
ಪುನೀತ್ ರಾಜ್ಕುಮಾರ್ (Puneeth Rajkumar) ಅಗಲಿ ವರ್ಷಗಳು ಕಳೆದರೂ ಅಭಿಮಾನಿಗಳ ಮನಸ್ಸುಗಳಲ್ಲಿ ಇನ್ನೂ ಭದ್ರವಾಗಿ ನೆಲೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವೂ ಅಪ್ಪು ಅವರ ಚಿತ್ರ, ವಿಡಿಯೋ, ಸಿನಿಮಾ ದೃಶ್ಯಗಳು, ಅಪ್ಪು ಅವರ ಬಗೆಗಿನ ಪೋಸ್ಟ್ಗಳು ಹರಿದಾಡುತ್ತಲೇ ಇರುತ್ತವೆ. ಇನ್ನು ರಸ್ತೆಗಳಲ್ಲಂತೂ ಕೇಳುವುದೇ ಬೇಡ. ಎಲ್ಲಿ ನೋಡಿದರೂ ಅಪ್ಪು ಭಾವಚಿತ್ರಗಳು ಈಗಲೂ ರಾರಾಜಿಸುತ್ತಲೇ ಇವೆ. ಟಿವಿಗಳಲ್ಲಿ ಅಪ್ಪು ಅವರ ಸಿನಿಮಾಗಳು ಪ್ರಸಾರ ಆಗುತ್ತಲೇ ಇರುತ್ತವೆ. ಒಟಿಟಿಗಳಲ್ಲಿಯೂ ಅಪ್ಪು ಅವರ ಸಿನಿಮಾಗಳಿಗೆ ಬಲು ಬೇಡಿಕೆ. ಇದೀಗ ಅಪ್ಪು ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ಒಂದು ಮರು ಬಿಡುಗಡೆ ಆಗುತ್ತಿದೆ.
ಪುನೀತ್ ರಾಜ್ಕುಮಾರ್ ನಾಯಕನಾಗಿ ನಟಿಸಿದ ಐದನೇ ಸಿನಿಮಾ ‘ಆಕಾಶ್’, ಅಪ್ಪು ಅವರ ಹುಟ್ಟುಹಬ್ಬದ ಪ್ರಯುಕ್ತ ಮರು ಬಿಡುಗಡೆ ಆಗುತ್ತಿದೆ. 2005 ರಲ್ಲಿ ಬಿಡುಗಡೆ ಆಗಿದ್ದ ‘ಆಕಾಶ್’ ಸಿನಿಮಾ ಇದೀಗ 20 ವರ್ಷಗಳ ಬಳಿಕ ಮರು ಬಿಡುಗಡೆ ಆಗುತ್ತಿದೆ. ಮಾರ್ಚ್ 13 ರಂದು ‘ಆಕಾಶ್’ ಸಿನಿಮಾ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಆಯ್ದ ಚಿತ್ರಮಂದಿರಗಳಲ್ಲಿ ಮತ್ತೆ ಪ್ರದರ್ಶನ ಕಾಣಲಿದೆ.
2005 ರಲ್ಲಿ ಬಿಡುಗಡೆ ಆಗಿದ್ದ ‘ಆಕಾಶ್’ ಸಿನಿಮಾ ಆಗಿನ ಕಾಲದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದಾಗಿತ್ತು. 200 ದಿನಗಳ ಕಾಲ ಸಹ ಪ್ರದರ್ಶನ ಕಂಡಿತ್ತು ಈ ಸಿನಿಮಾ. ಆಕಾಶ್ ಹೆಸರಿನ ಸರಳ, ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ಪುನೀತ್ ರಾಜ್ಕುಮಾರ್ ನಟಿಸಿದ್ದರು. ಸಿನಿಮಾದ ನಾಯಕಿಯಾಗಿ ನಟಿಸಿದ್ದು ನಟಿ ರಮ್ಯಾ. ‘ಆಕಾಶ್’ ಸಿನಿಮಾದ ‘ನೀನೆ ನೀನೆ ಮನಸೆಲ್ಲ ನೀನೆ’ ಹಾಡು ಇಂದಿಗೂ ಸಹ ಕನ್ನಡದ ಬಲು ಜನಪ್ರಿಯ ಹಾಡುಗಳಲ್ಲಿ ಒಂದು.
ಇದನ್ನೂ ಓದಿ:ಅಶ್ವಿನಿ ಪುನೀತ್ ರಾಜ್ಕುಮಾರ್ ಹಾರೈಕೆಯಿಂದ ಸೆಟ್ಟೇರಿತು ‘ರಕ್ಕಿ’ ಸಿನಿಮಾ
ಮಾರ್ಚ್ 17 ಪುನೀತ್ ರಾಜ್ಕುಮಾರ್ ಅವರ ಜನ್ಮದಿನ. ಅದಕ್ಕೆ ತುಸು ಮುಂಚಿತವಾಗಿ ಅಂದರೆ ಮಾರ್ಚ್ 13ರಂದೇ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಮಾಡಲಾಗುತ್ತಿದೆ. ಪಿಆರ್ಕೆ ಪ್ರೊಡಕ್ಷನ್ಸ್ ವತಿಯಿಂದ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಮಾಡಲಾಗುತ್ತಿದ್ದು, ಮರು ಬಿಡುಗಡೆ ಪೋಸ್ಟರ್ ಅನ್ನು ರಾಘವೇಂದ್ರ ರಾಜ್ಕುಮಾರ್, ಪಿಆರ್ಕೆ ಪ್ರೊಡಕ್ಷನ್ ಇನ್ನಿತರರು ಹಂಚಿಕೊಂಡಿದ್ದಾರೆ. ನಟಿ ರಮ್ಯಾ ಸಹ ‘ಆಕಾಶ್’ ಸಿನಿಮಾ ಮರು ಬಿಡುಗಡೆಗೆ ಪ್ರಚಾರ ಮಾಡುವ ಸಾಧ್ಯತೆ ಇದೆ.
‘ಆಕಾಶ್’ ಸಿನಿಮಾವನ್ನು ಮಹೇಶ್ ಬಾಬು ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾ ನಿರ್ಮಾಣ ಮಾಡಿದ್ದಿದ್ದು ಪಾರ್ವತಮ್ಮ ರಾಜ್ಕುಮಾರ್ ಅವರೇ. ಸಿನಿಮಾಕ್ಕೆ ಆಗಿನ ಸ್ಟಾರ್ ಸಂಗೀತ ನಿರ್ದೇಶಕ ಆರ್ಪಿ ಪಟ್ನಾಯಕ್ ಸಂಗೀತ ನೀಡಿದ್ದರು. ಸಿನಿಮಾದ ‘ನೀನೆ ನೀನೆ ಹಾಡು’ ಸೇರಿದಂತೆ ಇನ್ನೂ ಕೆಲವು ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಕುನಾಳ್ ಗಾಂಜಾವಾಲ ಅವರು ‘ನೀನೆ ನೀನೆ’ ಹಾಡು ಹಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Sat, 3 January 26