ನಟ ಪುನೀತ್ ರಾಜ್ಕುಮಾರ್ ನಿಧನರಾಗಿ 11 ದಿನ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು (ನ.8) ಅವರ ಪುಣ್ಯ ಸ್ಮರಣೆ ಕಾರ್ಯ ನಡೆಯುತ್ತಿದೆ. 11ನೇ ದಿನದ ಪೂಜೆಯಲ್ಲಿ ಅಪ್ಪು ಕುಟುಂಬದವರು ಭಾಗಿ ಆಗಿದ್ದಾರೆ. ಭಾನುವಾರ (ನ.7) ರಾತ್ರಿಯಿಂದಲೇ ಈ ಕಾರ್ಯಕ್ಕೆ ಸಕಲ ಸಿದ್ಧತೆ ಶುರುವಾಗಿತ್ತು. ಇಂದು ಬೆಳಗ್ಗೆಯೇ ಪುನೀತ್ ರಾಜ್ಕುಮಾರ್ ನಿವಾಸದಲ್ಲಿ ಪೂಜಾ ಕಾರ್ಯಗಳು ಆರಂಭ ಆಗಿವೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಅಪ್ಪು ಪತ್ನಿ ಅಶ್ವಿನಿ, ಮಕ್ಕಳಾದ ಧ್ರುತಿ, ವಂದಿತಾ, ಸಹೋದರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಪುನೀತ್ ಸಮಾಧಿ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಲಿದ್ದಾರೆ.
ಹೇಗೆ ನಡೆಯಲಿದೆ ಕಾರ್ಯ?
ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿದ ಕ್ಷಣದಿಂದಲೂ ಎಲ್ಲವನ್ನೂ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. ಎಲ್ಲಿಯೂ ಗೊಂದಲಕ್ಕೆ ಎಡೆಮಾಡಿಕೊಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದೇ ರೀತಿ ಇಂದು ಕೂಡ 11ನೇ ದಿನದ ಕಾರ್ಯವನ್ನು ಕುಟುಂಬದವರು ನೆರವೇರಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಪುನೀತ್ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಕಾರ್ಯ ಆರಂಭ ಆಗಿದೆ.
ಮನೆಯನ್ನು ಹೂವಿನಿಂದ ಸಿಂಗರಿಸಲಾಗಿದೆ. ಮನೆ ಎದುರು ಶಾಮಿಯಾನ ಹಾಕಿ ವ್ಯವಸ್ಥೆ ಮಾಡಲಾಗಿದೆ. 10 ಗಂಟೆ ಸುಮಾರಿಗೆ ಅಪ್ಪು ಸಮಾಧಿ ಬಳಿ ಕುಟುಂಬಸ್ಥರು ಬರಲಿದ್ದಾರೆ. ಪುನೀತ್ ಅವರಿಗೆ ಇಷ್ಟವಾದ ತಿಂಡಿ-ತಿನಿಸುಗಳನ್ನು ಸಮಾಧಿ ಮುಂದೆ ಇಟ್ಟು ಪೂಜೆ ಮಾಡಲಾಗುತ್ತದೆ. ಈ ಕಾರ್ಯಕ್ಕೆ ಕುಟುಂಬದವರ ಜೊತೆ ಕೆಲವೇ ಕೆಲವು ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
12 ಗಂಟೆವರೆಗೆ ಸಾರ್ವಜನಿಕರಿಗೆ ನೋ ಎಂಟ್ರಿ:
ಪ್ರತಿದಿನ ಅಪಾರ ಸಂಖ್ಯೆಯ ಅಭಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಜನರು ಕಿಲೋ ಮೀಟರ್ಗಟ್ಟಲೆ ಉದ್ದದ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ದಿನವೂ ಕಂಡು ಬರುತ್ತಿದೆ. ಇಂದು 11ನೇ ದಿನದ ಕಾರ್ಯವಾದ್ದರಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬರುವ ಸಾಧ್ಯತೆ ಇದೆ. ಆದರೆ ಮಧ್ಯಾಹ್ನ 12 ಗಂಟೆಯವರೆಗೆ ಕಂಠೀರವ ಸ್ಟುಡಿಯೋ ಆವರಣದೊಳಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 12 ಗಂಟೆ ಬಳಿಕ ಅಪ್ಪು ಸಮಾಧಿ ದರ್ಶನ ಮಾಡಲು ಅಭಿಮಾನಿಗಳಿಗೆ ಅವಕಾಶ ಸಿಗಲಿದೆ. ಮಂಗಳವಾರ (ನ.9) ಅರಮನೆ ಮೈದಾನದಲ್ಲಿ ಅನ್ನ ಸಂತರ್ಪಣೆ ಮಾಡಲಾಗುವುದು.
ಇದನ್ನೂ ಓದಿ:
ಪುನೀತ್ ಸಮಾಧಿ ಬಳಿ ಬಂದು ಹಾಡು ಹೇಳಿದ ಮಕ್ಕಳು; ಪುಟ್ಟ ಹೃದಯಗಳಿಗೆ ಅಪ್ಪು ಎಂದರೆ ಪಂಚಪ್ರಾಣ
ಎಂದಿಗೂ ಮುಗಿಯದ ಪುನೀತ್ ರಾಜ್ಕುಮಾರ್ ನೆನಪು; ಇಲ್ಲಿವೆ ಅತಿ ಅಪರೂಪದ ಫೋಟೋಗಳು
Published On - 7:46 am, Mon, 8 November 21