Puneeth Rajkumar: ಪುನೀತ್​ರನ್ನೇ ಹೋಲುತ್ತಾರೆ ಈ ನಾಯಕ ನಟ; ಅವರ ಹೊಸ ಸಿನಿಮಾ ಯಾವುದು?

| Updated By: shivaprasad.hs

Updated on: Feb 23, 2022 | 7:45 PM

Anand Arya | Marakastra Movie: ಸ್ಯಾಂಡಲ್​ವುಡ್ ನಟ ಆನಂದ್ ಆರ್ಯ ಅವರಿಗೆ ಇದು ಎರಡನೇ ಸಿನಿಮಾ. ಥೇಟ್ ಪುನೀತ್​ ರಾಜ್​ಕುಮಾರ್​ರಂತೆಯೇ ಇರುವ ಅವರು, ತಮ್ಮ ಲುಕ್, ಹೊಸ ಸಿನಿಮಾ ಮೊದಲಾದವುಗಳ ಬಗ್ಗೆ ಮಾತನಾಡಿದ್ದಾರೆ.

Puneeth Rajkumar: ಪುನೀತ್​ರನ್ನೇ ಹೋಲುತ್ತಾರೆ ಈ ನಾಯಕ ನಟ; ಅವರ ಹೊಸ ಸಿನಿಮಾ ಯಾವುದು?
ನಟ ಆನಂದ್ ಆರ್ಯ
Follow us on

ಸಾಮಾನ್ಯವಾಗಿ ಖ್ಯಾತ ತಾರೆಯರಂತೆಯೇ ಇರುವ ವ್ಯಕ್ತಿಗಳು ಜನರ ಗಮನಸೆಳೆಯುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇರುವುದನ್ನೂ ಕಾಣಬಹುದು. ಇದೀಗ ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟರಂತೆಯೇ ಇರುವ ಕಲಾವಿದರೊಬ್ಬರು ಹೊಸ ಚಿತ್ರಕ್ಕೆ ನಾಯಕರಾಗಿದ್ದಾರೆ. ಹೌದು. ಸ್ಯಾಂಡಲ್​ವುಡ್ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​​ರಂತೆಯೇ (Puneeth Rajkumar) ಇರುವ ಕಲಾವಿದ ಆನಂದ್ ಆರ್ಯ (Anand Arya) ಸದ್ಯ ಎಲ್ಲೆಡೆ ಸಖತ್ ಸುದ್ದಿಮಾಡುತ್ತಿದ್ದಾರೆ. ಅವರನ್ನು ನೋಡಿದರೆ ನೀವು ಒಂದರೆ ಕ್ಷಣ ಅಪ್ಪುರಂತೆಯೇ ಇದ್ದಾರಲ್ಲಾ! ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು. ಪುನೀತ್ ಅವರಂತೆ ಹಾವಭಾವವಿದೆ, ಅವರಂತೆ ಮಾತನಾಡುತ್ತೀರಿ ಎಂದು ಹಲವು ಜನರು ಆನಂದ್ ಆರ್ಯಗೆ ಹೇಳಿದ್ದಾರಂತೆ. ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಆರ್ಯ, ‘‘ಪುನೀತ್ ನನಗೆ ಆದರ್ಶ. ಆದರೆ ಎಲ್ಲೂ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ’’ ಎಂದಿದ್ದಾರೆ. ಇತ್ತೀಚೆಗಷ್ಟೇ ಆನಂದ್ ಆರ್ಯ ಅವರ ಹೊಸ ಸಿನಿಮಾದ ಮುಹೂರ್ತವಾಗಿದೆ. ಪುನೀತ್ ಭಾವಚಿತ್ರಕ್ಕೆ ನಮಿಸಿ ಚಿತ್ರದ ಮುಹೂರ್ತ ನಡೆಸಲಾಯಿತು.

‘ಮಾರಕಾಸ್ತ್ರ’ಕ್ಕೆ ಆನಂದ್ ಆರ್ಯ ನಾಯಕ:

ಸ್ಯಾಂಡಲ್​​ವುಡ್​ನಲ್ಲಿ ವಿಭಿನ್ನ ಕತಾ ವಸ್ತುಗಳನ್ನು ಇಟ್ಟುಕೊಂಡು ಹೊಸ ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ಅದೇ ರೀತಿ ಮಾರಕಾಸ್ತ್ರ ಸಿನಿಮಾದ ಮುಹೂರ್ತ ಕೂಡ ಇತ್ತೀಚೆಗೆ ನಡೆಯಿತು. ಆನಂದ್ ಆರ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಎರಡನೇ ಸಿನಿಮಾ. ನಿರ್ದೇಶಕನಾಗಿ ಗುರುಮೂರ್ತಿ ಸುನಾಮಿ ಆ್ಯಕ್ಷನ್​ಕಟ್​ ಹೇಳುತ್ತಿರುವ ಈ ಚಿತ್ರಕ್ಕೆ, ಕೋಮಲ ನಟರಾಜ್ ಬಂಡವಾಳ ಹೂಡಿದ್ದಾರೆ. ಮಿರಾಕಲ್ ಮಂಜು ಸಾಹಿತ್ಯ ಬರೆದು ಸಂಗೀತ ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಆನಂದ್ ಆರ್ಯ ತಮ್ಮ ಹಿನ್ನೆಲೆ ಹೇಳಿಕೊಂಡಿದ್ದಾರೆ. ಅವರು ಮೊದಲು ’ಛಾಯೆ’ ಎನ್ನುವ ಸಿನಿಮಾ ಮಾಡಿದ್ದರಂತೆ. ಅದಕ್ಕೂ ಮುನ್ನ ಇಂಟೀರಿಯರ್ ಡಿಸೈನರ್ ಆಗಿದ್ದರಂತೆ. ಇದೀಗ ಒಂದೆರಡು ಪ್ರಾಜೆಕ್ಟ್ ಸಿಕ್ಕಿದೆ ಎಂದು ಆನಂದ್ ಹೇಳಿದ್ದಾರೆ. ‘‘ಮಾರಕಾಸ್ತ್ರ ಸಿನಿಮಾ ಸಿಕ್ಕಿದ್ದು ಒಂದು ಎಂಟು ಹತ್ತು ತಿಂಗಳ ಹಿಂದೆ. ಆಗ ಕತೆ ಕೇಳಿದಾಗ ಒಂದು ಐದು ಪ್ರತಿಶತ ಮಾತ್ರ ಅರ್ಥವಾಗಿತ್ತು. ಸಿನಿಮಾದ ಟೈಟಲ್ ‘ದೇಶದ ರಕ್ಷಣೆಗಾಗಿ’ ಎಂದು. ಇದನ್ನು ಕೇಳಿ ಸಿನಿಮಾ ಒಪ್ಪಿಕೊಂಡೆ. ಇದರ ಕುರಿತು ಮತ್ತಷ್ಟು ಹೇಳುವುದಾದರೆ ಇದು ಡಿಟೆಕ್ಟಿವ್ ಪಾತ್ರ. ಹಾಡುಗಳು, ಸಾಹಿತ್ಯ ಎಲ್ಲವೂ ಬಹಳ ಅದ್ಭುತವಾಗಿ ಮೂಡಿಬಂದಿದೆ. ಹಾಡನ್ನು ಕೇಳುತ್ತಾ ಎಲ್ಲೋ ಒಂದೆಡೆ ಅಪ್ಪು ಸರ್ ಬಹಳ ನೆನಪಾದರು’’ ಎಂದಿದ್ದಾರೆ ಆನಂದ್ ಆರ್ಯ.

2000ನೇ ಕಾಲಘಟ್ಟದಲ್ಲೇ ಪುನೀತ್ ಬಂದಿದ್ದರು. ನಮಗೆ ಅವರು ಸ್ಫೂರ್ತಿ. ಚಿತ್ರಕ್ಕಾಗಿ ತಮ್ಮಿಂದ ಏನು ಸಾಧ್ಯವಾಗುತ್ತದೋ ಅದನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ ಆನಂದ್. ದೇಶಪ್ರೇಮ ಹಾಗೂ ಲೇಖನಿಯ ಶಕ್ತಿಯನ್ನು ‘ಮಾರಕಾಸ್ತ್ರ’ ಚಿತ್ರದಲ್ಲಿ ಕಟ್ಟಿಕೊಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ಮಾರ್ಚ್​​ನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಚಿತ್ರಕ್ಕೆ ಮಾಧುರ್ಯ ನಾಯಕಿಯಾಗಿದ್ದಾರೆ.

ಆನಂದ್ ಆರ್ಯ ಮಾತನಾಡಿರುವ ವಿಡಿಯೋ ಇಲ್ಲಿದೆ:

ಇದನ್ನೂ ಓದಿ:

ಜಾಕ್ವೆಲಿನ್, ನೋರಾ ನಂತರ ಸಾರಾ, ಜಾಹ್ನವಿ ಕಪೂರ್ ಅವರನ್ನೂ ಟಾರ್ಗೆಟ್ ಮಾಡಿದ್ದ ವಂಚಕ ಸುಕೇಶ್; ಹೇಗೆಲ್ಲಾ ಆಮಿಷ ನೀಡಿದ್ದ ಗೊತ್ತಾ?

‘ಚೇತನ್​ ಬಗ್ಗೆ ಚಿಂತೆ ಬೇಡ, ಸ್ಟ್ರಾಂಗ್​​ ಆಗಿದ್ದಾರೆ’; ನ್ಯಾಯಾಂಗ ಬಂಧನ ಕುರಿತು ನಟನ ಪತ್ನಿ ಪ್ರತಿಕ್ರಿಯೆ

Published On - 3:27 pm, Wed, 23 February 22