‘ಚೌಕಿದಾರ್’ ಟೀಸರ್ ಬಿಡುಗಡೆ: ರಕ್ತಸಿಕ್ತ ಅವತಾರದಲ್ಲಿ ಪೃಥ್ವಿ ಅಂಬರ್

Pruthvi Ambaar: ಪೃಥ್ವಿ ಅಂಬರ್ ಲವ್ವರ್ ಬಾಯ್ ಪಾತ್ರಗಳಲ್ಲಿ ನಟಿಸಿರುವುದೇ ಹೆಚ್ಚು, ಆದರೆ ಇದೀಗ ಅವರ ನಟನೆಯ ‘ಚೌಕಿಧಾರ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​ನಲ್ಲಿ ರಕ್ತ-ಸಿಕ್ತ ಅವತಾರದಲ್ಲಿ ಪೃಥ್ವಿ ಅಂಬರ್ ಕಾಣಿಸಿಕೊಂಡಿದ್ದಾರೆ. ಟೀಸರ್ ಸಖತ್ ಗಮನ ಸೆಳೆದಿದ್ದು, ಹಲವು ಪ್ರತಿಭಾವಂತ ಕಲಾವಿದರ ದಂಡೇ ಸಿನಿಮಾನಲ್ಲಿದೆ.

‘ಚೌಕಿದಾರ್’ ಟೀಸರ್ ಬಿಡುಗಡೆ: ರಕ್ತಸಿಕ್ತ ಅವತಾರದಲ್ಲಿ ಪೃಥ್ವಿ ಅಂಬರ್
Pruthvi Ambar

Updated on: May 25, 2025 | 10:48 PM

ಲವರ್ ಬಾಯ್ ಪಾತ್ರದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ನಟ ಪೃಥ್ವಿ ಅಂಬರ್ (Pruthvi Ambaar) ಆಕ್ಷನ್ ಸ್ಟಾರ್ ಆಗಿ ಬದಲಾಗಿದ್ದಾರೆ ‘ಚೌಕಿದಾರ್’ ಸಿನಿಮಾಕ್ಕಾಗಿ. ಪೃಥ್ವಿ ಅಂಬರ್ ಮತ್ತು ಅಣ್ಣಾವ್ರ ಮೊಮ್ಮಗಳು ಧನ್ಯ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ರಕ್ತಸಿಕ್ತ ಅವತಾರವೆತ್ತಿರುವ ಪೃಥ್ವಿ ಅವರ ಹೊಸ ಲುಕ್ ಅನ್ನು ಸಿನಿಮಾ ಪ್ರೇಮಿಗಳು, ಪೃಥ್ವಿ ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೆಯೇ ಕಾದು ನೋಡಬೇಕಿದೆ. ನಾಯಕಿ ಧನ್ಯ ರಾಮ್ ಕುಮಾರ್ ಡಿ ಗ್ಲಾಮರ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿರುವ ಬಹುತೇಕ ಎಲ್ಲ ಮುಖ್ಯ ಪಾತ್ರಗಳನ್ನು ಟೀಸರ್ ನಲ್ಲಿ ತೋರಿಸಿಬಿಟ್ಟಿದ್ದಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಆದರೆ ಟೀಸರ್ ಮೂಲಕ ಕುತೂಹಲ ಮೂಡಿಸಲು ಯಶಸ್ವಿಯಾಗಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದ್ದು, ಖಾಕಿ ಲುಕ್ ನಲ್ಲಿ ಸುಧಾರಾಣಿ‌ ಖದರ್ ತೋರಿಸಿದ್ದಾರೆ. ಹಿರಿಯ ನಟ ಸಾಯಿ ಕುಮಾರ್, ಪೃಥ್ವಿ ತಂದೆ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಧರ್ಮ, ಹಿರಿಯ ನಟಿ ಶ್ವೇತಾ ಇನ್ನೂ ಕೆಲವು ನಟ-ನಟಿಯರಿದ್ದಾರೆ.

ಟೀಸರ್ ನೋಡಿದರೆ ಮಧ್ಯಮ ವರ್ಗದ ಕುಟುಂಬದ ಮೇಲಾದ ಅನ್ಯಾಯದ ಸೇಡು ತೀರಿಸಿಕೊಳ್ಳುವ ಕತೆ ಇರುವಂತೆ ತೋರುತ್ತಿದೆ. ಪೃಥ್ವಿ ಅಂಬರ್ ಟೀಸರ್​ನ ಕೊನೆಯ ದೃಶ್ಯದಲ್ಲಿ ಮಾತ್ರ ಕಾಣಿಸಿಕೊಂಡರು, ಅವರ ರಕ್ತ-ಸಿಕ್ತ ಅವತಾರ ಆಶ್ಚರ್ಯ ಮೂಡಿಸುತ್ತದೆ. ಟೀಸರ್​ನ ಸಂಗೀತವೂ ಗಮನ ಸೆಳೆಯುತ್ತಿದೆ. ಹಳ್ಳಿ ಬದುಕು ಹಾಗೂ ನಗರದ ಬದುಕಿನ ನಡುವಿನ ವ್ಯತ್ಯಾಸ, ರೈತರು ಹೇಗೆ ಕೃಷಿ ತೊರೆದು ಪಟ್ಟಣಕ್ಕೆ ಬರುತ್ತಿದ್ಆರೆ ಇತ್ಯಾದಿಗಳನ್ನು ಸಿನಿಮಾದಲ್ಲಿ ತೋರಿಸಿರುವ ಸಾಧ್ಯತೆ ಟೀಸರ್ ಕಾಣುತ್ತಿದೆ.

ಇದನ್ನೂ ಓದಿ:‘ಕೊತ್ತಲವಾಡಿ’ ಟೀಸರ್​ ಬಿಡುಗಡೆ; ಇದು ಯಶ್ ತಾಯಿ ಪುಷ್ಪ ನಿರ್ಮಾಣದ ಸಿನಿಮಾ

ಸಚಿನ್ ಬಸ್ರೂರ್ ಅವರ ಸಂಗೀತ ಟೀಸರ್‌ನಲ್ಲಿ ಗಮನಸೆಳೆಯುತ್ತಿರುವ ಪ್ರಮುಖ ಅಂಶಗಳಲ್ಲಿ ಒಂದು. ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ಸಹ ನಿರ್ಮಾಣ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಅವರುಗಳು ಸಿನಿಮಾದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಪೃಥ್ವಿರಾಜ್ ಧಘಾರಿ ಸಹನಿರ್ದೇಶನ ಈ ಸಿನಿಮಾಕ್ಕಿದೆ. ‘ಚೌಕಿದಾರ್’ ಸಿನಿಮಾ ಬಹುಭಾಷೆಯಲ್ಲಿ ಮೂಡಿ ಬರುತ್ತಿದೆ.

ಟೀಸರ್ ಬಿಡುಗಡೆ ಮೂಲಕ ಸಿನಿಮಾದ ಪ್ರಚಾರ ಆರಂಭಿಸಿರುವ ಚಿತ್ರತಂಡ ಜೂನ್ 1ರಂದು ಚೌಕಿದಾರ್ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲಿದೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ