸುದೀಪ್
ಸುದೀಪ್
Follow us
ಮಂಜುನಾಥ ಸಿ.
|

Updated on:Jul 15, 2023 | 5:35 PM

ತಮ್ಮ ವಿರುದ್ಧ ವಂಚನೆ ಆರೋಪ ಮಾಡಿರುವ ನಿರ್ಮಾಪಕರಾದ (Producer) ಎನ್​ಎಂ ಕುಮಾರ್ (NM Kumar) ಹಾಗೂ ಸುರೇಶ್ ವಿರುದ್ಧ ನಟ ಕಿಚ್ಚ ಸುದೀಪ್ (Kichcha Sudeep) ಇಂದು (ಜುಲೈ 15) ಖುದ್ದಾಗಿ ಆಗಮಿಸಿ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದರು. ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಆಗಸ್ಟ್ 17ಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.

ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಳಿಕ ಸುದ್ದಿಗಾರರೊಟ್ಟಿಗೆ ಮಾತನಾಡಿದ ನಟ ಸುದೀಪ್, ” ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಹಾಗೂ ಎಲ್ಲ ಸಂಘಗಳ ಮೇಲೆ ನನಗೆ ಗೌರವ ಇದೆ. ನನ್ನ ವೈಯಕ್ತಿಕ ಹಿತಾಸಕ್ತಿಗೆ ಅದನ್ನು ಬಳಸಲಾರೆ ಹಾಗಾಗಿ ಸತ್ಯವನ್ನು ಅರಸಿ ನಾನು ನ್ಯಾಯಾಲಯಕ್ಕೆ ಬಂದಿದ್ದೇನೆ. ಯಾರೇ ಏನೆ ಆರೋಪ ಮಾಡಿದ್ರು ಕೋರ್ಟ್ ನಿಂದ ಸರಿ ಉತ್ತರ ಸಿಗುತ್ತೆ” ಎಂದರು.

ನಿರ್ಮಾಪಕರ ಆರೋಪಗಳ ಹಿಂದೆ ಮತ್ತೊಬ್ಬ ನಿರ್ಮಾಪಕ ಸೂರಪ್ಪ ಬಾಬು ಕೈವಾಡ ಇದೆಯಂತಲ್ಲ? ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಸುದೀಪ್, ”ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ” ಎಂದಷ್ಟೆ ಹೇಳಿದರು, ಆ ಬಳಿಕ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವವರ ಕುರಿತಾದ ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತಾ, ”ನೋಡೋಣ ಸಮಯ ಇದೆ, ಉತ್ತರ ಕೊಡುವ ಮನಸ್ಸು ನನಗೆ ಬಂದರೆ, ಸರಿಯಾದ ಉತ್ತರವನ್ನೇ ಕೊಡುತ್ತೀನಿ” ಎಂದರು.

ಇದನ್ನೂ ಓದಿ:ವಂಚನೆ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕಿಚ್ಚ ಸುದೀಪ್

”ಯಾವುದೇ ಸುಳ್ಳಿರಲಿ ಅಥವಾ ಸತ್ಯ ಇರಲಿ ಬಹಿರಂಗವಾಗಿ ಹೊರಗ್ ಬರಲೇ ಬೇಕು, ಸರಿಯಾದ ಮಾರ್ಗದಲ್ಲಿ ಹೋಗ್ತಿದ್ದೀನಿ ಅಂತಾ ನಾನು ಅಂದ್ಕೊಂಡಿದೀನಿ. ಅದನ್ನೇ ಪರೀಕ್ಷೆ ಮಾಡಿಕೊಳ್ಳಲು ಬಂದಿದ್ದೀನಿ, ಯಾರದ್ದು ಸರಿ ಯಾರದ್ದು ತಪ್ಪು ಎಂದು ತಿಳಿಸಲು ಇದಕ್ಕಿಂತಲೂ ಸರಿಯಾದ ಸ್ಥಳವಿಲ್ಲ. ಯಾವುದು ಎಲ್ಲಿ ಇತ್ಯರ್ಥ ಆಗಬೇಕೊ ಅಲ್ಲಿ ಇತ್ಯರ್ಥ ಆಗುತ್ತೆ” ಎಂದರು ಸುದೀಪ್.

ನಿರ್ಮಾಪಕರು ಪತ್ರಿಕಾಗೋಷ್ಠಿ ನಡೆಸಿ ನಮಗೆ ಸುದೀಪ್ ಅವರಿಂದ ನಷ್ಟವಾಗಿದೆ ಎಂದಿದ್ದಾರೆ. ನಿರ್ಮಾಪಕರು ಹಣ ಕಳೆದುಕೊಂಡಿದ್ದಾರೆ ಸುದೀಪ್ ಅವರು ಅವರಿಗೆ ಸಹಾಯ ಮಾಡಬಹುದಿತ್ತು ಎಂಬ ಮಾತುಗಳೂ ಇವೆಯಲ್ಲ ಎಂಬ ಪ್ರಶ್ನೆಗೆ, ”ನಾನು ಕಲಾವಿದ ಆಗುವಾಗ ಎಲ್ಲರಿಗೂ ಸಹಾಯ ಮಾಡ್ತೀನಿ ಅಂತಾ ಭರವಸೆ ಕೊಟ್ಟು ಚಾರಿಟಬಲ್ ಟ್ರಸ್ಟ್ ಓಪನ್ ಮಾಡಿರಲಿಲ್ಲ” ಎಂದು ನೇರವಾಗಿಯೇ ಉತ್ತರಿಸಿದ ಸುದೀಪ್, ಬಾಯಿ ಇದೆ ಎಂದು ಮಾತನಾಡಬಾರದು, ಕಾಲು ಇದೆ ಎಂದು ಸಿಕ್ಕ ಸಿಕ್ಕಲೆಲ್ಲ ಓಡಬಾರದು ಎಂದು ಪರೋಕ್ಷವಾಗಿ ತಮ್ಮ ವಿರುದ್ಧ ಆರೋಪ ಮಾಡಿದ ನಿರ್ಮಾಪಕರಿಗೆ ಹೇಳಿದರು.

ತಮ್ಮ ಪರವಾಗಿ ಜಾಕ್ ಮಂಜು ಸುದ್ದಿಗೋಷ್ಠಿ ಮಾಡಿದ ಬಗ್ಗೆ ಮಾತನಾಡಿದ ಸುದೀಪ್, ”ಜಾಕ್ ಮಂಜು ಏನು ಉತ್ತರ ಕೊಡಬೇಕಿತ್ತು ಅದನ್ನು ಕೊಟ್ಟಿದಾರೆ. ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘಕ್ಕೆ ಒಂದು ಘನತೆ ಇದೆ, ನಾನೇ ಬಂದು ಪತ್ರಿಕಾಗೋಷ್ಠಿ ಮಾಡಿದರೆ ಅವರಿಗೂ ನಂಗೂ ಏನು ವ್ಯತ್ಯಾಸ ಇರುತ್ತದೆ. ನಾನು ಇತರರಿಗೆ ಕೆಟ್ಟ ಉದಾಹರಣೆ ಆಗಬಾರದು ಎಂಬ ಕಾರಣಕ್ಕೆ ನ್ಯಾಯಾಲಯಕ್ಕೆ ಬಂದಿದ್ದೇನೆ. ನಾನು ಬೆದರಿ ಮಣಿದೆ ಎಂಬುದು ಇನ್ನೊಬ್ರಿಗೆ ಕೆಟ್ಟ ಉದಾಹರಣೆ ಆಗಬಾರದು. ನಾನು ಸರಿಯಾಗಿ ನಡೆದುಕೊಳ್ಳಲಿಲ್ಲ ಎಂದೂ ಯಾರು ಅಂದಕೊಳ್ಳಬಾರದು ಹಾಗಾಗಿ ನಾನೂ ನ್ಯಾಯಾಲಯಕ್ಕೆ ಬಂದಿದ್ದೇನೆ. ನಾನು ಸಂಪಾದನೆ ಮಾಡಿರೋ ಹೆಸರಾಗಲಿ, ಸ್ಟಾರ್ ಗಿರಿ ಆಗಲಿ ಯಾರಿಂದಲೂ ಅಳಿಸೋಕೆ ಆಗಲ್ಲ. ಹಾಗೇನಾದ್ರೂ ನಾನು ಸಂಪಾದನೆ ಮಾಡಿರೋ ಹೆಸರಾಗಲಿ, ಸ್ಟಾರ್ ಗಿರಿ ಅಳಿಸಿ ಹೋದರೆ ನಾನು ಏನೂ ಮಾಡಿಲ್ಲ ಎಂದೇ ಅರ್ಥ” ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Sat, 15 July 23