Puneeth Rajkumar: ‘ಕೆಲವು ಭಾವನೆಗಳು ವೈಯಕ್ತಿಕ’; ಪುನೀತ್​ ನಿಧನದ ಬಳಿಕ ನೋವು ತೋಡಿಕೊಂಡ ನಟಿ ರಮ್ಯಾ

Ramya: ‘ಸಿನಿಮಾರಂಗದಲ್ಲಿ ಪುನೀತ್​ ರಾಜ್​ಕುಮಾರ್​ ನನಗೆ ಅತ್ಯಂತ ಆಪ್ತ ಸ್ನೇಹಿತ. ಅವರಿಗೂ ಅವರ ಪರಿವಾರದವರಿಗೂ ಎಂದೆಂದಿಗೂ ನನ್ನ ಅತ್ಯಂತ ಪ್ರೀತಿಪೂರ್ವಕ ಗೌರವ ನಮನಗಳು’ ಎಂದು ರಮ್ಯಾ ಪೋಸ್ಟ್​ ಮಾಡಿದ್ದಾರೆ.

Puneeth Rajkumar: ‘ಕೆಲವು ಭಾವನೆಗಳು ವೈಯಕ್ತಿಕ’; ಪುನೀತ್​ ನಿಧನದ ಬಳಿಕ ನೋವು ತೋಡಿಕೊಂಡ ನಟಿ ರಮ್ಯಾ
ಪುನೀತ್​ ರಾಜ್​ಕುಮಾರ್​, ರಮ್ಯಾ
Follow us
TV9 Web
| Updated By: ಮದನ್​ ಕುಮಾರ್​

Updated on: Oct 29, 2021 | 7:59 PM

ಕನ್ನಡ ಚಿತ್ರರಂಗದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಅಜಾತಶತ್ರು ಆಗಿದ್ದರು. ಯಾರ ಜೊತೆಯೂ ಅವರು ಕಿರಿಕ್​ ಮಾಡಿಕೊಂಡವರಲ್ಲ. ಪ್ರತಿಯೊಬ್ಬರೊಂದಿಗೆ ಅಪ್ಪು ಸ್ನೇಹಪೂರ್ವಕವಾಗಿ ನಡೆದುಕೊಳ್ಳುತ್ತಿದ್ದರು. ಜೊತೆಯಾಗಿ ಕೆಲಸ ಮಾಡಿದ ಯಾರೂ ಕೂಡ ಅವರ ಸ್ನೇಹವನ್ನು ಮರೆಯಲು ಸಾಧ್ಯವಿಲ್ಲ. ನಟಿ ರಮ್ಯಾ ಸಹ ಪುನೀತ್​ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಇಂದು (ಅ.29) ಹೃದಯಾಘಾತದಿಂದ ನಿಧನರಾದ ‘ಪವರ್​ ಸ್ಟಾರ್​’ ಬಗ್ಗೆ ರಮ್ಯಾ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ಅವರು ಸೋಶಿಯಲ್​ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ. ಪುನೀತ್​ ಅಗಲಿಕೆಯ ನೋವಿನಿಂದ ಶಾಕ್​ಗೆ ಒಳಗಾಗಿರುವ ಅವರು ನೇರವಾಗಿ ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ್ದಾರೆ.

‘ಕೆಲವು ಭಾವನೆಗಳು ವೈಯಕ್ತಿಕ. ಅವುಗಳನ್ನು ಪದಗಳಲ್ಲಿ ಹೇಳಲಾಗದು. RIP ಎಂದು ಹೇಳಿ ಮುಗಿಸಲಾಗದು. ದೇಹ-ಮನಸ್ಸಿಗೂ ಮೀರಿದ್ದು ಭಾವನೆ. ಬೇರೇನನ್ನೂ ಹೇಳಲಾಗದ ಸಂದರ್ಭ ಇದು. ಈ ವಿಚಾರದ ಬಗ್ಗೆ ಸದ್ಯದ ಸಂದರ್ಭದಲ್ಲಿ ಹೆಚ್ಚೇನೂ ಕೇಳದಿರಲು ಮಾಧ್ಯಮದ ಮಿತ್ರದಲ್ಲಿ ವಿನಂತಿ’ ಎಂದು ರಮ್ಯಾ ಪೋಸ್ಟ್​ ಮಾಡಿದ್ದಾರೆ.

‘ಸಿನಿಮಾರಂಗದಲ್ಲಿ ಪುನೀತ್​ ನನಗೆ ಅತ್ಯಂತ ಆಪ್ತ ಸ್ನೇಹಿತ. ಅವರಿಗೂ ಅವರ ಪರಿವಾರದವರಿಗೂ ಎಂದೆಂದಿಗೂ ನನ್ನ ಅತ್ಯಂತ ಪ್ರೀತಿಪೂರ್ವಕ ಹಾಗೂ ಹೃದಯದಾಳದ ಗೌರವ ನಮನಗಳು. ಕೇವಲ ಇನ್​ಸ್ಟಾಗ್ರಾಮ್ ಪೋಸ್ಟ್ ಅಥವಾ ಟ್ವೀಟ್​ ಮೂಲಕ ಭಾವನೆಗಳನ್ನು ಹೇಳಲಾಗದು. ಅವರ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ. ಅಪ್ಪು ನೀವು ಎಂದೆಂದಿಗೂ ಮಾಸದ ನೆನಪು. ಸದಾ ನನ್ನ ನೆನಪಿನಲ್ಲಿ ಎಂದೆಂದೂ ಇರುವಿರಿ ಅಪ್ಪು’ ಎಂದು ಸೋಶಿಯಲ್​ ಮೀಡಿಯಾದಲ್ಲಿ ರಮ್ಯಾ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರು ಹೀರೋ ಆದ ಬಳಿಕ ಆರಂಭದ ದಿನಗಳಲ್ಲಿ ರಮ್ಯಾ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರಿಗೆ ಜೋಡಿ ಆಗಿದ್ದರು. ‘ಅಭಿ’, ‘ಅರಸು’ ಮತ್ತು ‘ಆಕಾಶ್​’ ಚಿತ್ರಗಳಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು, ಆಪ್ತರು ಆಗಮಿಸಿ ಪುನೀತ್​ಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಭಾನುವಾರ (ಅ.31) ಅಂತ್ಯ ಸಂಸ್ಕಾರ ನಡೆಯಲಿದೆ. ಭಾರತೀಯ ಚಿತ್ರರಂಗದ ಅನೇಕರು ಅಪ್ಪು ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.

ಇದನ್ನೂ ಓದಿ:

Puneeth Rajkumar: ‘ನನ್ನ ತಮ್ಮ ರಾಯಲ್​ ಆಗಿಯೇ ಇರುತ್ತಾನೆ’; ಕ್ರೂರ ವಿಧಿಯಿಂದ ಸುಳ್ಳಾಯ್ತು ಶಿವಣ್ಣನ ಈ ಮಾತು

Puneeth Rajkumar: ಶಿವಣ್ಣನ ಎದುರು ಪುನೀತ್​ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು