ಫಿಟ್ನೆಸ್ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸುತ್ತಿದ್ದ ನಟ ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಾಘಾತ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರ ಮನದಲ್ಲಿ ಕಾಡುತ್ತಿದೆ. ಅ.29ರಂದು ಇಡೀ ಕರುನಾಡಿನ ಪಾಲಿಗೆ ಕರಾಳ ದಿನ. ಅಂದು ಬೆಳಗ್ಗೆ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು ಎಂಬ ಮಾಹಿತಿ ಕೇಳಿಬಂತು. ಅದಾದ ಬಳಿಕ ಅವರ ಜೊತೆಯಲ್ಲಿ ಇದ್ದವರು ಕೆಲವೇ ಕೆಲವು ಮಂದಿ ಮಾತ್ರ. ಆ ಪೈಕಿ ಕಾರು ಚಾಲಕ ಬಾಬು ಕೂಡ ಒಬ್ಬರು. ಅಂದು ನಿಜಕ್ಕೂ ಏನಾಯ್ತು ಎಂಬುದನ್ನು ಅವರು ವಿವರಿಸಿದ್ದಾರೆ.
ಮನೆಯಲ್ಲಿದ್ದಾಗ ಪುನೀತ್ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆ ಘಟನೆಯ ಸಿಸಿಟಿವಿ ದೃಶ್ಯ ಕೂಡ ಲಭ್ಯವಾಗಿದೆ. ಆ ಸಂದರ್ಭದ ಬಗ್ಗೆ ಕಾರು ಚಾಲಕ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ‘ಐದೇ ನಿಮಿಷದಲ್ಲೇ ಮನೆಯಿಂದ ಆಸ್ಪತ್ರೆಗೆ ಹೋಗಿದ್ದೆವು. ಡಾ. ರಮಣ ರಾವ್ ಅವರ ಕ್ಲಿನಿಕ್ಗೆ ಹೋಗಿದ್ದೆವು. ಕಾರಿನಲ್ಲಿ ಹೋಗುವಾಗಲೂ ಪುನೀತ್ ಅವರು ಮೊಬೈಲ್ನಲ್ಲಿ ಮಾತಾಡುತ್ತಿದ್ದರು. ‘ಭಜರಂಗಿ 2’ ಸಿನಿಮಾದ ರೆಸ್ಪಾನ್ಸ್ ಬಗ್ಗೆ ಫಿಲ್ಮ್ ಡಿಸ್ಟ್ರಿಬ್ಯೂಟರ್ ಮಂಜುನಾಥ್ ಜತೆ ಮಾತಾಡ್ತಿದ್ರು’ ಎಂದು ಬಾಬು ಹೇಳಿದ್ದಾರೆ.
‘ಡಾ. ರಮಣ ರಾವ್ ಕ್ಲಿನಿಕ್ನಿಂದ ಕೇವಲ 10 ನಿಮಿಷಕ್ಕೆ ವಿಕ್ರಂ ಆಸ್ಪತ್ರೆ ಹೋದೆವು. ಅಲ್ಲಿಗೆ ತಲುಪುವಷ್ಟರಲ್ಲಿ ಪುನೀತ್ ಸುಸ್ತಾಗಿಬಿಟ್ಟಿದ್ದರು’ ಎಂದು ಬಾಬು ವಿವರಿಸಿದ್ದಾರೆ. ಅಂದರೆ ನಿಧನರಾಗುವುದಕ್ಕೂ 15-20 ನಿಮಿಷಗಳ ಮುನ್ನ ಪುನೀತ್ ಚೆನ್ನಾಗಿ ಇದ್ದರು. ಅಣ್ಣ ಶಿವರಾಜ್ಕುಮಾರ್ ನಟನೆಯ ಸಿನಿಮಾಗೆ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತಿದೆ ಎಂಬುದನ್ನು ಫೋನ್ ಮಾಡಿ ತಿಳಿದುಕೊಳ್ಳುವಷ್ಟರಮಟ್ಟಿಗೆ ಅವರು ಆ್ಯಕ್ಟೀವ್ ಆಗಿದ್ದರು. ಆದರೆ ಏಕಾಏಕಿ ಸಾವು ಸಂಭವಿಸಿದ್ದು ಮಾತ್ರ ವಿಪರ್ಯಾಸ.
ಪುನೀತ್ ನಿಧನರಾಗಿ 5 ದಿನ ಕಳೆದಿದೆ. ಆ ಪ್ರಯುಕ್ತ ಡಾ. ರಾಜ್ಕುಮಾರ್ ಕುಟುಂಬದವರು ಕಂಠೀರವ ಸ್ಡುಡಿಯೋದಲ್ಲಿ ಇರುವ ಅಪ್ಪು ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನೆರವೇರಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ದೂರದ ಊರುಗಳಿಂದ ಬಂದು ಸಮಾಧಿ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಶೀಘ್ರದಲ್ಲೇ ಅವಕಾಶ ಕೊಡುತ್ತೇವೆ ಎಂದು ರಾಜ್ ಕುಟುಂಬದವರು ಹೇಳಿದ್ದಾರೆ. ಕಂಠೀರವ ಸ್ಟುಡಿಯೋ ಎದುರು ಬಂದು ಕಾಯುತ್ತಿರುವ ಪುನೀತ್ ಅಭಿಮಾನಿಗಳ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ:
Puneeth Rajkumar: ‘ಪುನೀತ್ ಅತಿಯಾಗಿ ಜಿಮ್ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ