ಬೆಂಗಳೂರು: ನಟ ಪುನೀತ್ ರಾಜಕುಮಾರ್ ನಿಧನರಾಗಿ ಇಂದಿಗೆ 5 ದಿನಗಳಾಗಿವೆ. ಸಂಪ್ರದಾಯದ ಪ್ರಕಾರ ಪುನೀತ್ ಸಮಾಧಿಗೆ ಹಾಲು- ತುಪ್ಪ ಬಿಡುವ ಕಾರ್ಯ ಇಂದು ನಡೆಯಲಿದೆ. ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಶಿವರಾಜ್‌ಕುಮಾರ್,ರಾಘವೇಂದ್ರ ರಾಜ್ ಕುಮಾರ್ ಕುಟುಂಬ ಸೇರಿದಂತೆ ಆಪ್ತ ಬಳಗ ಭಾಗಿಯಾಗಲಿದೆ. ಇಂದು ಹಾಲು- ತುಪ್ಪ ಕಾರ್ಯದ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ಸ್ಟುಡಿಯೋ ಮುಂದೆ ಜಮಾಯಿಸುತ್ತಿದ್ದು, ಪೊಲೀಸರು ವಾಪಸ್ಸು ಕಳಿಸುತ್ತಿದ್ದಾರೆ. ಸ್ಟುಡಿಯೋದ ಸುತ್ತಮುತ್ತ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಭದ್ರತೆಗಾಗಿ ಸ್ಥಳೀಯ ಪೊಲೀಸರು,ಕೆಎಸ್ಆರ್ಪಿ ತುಕಡಿ, ಆರ್ಎಎಫ್ ಪೊಲೀಸರನ್ನು ನಿಯೋಜಿಸಲಾಗಿದೆ. ಇಂದಿನ ಕಾರ್ಯಕ್ರಮದ ನಂತರ ಅಭಿಮಾನಿಗಳಿಗೆ ಪುನೀತ್ ದರ್ಶನದ ಭಾಗ್ಯ ದೊರೆಯಲಿದೆ.
ನಟ ಶಿವರಾಜ್ ಕುಮಾರ್ ಈ ಕುರಿತು ಹೇಳಿಕೆ ನೀಡಿದ್ದು, ‘‘ಅಭಿಮಾನಿಗಳು ಸಹಕರಿಸಬೇಕು, ಅಪ್ಪುವನ್ನ ನೀವು ನೋಡಲೇ ಬೇಕು. ಆದರೆ ಒಂದೆರಡು ದಿನ, ಆಮೇಲೆ ಎಲ್ಲರೂ ಬಂದು ನೋಡಬಹುದು. ಇವತ್ತು ಕುಟುಂಬಸ್ಥರು ಮಾತ್ರ ಹಾಲು ತುಪ್ಪ ಕಾರ್ಯದಲ್ಲಿ ಭಾಗಿಯಾಗುತ್ತಿದ್ದೇವೆ. ಎಲ್ಲರೂ ಕುಟುಂಬಸ್ಥರೇ ಆದರೆ ಅಲ್ಲಿ ಎಷ್ಟು ಸ್ಥಳಾವಕಾಶ ಇದೆ ಅಷ್ಟೇ ಜನ ಹೋಗಬೇಕಿದೆ. ಅಭಿಮಾನಿಗಳಿಗೆ ಆದ ದುಃಖ ಯಾರು ಭರಿಸೋಕ್ಕೆ ಸಾಧ್ಯವಿಲ್ಲ. ಅಭಿಮಾನಿಗಳು ಬಂದು ನೋಡಲಿ, ಆದರೆ ಒಂದೆರಡು ದಿನ ಆದಮೇಲೆ ಬರಲಿ.’’ ಎಂದು ಮನವಿ ಮಾಡಿದ್ದಾರೆ.
ನಾಲ್ವರಿಗೆ ಬೆಳಕಾದ ಪುನೀತ್:
ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನೇತ್ರದಾನ ಮಾಡಿದ್ದರು. ಅಪ್ಪು ಕಣ್ಣನ್ನು ನಾಲ್ವರಿಗೆ ಅಳವಡಿಕೆ ಮಾಡಲಾಗಿದೆ ಅಂತ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪುನೀತ್ರವರ 2 ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ. ಸಾಮಾನ್ಯವಾಗಿ 2 ಕಣ್ಣು ಇಬ್ಬರಿಗೆ ಅಳವಡಿಸುವುದು ಸಾಮಾನ್ಯ. ಆದರೆ ಪುನೀತ್‌ರ 2 ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ. ಹೊಸ ತಂತ್ರಜ್ಞಾನದ ಮೂಲಕ ನಾಲ್ವರಿಗೆ ದೃಷ್ಟಿ ನೀಡಲಾಗಿದೆ.
ಕಾರ್ನಿಯಾಗಳನ್ನ ಎರಡು ಭಾಗ ಮಾಡಲಾಗಿದೆ. ಮುಂಭಾಗದ ಕಣ್ಣು ಹಾಗೂ ಹಿಂಭಾಗದ ಆಳದ ಪದರಗಳನ್ನ ಭಾಗ ಮಾಡಲಾಗಿತ್ತು. ಯಾರಿಗೆ ಮುಂಭಾಗದ ಕಾರ್ನಿಯಾ ಹಾನಿಯಾಗಿತ್ತೋ ಅವರಿಗೆ ಮುಂಭಾಗದ ಕಾರ್ನಿಯಾ ನೀಡಲಾಗಿದೆ. ಹಿಂಭಾಗದ ಆಳದ ಪದರವನ್ನ ಬೇರೆಯವರಿಗೆ ನೀಡಲಾಗಿದೆ. ಒಟ್ಟು ನಾಲ್ಕು ಜನರಿಗೆ ಒಂದೇ ದಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎಲ್ಲರೂ ಕರ್ನಾಟಕದವರಾಗಿದ್ದು, ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಓರ್ವ ಯುವತಿ ಹಾಗೂ ಮೂವರು ಪುರುಷರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಡಾ.ಭುಜಂಗಶೆಟ್ಟಿ ಹೇಳಿದ್ದಾರೆ. ಡಾ. ರಾಜ್ ಕೂಡ ನೇತ್ರದಾನ ಮಾಡಿದ್ದರು. ಅವರಂತೆಯೇ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ.
ಇದನ್ನೂ ಓದಿ:
‘ಪುನೀತ್ಗೆ ಪದ್ಮಶ್ರೀ ಪ್ರಶಸ್ತಿ ನೀಡಿ’; ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
ಪುನೀತ್ ಅವರ 2 ಕಣ್ಣನ್ನು 4 ಜನರಿಗೆ ಜೋಡಿಸಿದ್ದು ಹೇಗೆ? ವೈದ್ಯರು ತೆರೆದಿಟ್ಟ ಅಚ್ಚರಿ ಮಾಹಿತಿ ಇಲ್ಲಿದೆ
Published On - 7:39 am, Tue, 2 November 21