
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಂಡರೆ ಮಕ್ಕಳಿಂದ ಹಿಡಿದು ವಯಸ್ಸಾದ ವ್ಯಕ್ತಿಗಳವರೆಗೂ ಅಚ್ಚುಮೆಚ್ಚು. ಈಗ ಅವರಿಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ. ಪುನೀತ್ ನಮ್ಮ ಜೊತೆ ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳೋಕೆ ಯಾರೊಬ್ಬರೂ ಸಿದ್ಧರಿಲ್ಲ. ಅವರಿಲ್ಲ ಎಂದರೂ ಅವರು ಮಾಡಿದ ಕೆಲಸಗಳು ನಮ್ಮ ಮುಂದಿವೆ. ಈಗ ಪುನೀತ್ ಅವರ ‘ಗಂಧದ ಗುಡಿ’ ಡಾಕ್ಯುಮೆಂಟರಿ ರಿಲೀಸ್ಗೆ ರೆಡಿ ಇದೆ. ಶುಕ್ರವಾರ (ಅಕ್ಟೋಬರ್ 28) ಈ ಸಾಕ್ಷ್ಯಚಿತ್ರ ಬಿಡುಗಡೆ ಆಗುತ್ತಿದೆ. ಇಂದು (ಅಕ್ಟೋಬರ್ 27) ಹಲವು ಕಡೆಗಳಲ್ಲಿ ಇದರ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದ್ದು, ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ. ಈ ಮಧ್ಯೆ ಪುನೀತ್ ಅವರ ಹಳೆಯ ಟ್ವೀಟ್ ವೈರಲ್ ಆಗಿದೆ.
ಪುನೀತ್ ರಾಜ್ಕುಮಾರ್ ಅವರು ಸಾಕಷ್ಟು ಕನಸುಗಳನ್ನು ಕಂಡಿದ್ದ ವ್ಯಕ್ತಿ. ಕೇವಲ ನಟನೆ ಮಾತ್ರವಲ್ಲದೆ ನಿರ್ಮಾಣದಲ್ಲೂ ಬ್ಯುಸಿ ಇದ್ದರು. ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಪುನೀತ್ ರಾಜ್ಕುಮಾರ್ ಅವರು ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಮಾಡುತ್ತಾರೆ ಎಂಬುದು ಮೊದಲೇ ಚರ್ಚೆಯಲ್ಲಿತ್ತು. ಕಳೆದ ವರ್ಷ ಇದೇ ದಿನ (ಅಕ್ಟೋಬರ್ 27,2021) ಅಪ್ಪು ಈ ಬಗ್ಗೆ ಒಂದು ಅಪ್ಡೇಟ್ ನೀಡಿದ್ದರು.
‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪುನೀತ್ ಟ್ವೀಟ್ ಮಾಡಿದ್ದರು. ಇದರಲ್ಲಿ ನವೆಂಬರ್ 1ರಂದು ವಿಶೇಷ ಘೋಷಣೆ ಮಾಡುವ ವಿಚಾರ ತಿಳಿಸಿದ್ದರು. ಈ ಟ್ವೀಟ್ ಮಾಡಿದ ಎರಡೇ ದಿನಕ್ಕೆ ಪುನೀತ್ ನಿಧನ ಹೊಂದಿದರು.
ಇದನ್ನೂ ಓದಿ: ಅಂತೂ ಮೌನ ಮುರಿದ ಅಶ್ವಿನಿ ಪುನೀತ್ ರಾಜ್ಕುಮಾರ್; ‘ಗಂಧದ ಗುಡಿ’ ಬಗ್ಗೆ ಇಲ್ಲಿದೆ ಮೊದಲ ಸಂದರ್ಶನ
ಅಕ್ಟೋಬರ್ 29ರಂದು ಪುನೀತ್ಗೆ ಹೃದಯಾಘಾತವಾಯಿತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಅವರು ಮೃತಪಟ್ಟ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿತು. ಅವರನ್ನು ಕಳೆದುಕೊಂಡ ಚಿತ್ರರಂಗ ಬಡವಾಯಿತು. ಈಗ ಅವರ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ರಿಲೀಸ್ ಆಗುತ್ತಿದೆ. ಇದಕ್ಕೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅಕ್ಟೋಬರ್ 29ರಂದು ಪುನೀತ್ ಪುಣ್ಯತಿಥಿ ಇರುವುದರಿಂದ ನಾನಾ ರೀತಿಯ ಸಮಾಜಿಮುಖಿ ಕಾರ್ಯಗಳನ್ನು ಮಾಡಲು ಪ್ಲ್ಯಾನ್ ರೂಪಿಸಲಾಗಿದೆ.
Published On - 8:57 am, Thu, 27 October 22