ನಟ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಭಾನುವಾರ (ಅ.31) ಮುಂಜಾನೆ 7.30ಕ್ಕೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ರಾಜ್ಕುಮಾರ್ ಕುಟುಂಬದವರು ಈಡೀಗ ಸಂಪ್ರದಾಯದಂತೆ ಕಾರ್ಯ ನೆರವೇರಿಸಿದ್ದಾರೆ. ಪುನೀತ್ಗೆ ಗಂಡು ಮಕ್ಕಳು ಇಲ್ಲದ ಕಾರಣ ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜ್ಕುಮಾರ್ ಅವರಿಂದ ಅಂತಿಮ ವಿಧಿವಿಧಾನ ಮಾಡಿಸಲಾಗಿದೆ. ತಂದೆ ಡಾ. ರಾಜ್ಕುಮಾರ್, ತಾಯಿ ಪಾರ್ವತಮ್ಮ ಸಮಾಧಿಯ ಪಕ್ಕದಲ್ಲೇ ಪುನೀತ್ ಪಾರ್ಥಿವ ಶರೀರವನ್ನು ಮಣ್ಣು ಮಾಡಲಾಗಿದೆ.
ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ, ಸಹೋದರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಕಣ್ಣೀರು ಹಾಕುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಚಿತ್ರರಂಗ ಹಾಗೂ ರಾಜಕೀಯದ ಅನೇಕ ಗಣ್ಯರು ಭಾಗಿ ಆಗಿದ್ದರು. ಕಂಠೀರವ ಸ್ಟುಡಿಯೋ ಆವರಣದ ಒಳಗೆ ಕುಟುಂಬದವರಿಗೆ ಮತ್ತು ಗಣ್ಯರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.
ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮುನಿರತ್ನ, ರಾಕ್ಲೈಕ್ ವೆಂಕಟೇಶ್, ಕಿಚ್ಚ ಸುದೀಪ್, ರವಿಚಂದ್ರನ್ ಮುಂತಾದವರು ಸ್ಥಳದಲ್ಲಿದ್ದು, ಪುನೀತ್ಗೆ ಅಂತಿಮ ವಿದಾಯ ಹೇಳಿದ್ದಾರೆ. ಡಾ. ರಾಜ್ಕುಮಾರ್ ಸಮಾಧಿಯಿಂದ 125 ಅಡಿ ಅಂತರ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮುಂಭಾಗ ಜಮಾಯಿಸಿದ್ದರು.
ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕಂಠೀರವ ಸ್ಟೇಡಿಯಂನಿಂದ ಪುನೀತ್ ರಾಜ್ಕಮಾರ್ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ಹಣೆಗೆ ಮುತ್ತಿಟ್ಟು ಕಂಬನಿ ಮಿಡಿದರು.
ಪುನೀತ್ ಅಂತಿಮ ದರ್ಶನ, ಮೆರವಣಿಗೆಗೆ ರಾಜ್ಯ ಸರ್ಕಾರ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿತ್ತು. ಬೆಂಗಳೂರಿನಲ್ಲಿ ಭದ್ರತೆಗಾಗಿ 10 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿತ್ತು. 2 ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಂದ ನಮನ ಸಲ್ಲಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸಿದ್ದರು. ಹಗಲು-ರಾತ್ರಿ ಎನ್ನದೆ ಪೊಲೀಸರು ಕರ್ತವ್ಯ ನಿರ್ವಹಿಸಿದರು. ಎಲ್ಲ ಪೊಲೀಸ್ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
Puneeth Rajkumar: ಶಿವಣ್ಣನ ಎದುರು ಪುನೀತ್ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು
‘ಪುನೀತ್ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ
Published On - 7:56 am, Sun, 31 October 21