ಬಿಡುಗಡೆ ಸಿದ್ಧವಾಗಿದೆ ಹೊಸಬರ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ ‘ವಿಕಲ್ಪ’

ಪೃಥ್ವಿರಾಜ್‌ ಪಾಟೀಲ್‌ ಅವರು ನಿರ್ದೇಶನ ಮಾಡಿರುವ ‘ವಿಕಲ್ಪ’ ಸಿನಿಮಾದಲ್ಲಿ ಹಿರಿ-ಕಿರಿಯ ಕಲಾವಿದರ ಸಂಗಮ ಆಗಿದೆ. ಇದು ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರ ಸಿನಿಮಾ. ಇಂದಿರಾ ಶಿವಸ್ವಾಮಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ವಿಕಲ್ಪ’ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದೆ. ಈಗ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗುತ್ತಿವೆ.

ಬಿಡುಗಡೆ ಸಿದ್ಧವಾಗಿದೆ ಹೊಸಬರ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ ‘ವಿಕಲ್ಪ’
Vikalpa Movie Poster

Updated on: Dec 25, 2025 | 5:18 PM

ಹೊಸಬರ ತಂಡದ ‘ವಿಕಲ್ಪ’ ಸಿನಿಮಾ (Vikalpa Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರ ಈ ಸಿನಿಮಾದಲ್ಲಿ ಇದೆ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ ತಲ್ಲಣಗಳನ್ನು ಈ ಸಿನಿಮಾದ ಮೂಲಕ ತೆರೆಮೇಲೆ ತರುತ್ತಿದ್ದಾರೆ ಯುವ ನಟ, ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌. ಕನ್ನಡ ಚಿತ್ರರಂಗದಲ್ಲಿ ಸೈಕಲಾಜಿಕಲ್‌ ಥ್ರಿಲ್ಲರ್‌ (Psychological Thriller) ಸಿನಿಮಾಗಳ ಸಂಖ್ಯೆ ಕಡಿಮೆ. ಅಂಥ ವಿರಳ ಸಿನಿಮಾಗಳ ಸಾಲಿಗೆ ‘ವಿಕಲ್ಪ’ ಸಿನಿಮಾ ಕೂಡ ಸೇರುತ್ತಿದೆ. ‘ವಿಕಲ್ಪ’ ಎಂದರೆ ವಾಸ್ತವ ಹಾಗೂ ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದು ಚಿತ್ರತಂಡ ಹೇಳಿದೆ.

ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ ಒಂದು ಸಂಪೂರ್ಣ ಥ್ರಿಲ್ಲರ್‌ ಸಿನಿಮಾ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಜೊತೆಗೆ ಹಾಸ್ಯ ಮತ್ತು ಮನರಂಜನೆಗೆ ಹೆಚ್ಚಿನ ಒತ್ತು ನೀಡಿ ಇಡೀ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ‘ಈ ಸಿನಿಮಾದಲ್ಲಿ ಕಥೆಯೆ ಹೀರೋ. ಇಲ್ಲಿ ಪ್ರತಿ ಪಾತ್ರ ಕೂಡ ನೋಡುಗರ ಮನಮುಟ್ಟುತ್ತವೆ’ ಎಂದು ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್ ಅವರು ಹೇಳಿದ್ದಾರೆ.

ಪೃಥ್ವಿರಾಜ್‌ ಪಾಟೀಲ್‌ ಅವರು ಹವ್ಯಾಸಿ ರಂಗಭೂಮಿಯಲ್ಲಿ ಅನುಭವ ಹೊಂದಿದ್ದಾರೆ. ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅವರು ಈಗ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ‘ಸುರೂಸ್‌ ಟಾಕೀಸ್‌’ ಸಂಸ್ಥೆಯ ಅಡಿಯಲ್ಲಿ ಇಂದಿರಾ ಶಿವಸ್ವಾಮಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌ ಅವರೇ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, ಅನೇಕ ನುರಿತ ಮಾನಸಿಕ ವೈದ್ಯರ ಸಲಹೆಯ ಮೇರೆಗೆ ಈ ಸಿನಿಮಾದ ಹಲವು ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. ಬೆಂಗಳೂರು, ಸಾಗರ, ಶಿರಸಿ, ತೀರ್ಥಹಳ್ಳಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ‘ವಿಕಲ್ಪ’ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಸಿಂಗಾಪುರ, ನೆದರ್ಲ್ಯಾಂಡ್‌ ಮುಂತಾದ ದೇಶಗಳಲ್ಲೂ ಚಿತ್ರೀಕರಣ ನಡೆದಿದೆ.

ಪೃಥ್ವಿರಾಜ್‌ ಪಾಟೀಲ್‌, ಸಂಧ್ಯಾ ವಿನಾಯಕ್‌, ನಾಗಶ್ರೀ ಹೆಬ್ಬಾರ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಪೂಜಾ ಬಚ್ಚ್‌, ಡಾ. ಪ್ರಕೃತಿ, ಜಯಂತ್‌ ಡೇವಿಡ್‌, ಮಾಸ್ಟರ್‌ ಆಯುಷ್ ಸಂತೋಷ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖ್ಯಾತ ನಟಿ ಹರಿಣಿ ಶ್ರೀಕಾಂತ್‌ ಅವರು ಈ ಸಿನಿಮಾದಲ್ಲಿ ವಿಭಿನ್ನ ಹಾಗೂ ವಿಶೇಷವಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದರಾದ ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಗಿರೀಶ್‌ ಹೆಗಡೆ, ಮಾಧವ ಶರ್ಮಾ, ಗಣಪತಿ ಎ.ಆರ್, ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಡೆವಿಲ್’ ಬಳಿಕ ರೇಟಿಂಗ್ ಕೊಡದಂತೆ ಕೋರ್ಟ್​​ನಿಂದ ಆರ್ಡರ್ ತಂದ ‘45’, ‘ಮಾರ್ಕ್​​’

‘ವಿಕಲ್ಪ’ ಸಿನಿಮಾಗೆ ಮಿಥುನ್‌ ತೀರ್ಥಹಳ್ಳಿ ಸಹ-ನಿರ್ದೇಶನ ಮಾಡಿದ್ದಾರೆ. ಅಭಿರಾಮ್‌ ಗೌಡ ಅವರು ಛಾಯಾಗ್ರಣ ಮಾಡಿದ್ದಾರೆ. ಸುರೇಶ್‌ ಆರುಮುಗಮ್‌ ಅವರ ಸಂಕಲನ, ಸಂವತ್ಸರ ಅವರ ಸಂಗೀತ ಈ ಸಿನಿಮಾಗಿದೆ. ಪೃಥ್ವಿರಾಜ್‌ ಪಾಟಿಲ್‌ ಹಾಗೂ ಕೌಂಡಿನ್ಯ ಕುಡ್ಲುತೋಟ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದಾರ್ಥ್‌ ಬೆಳ್ಮಣ್ಣು, ಸಂವತ್ಸರ, ಇಂಚರಾ, ಶ್ರೀರಂಜಿನಿ ಮುಂತಾದವರು ‘ವಿಕಲ್ಪ’ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.