ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಇಂದು ಭೌತಿಕವಾಗಿ ನಮ್ಮ ಜೊತೆ ಇಲ್ಲದೇ ಇರಬಹುದು. ಆದರೆ ಅವರ ನೆನಪು ಸದಾ ಶಾಶ್ವತ. ಎಲ್ಲ ವಿಶೇಷ ಸಂದರ್ಭಗಳಲ್ಲೂ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಹಬ್ಬ-ಹರಿದಿನಗಳಲ್ಲಿ ಅಪ್ಪು ಬಹುವಾಗಿ ನೆನಪಾಗುತ್ತಾರೆ. ಪ್ರತಿ ಹಬ್ಬಕ್ಕೂ ಅವರು ಮನಸಾರೆ ವಿಶ್ ಮಾಡುತ್ತಿದ್ದರು. ಆ ವಿಡಿಯೋಗಳು ಈಗ ವೈರಲ್ ಆಗುತ್ತಿವೆ. ಈ ಹಿಂದೆ ದೀಪಾವಳಿ (Deepavali 2022) ಹಬ್ಬಕ್ಕೆ ಪುನೀತ್ ರಾಜ್ಕುಮಾರ್ ಅವರು ಎಲ್ಲ ಅಭಿಮಾನಿಗಳಿಗೆ ಶುಭ ಕೋರಿದ್ದರು. ಆ ವಿಡಿಯೋಗಳನ್ನು ಈಗ ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಈ ವಿಡಿಯೋಗಳನ್ನು ನೋಡಿದರೆ ನಿಜವಾಗಿಯೂ ಪುನೀತ್ ರಾಜ್ಕುಮಾರ್ ಅವರು ಮೇಲಿಂದ ಎಲ್ಲ ಅಭಿಮಾನಿಗಳಿಗೆ ಶುಭ ಕೋರುತ್ತಿದ್ದಾರೆ ಎನಿಸುತ್ತದೆ. ಅವರು ನಮ್ಮ ನಡುವೆ ಇಲ್ಲವಲ್ಲ ಎಂಬ ಸತ್ಯ ಅರಿವಾದಾಗ ಹೃದಯ ಭಾರ ಆಗುತ್ತದೆ. ಪ್ರತಿ ಸಂದರ್ಭದಲ್ಲೂ ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಲೇ ಇದ್ದಾರೆ. ರಸ್ತೆ, ಪಾರ್ಕ್, ವೃತ್ತ ಮುಂತಾದವುಗಳಿಗೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡುವ ಮೂಲಕ ನಮನ ಸಲ್ಲಿಸಲಾಗುತ್ತಿದೆ. ಎಲ್ಲ ವಿಶೇಷ ಸಂದರ್ಭದಲ್ಲೂ ಅಪ್ಪು ಪೋಟೋ ಹಿಡಿದು ಬರುತ್ತಾರೆ ಅಭಿಮಾನಿಗಳು.
ಸಿನಿಮಾಗಳ ಮೂಲಕ ಪುನೀತ್ ರಾಜ್ಕುಮಾರ್ ಅವರು ಸದಾ ಶಾಶ್ವತವಾಗಿ ಇರುತ್ತಾರೆ. ನೋಡನೋಡುತ್ತಿದ್ದಂತೆಯೇ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ದಿನಾಂಕ ಹತ್ತಿರವಾಗಿದೆ. ಅಕ್ಟೋಬರ್ 29ರಂದು ಅವರು ನಮ್ಮೆಲ್ಲರನ್ನು ಅಗಲಿ ಒಂದು ವರ್ಷ ಕಳೆಯುತ್ತದೆ. ಈ ಸಲುವಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಳ್ಳುತ್ತಿದ್ದಾರೆ.
ಪುನೀತ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಗೂ ಒಂದು ದಿನ ಮುನ್ನ ಅಂದರೆ, ಅಕ್ಟೋಬರ್ 28ರಂದು ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ. ಸಿನಿಮಾದ ರೀತಿಯೇ ಅದ್ದೂರಿಯಾಗಿ ಎಲ್ಲ ಚಿತ್ರಮಂದಿರಗಳಲ್ಲೂ ಈ ಡಾಕ್ಯುಮೆಂಟರಿ ಪ್ರದರ್ಶನ ಕಾಣಲಿದೆ. ಅದಕ್ಕಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಸಕಲ ತಯಾರಿ ನಡೆಸಿದ್ದಾರೆ. ಇತ್ತೀಚೆಗಷ್ಟೇ ‘ಪುನೀತ ಪರ್ವ’ ಹೆಸರಿನಲ್ಲಿ ಇದರ ಪ್ರೀ-ರಿಲೀಸ್ ಇವೆಂಟ್ ಮಾಡಲಾಯಿತು.
‘ಗಂಧದ ಗುಡಿ’ ಸಾಕ್ಷ್ಯಚಿತ್ರ ಪುನೀತ್ ರಾಜ್ಕುಮಾರ್ ಅವರ ಕನಸಿನ ಪ್ರಾಜೆಕ್ಟ್. ಕರುನಾಡಿನ ಕಾಡುಗಳಲ್ಲಿ ಅಲೆದಾಡಿ ಅವರು ಈ ಡಾಕ್ಯುಮೆಂಟರಿ ಸಿದ್ಧಪಡಿಸಿದ್ದಾರೆ. ಅವರಿಗೆ ಅಮೋಘವರ್ಷ ಸಾಥ್ ನೀಡಿದ್ದಾರೆ. ಚಿತ್ರಮಂದಿರದಲ್ಲಿ ನೋಡಿದಾಗ ಅಭಿಮಾನಿಗಳಿಗೆ ಇದು ಹೊಸ ಅನುಭವ ನೀಡಲಿದೆ. ಈ ಚಿತ್ರ ಸೂಪರ್ ಹಿಟ್ ಆಗಬೇಕು ಎಂದು ಎಲ್ಲರೂ ಹಾರೈಸಿದ್ದಾರೆ. ‘ಕೆಜಿಎಫ್ ಚಿತ್ರಕ್ಕಿಂತಲೂ ದೊಡ್ಡ ಹಿಟ್ ಆಗಬೇಕು’ ಎಂದು ಯಶ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:30 am, Mon, 24 October 22