ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್ಕುಮಾರ್ ಅವರು ಅಜಾತಶತ್ರು ಆಗಿದ್ದರು. ಯಾರ ಜೊತೆಯೂ ಅವರು ಕಿರಿಕ್ ಮಾಡಿಕೊಂಡವರಲ್ಲ. ಪ್ರತಿಯೊಬ್ಬರೊಂದಿಗೆ ಅಪ್ಪು ಸ್ನೇಹಪೂರ್ವಕವಾಗಿ ನಡೆದುಕೊಳ್ಳುತ್ತಿದ್ದರು. ಜೊತೆಯಾಗಿ ಕೆಲಸ ಮಾಡಿದ ಯಾರೂ ಕೂಡ ಅವರ ಸ್ನೇಹವನ್ನು ಮರೆಯಲು ಸಾಧ್ಯವಿಲ್ಲ. ನಟಿ ರಮ್ಯಾ ಸಹ ಪುನೀತ್ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಇಂದು (ಅ.29) ಹೃದಯಾಘಾತದಿಂದ ನಿಧನರಾದ ‘ಪವರ್ ಸ್ಟಾರ್’ ಬಗ್ಗೆ ರಮ್ಯಾ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ಅವರು ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ. ಪುನೀತ್ ಅಗಲಿಕೆಯ ನೋವಿನಿಂದ ಶಾಕ್ಗೆ ಒಳಗಾಗಿರುವ ಅವರು ನೇರವಾಗಿ ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ್ದಾರೆ.
‘ಕೆಲವು ಭಾವನೆಗಳು ವೈಯಕ್ತಿಕ. ಅವುಗಳನ್ನು ಪದಗಳಲ್ಲಿ ಹೇಳಲಾಗದು. RIP ಎಂದು ಹೇಳಿ ಮುಗಿಸಲಾಗದು. ದೇಹ-ಮನಸ್ಸಿಗೂ ಮೀರಿದ್ದು ಭಾವನೆ. ಬೇರೇನನ್ನೂ ಹೇಳಲಾಗದ ಸಂದರ್ಭ ಇದು. ಈ ವಿಚಾರದ ಬಗ್ಗೆ ಸದ್ಯದ ಸಂದರ್ಭದಲ್ಲಿ ಹೆಚ್ಚೇನೂ ಕೇಳದಿರಲು ಮಾಧ್ಯಮದ ಮಿತ್ರದಲ್ಲಿ ವಿನಂತಿ’ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.
‘ಸಿನಿಮಾರಂಗದಲ್ಲಿ ಪುನೀತ್ ನನಗೆ ಅತ್ಯಂತ ಆಪ್ತ ಸ್ನೇಹಿತ. ಅವರಿಗೂ ಅವರ ಪರಿವಾರದವರಿಗೂ ಎಂದೆಂದಿಗೂ ನನ್ನ ಅತ್ಯಂತ ಪ್ರೀತಿಪೂರ್ವಕ ಹಾಗೂ ಹೃದಯದಾಳದ ಗೌರವ ನಮನಗಳು. ಕೇವಲ ಇನ್ಸ್ಟಾಗ್ರಾಮ್ ಪೋಸ್ಟ್ ಅಥವಾ ಟ್ವೀಟ್ ಮೂಲಕ ಭಾವನೆಗಳನ್ನು ಹೇಳಲಾಗದು. ಅವರ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ. ಅಪ್ಪು ನೀವು ಎಂದೆಂದಿಗೂ ಮಾಸದ ನೆನಪು. ಸದಾ ನನ್ನ ನೆನಪಿನಲ್ಲಿ ಎಂದೆಂದೂ ಇರುವಿರಿ ಅಪ್ಪು’ ಎಂದು ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಹೀರೋ ಆದ ಬಳಿಕ ಆರಂಭದ ದಿನಗಳಲ್ಲಿ ರಮ್ಯಾ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರಿಗೆ ಜೋಡಿ ಆಗಿದ್ದರು. ‘ಅಭಿ’, ‘ಅರಸು’ ಮತ್ತು ‘ಆಕಾಶ್’ ಚಿತ್ರಗಳಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು, ಆಪ್ತರು ಆಗಮಿಸಿ ಪುನೀತ್ಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಭಾನುವಾರ (ಅ.31) ಅಂತ್ಯ ಸಂಸ್ಕಾರ ನಡೆಯಲಿದೆ. ಭಾರತೀಯ ಚಿತ್ರರಂಗದ ಅನೇಕರು ಅಪ್ಪು ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.
ಇದನ್ನೂ ಓದಿ:
Puneeth Rajkumar: ‘ನನ್ನ ತಮ್ಮ ರಾಯಲ್ ಆಗಿಯೇ ಇರುತ್ತಾನೆ’; ಕ್ರೂರ ವಿಧಿಯಿಂದ ಸುಳ್ಳಾಯ್ತು ಶಿವಣ್ಣನ ಈ ಮಾತು
Puneeth Rajkumar: ಶಿವಣ್ಣನ ಎದುರು ಪುನೀತ್ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು