ನಟ ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದಾ ನಗುನಗುತ್ತ, ಒಳ್ಳೆಯ ಮಾತುಗಳಿಂದ ಎಲ್ಲರನ್ನೂ ನಗಿಸುತ್ತಿದ್ದ ಪುನೀತ್ ಈಗ ಮಾತು ನಿಲ್ಲಿಸಿದ್ದಾರೆ. ಶಾಂತವಾಗಿ ಮಲಗಿದ ಅವರನ್ನು ಕಂಡು ಸೆಲೆಬ್ರಿಟಿಗಳು, ಆಪ್ತರು, ಕುಟುಂಬದವರು ಮತ್ತು ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ (ಅ.29) ರಾತ್ರಿಯಿಡೀ ಜನಸಾಗರ ಹರಿದುಬಂದಿದೆ. ಎಲ್ಲರೂ ಶೋಕಸಾಗರದಲ್ಲಿ ಮುಳುಗಿದ್ದು, ಕಣ್ಣೀರು ನಿಲ್ಲಿಸಲು ಸಾಧ್ಯವಾಗುತ್ತಲೇ ಇಲ್ಲ.
ಈ ಸ್ಥಿತಿಯಲ್ಲಿ ಪುನೀತ್ ಅವರನ್ನು ನೋಡುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ಗುರುವಾರ (ಅ.28) ರಾತ್ರಿವರೆಗೂ ನಗುನಗುತ್ತಾ, ಹಾಡಿ ಕುಣಿಯುತ್ತಿದ್ದ ಪುನೀತ್ ರಾಜ್ಕುಮಾರ್ ಹೀಗೆ ಏಕಾಏಕಿ ಕುಸಿದು ಬೀಳುತ್ತಾರೆ ಎಂದರೆ ಆ ಸತ್ಯವನ್ನು ಅಭಿಮಾನಿಗಳು ಜೀರ್ಣಿಸಿಕೊಳ್ಳುವುದು ಕಷ್ಟ. ಕೊನೇ ಬಾರಿ ಅವರ ಮುಖ ನೋಡಬೇಕು ಎಂದು ಎಲ್ಲರೂ ಕಂಠೀರವ ಸ್ಟೇಡಿಯಂ ಬಳಿ ಬರುತ್ತಿದ್ದಾರೆ. ಕನ್ನಡ ಚಿತ್ರರಂಗದ ತಾರೆಯರು ಮಾತ್ರವಲ್ಲದೇ, ಪರಭಾಷೆಯ ಸೆಲೆಬ್ರಿಟಿಗಳು ಕೂಡ ಅಪ್ಪುಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಚಿತ್ರರಂಗದಲ್ಲಿ ಅನೇಕರ ಪಾಲಿಗೆ ಅಪ್ಪು ಗಾಡ್ ಫಾದರ್ ಆಗಿದ್ದರು. ಎಷ್ಟೋ ಮಂದಿ ಹೊಸಬರಿಗೆ ಅವರು ಸಹಾಯ ಮಾಡಿದ್ದರು. ತಮ್ಮ ಹೋಮ್ ಬ್ಯಾನರ್ ಮೂಲಕ ಹೊಸಬರ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರು. ಇಂದು ಅವರೆಲ್ಲರಿಗೂ ಅನಾಥ ಭಾವ ಕಾಡುತ್ತಿದೆ. ನಟ ‘ಡಾರ್ಲಿಂಗ್’ ಕೃಷ್ಣ ಅವರು ಪುನೀತ್ ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅತ್ತರು. ಅಪ್ಪು ಜೊತೆ ಅವರು ಹಲವು ವರ್ಷಗಳಿಂದ ಆತ್ಮೀಯರಾಗಿದ್ದರು.
ಬಹುಭಾಷಾ ನಟ ಶರತ್ಕುಮಾರ್ ಕೂಡ ಪುನೀತ್ ಅಂತಿಮ ದರ್ಶನ ಪಡೆದರು. ಕಣ್ಣೀರು ತಡೆಯಲಾಗದೇ ಅವರು ಚಿಕ್ಕ ಮಗುವಂತೆ ಅತ್ತರು. ದುಃಖ ತಾಳಲಾರದ ಅನೇಕ ಅಭಿಮಾನಿಗಳು ಬ್ಯಾರಿಕೇಡ್ಗಳನ್ನೂ ಹಾರಿ ಬರುತ್ತಿದ್ದಾರೆ. ಮಹಿಳೆಯರು ಕೂಡ ಆ ಜನಸಾಗರದ ನಡುವೆ ಅಪ್ಪುಗಾಗಿ ಕಂಬನಿ ಮಿಡಿಯುತ್ತಿದ್ದಾರೆ.
ಪುನೀತ್ ಪುತ್ರಿ ವಿದೇಶದಿಂದ ಆಗಮಿಸಬೇಕಿದೆ. ಶನಿವಾರ (ಅ.30) ದಿನವಿಡೀ ಅಭಿಮಾನಿಗಳಿಗೆ ಅಂತಿಮ ದರ್ಶನದ ಅವಕಾಶ ಮಾಡಿಕೊಡಲಾಗುತ್ತಿದೆ. ದೂರದೂರದ ಊರುಗಳಿಂದ ಜನರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಕಷ್ಟಪಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಪುನೀತ್ ಕುಟುಂಬದವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಒಬ್ಬ ಹೃದಯವಂತನನ್ನು ಕಳೆದುಕೊಂಡ ನೋವಿನಲ್ಲಿ ಇಡೀ ಚಿತ್ರರಂಗ ಕಣ್ಣೀರು ಹಾಕುತ್ತಿದೆ.
ಇದನ್ನೂ ಓದಿ:
Puneeth Rajkumar: ‘ಕೆಲವು ಭಾವನೆಗಳು ವೈಯಕ್ತಿಕ’; ಪುನೀತ್ ನಿಧನದ ಬಳಿಕ ನೋವು ತೋಡಿಕೊಂಡ ನಟಿ ರಮ್ಯಾ
Puneeth Rajkumar: ‘ನನ್ನ ತಮ್ಮ ರಾಯಲ್ ಆಗಿಯೇ ಇರುತ್ತಾನೆ’; ಕ್ರೂರ ವಿಧಿಯಿಂದ ಸುಳ್ಳಾಯ್ತು ಶಿವಣ್ಣನ ಈ ಮಾತು