‘ದಾದಾಸಾಹೇಬ್ ಫಾಲ್ಕೆ’ ರೀತಿಯೇ ಡಾ. ರಾಜ್ ಹೆಸರಲ್ಲಿ ನೀಡುವ ಪ್ರಶಸ್ತಿ ಬಗ್ಗೆ ಹೊಸ ಕನಸು ಕಂಡಿದ್ದ ಪುನೀತ್
Puneeth Rajkumar: ಡಾ. ರಾಜ್ಕುಮಾರ್ ಟ್ರಸ್ಟ್ನಿಂದ ಪ್ರತಿ ವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅದನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಪುನೀತ್ ರಾಜ್ಕುಮಾರ್ ಆಸೆಪಟ್ಟಿದ್ದರು.
ನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ನಿಧನರಾಗಿರುವುದು ತೀವ್ರ ನೋವಿನ ಸಂಗತಿ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಎಂಬ ಕಟು ಸತ್ಯವನ್ನು ಒಪ್ಪಿಕೊಂಡು ಮುಂದೆ ಸಾಗಬೇಕಾದ ಅನಿವಾರ್ಯತೆ ಇದೆ. ಜೀವನದಲ್ಲಿ ನೂರಾರು ಯೋಜನೆಗಳನ್ನು ಪುನೀತ್ ಹಾಕಿಕೊಂಡಿದ್ದರು. ಅವು ಯಾವುದೂ ಕೂಡ ತಮಗಾಗಿ ಅಲ್ಲ. ಪರೋಪಕಾರಕ್ಕಾಗಿ ಅವರು ಹಗಲಿರುಳು ಶ್ರಮಿಸುತ್ತಿದ್ದರು. ಆದರೆ ಅದನ್ನು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅವರ ನಿಧನದ ನಂತರ ಅನೇಕ ವಿಚಾರಗಳು ಹೊರಬರುತ್ತಿವೆ. ಪುನೀತ್ ಕಂಡ ಒಂದು ಕನಸಿನ ಬಗ್ಗೆ ರಾಘವೇಂದ್ರ ರಾಜ್ಕುಮಾರ್ ಅವರು ಈಗ ವಿವರಿಸಿದ್ದಾರೆ.
ಡಾ. ರಾಜ್ಕುಮಾರ್ ಟ್ರಸ್ಟ್ನಿಂದ ಪ್ರತಿ ವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅದನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಪುನೀತ್ ಆಸೆಪಟ್ಟಿದ್ದರು. ಆ ಕನಸನ್ನು ಸಹೋದರ ರಾಘವೇಂದ್ರ ರಾಜ್ಕುಮಾರ್ ಜೊತೆ ಹೇಳಿಕೊಂಡಿದ್ದರು. ಅದು ನನಸಾಗುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿರುವುದು ದುಃಖದ ಸಂಗತಿ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಾಘಣ್ಣ ಪೋಸ್ಟ್ ಮಾಡಿದ್ದಾರೆ.
‘ಇತ್ತೀಚೆಗೆ ನನಗೆ ದಾದಾಸಾಹೇಬ್ ಫಾಲ್ಕೆ ಎಮ್ಎಸ್ಕೆ ಟ್ರಸ್ಟ್ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅಪ್ಪುಗೆ ಎಲ್ಲಿಲ್ಲದ ಸಂತೋಷ. ನನ್ನನ್ನು ತಕ್ಷಣ ಭೇಟಿ ಮಾಡಿ, ಈ ಸೆಲ್ಫಿ ತೆಗೆದು, ರಾಘಣ್ಣ.. ನಾವೂ ಸಹ ಈ ಮೂರ್ತಿಯ ರೂಪದ ಹಾಗೆ ಅಪ್ಪಾಜಿಯವರ ಮೂರ್ತಿಯನ್ನು ಮಾಡಿ ಎಂದಿನಂತೆ ಡಾ. ರಾಜ್ಕುಮಾರ್ ಟ್ರಸ್ಟ್ನಿಂದ ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಮಾಡೋಣ ಅಂತ ಹೇಳಿದ್ದನು. ಅಪ್ಪು ನಿನ್ನ ಆಲೋಚನೆಗೆ ನನ್ನದೊಂದು ನಮನ. ಲವ್ ಯೂ ಮಗನೆ’ ಎಂದು ರಾಘವೇಂದ್ರ ರಾಜ್ಕುಮಾರ್ ಬರೆದುಕೊಂಡಿದ್ದಾರೆ.
View this post on Instagram
ಕಂಠೀರವ ಸ್ಡುಡಿಯೋ ಆವರಣದಲ್ಲಿ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನಡೆದು ಇಂದಿಗೆ (ನ.2) ಮೂರನೇ ದಿನ. ಆ ಪ್ರಯುಕ್ತ ಕುಟುಂಬದವರು ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯ ನೆರವೇರಿಸಿದ್ದಾರೆ. ಈ ಕಾರ್ಯ ಮುಗಿದ ನಂತರದಲ್ಲಿ ಸಾರ್ವಜನಿಕರಿಗೆ ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಈ ಹಿಂದೆ ರಾಘಣ್ಣ ಹೇಳಿದ್ದರು.
ಇದನ್ನೂ ಓದಿ:
ಪುನೀತ್ ಅಂತ್ಯಕ್ರಿಯೆ ಮರುದಿನ ಹೇಗಿದೆ ಶಿವಣ್ಣನ ದಿನಚರಿ? ನೋವು ನುಂಗಿಕೊಂಡು ಮುಂದಿನ ಹೆಜ್ಜೆ ಇಟ್ಟ ಶಿವರಾಜ್ಕುಮಾರ್