
ಸಾಯಿ ಶಶಿ (Sai Shashi) ಅಭಿನಯದ ‘ಧರ್ಮಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಾಗಮುಖ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿಭಿನ್ನ ಕಥಾ ಹಂದರ ಇದೆ. ಚಿತ್ರತಂಡದ ಪ್ರಯತ್ನವನ್ನು ಆರ್. ಚಂದ್ರು (R. Chandru) ಅವರು ಮೆಚ್ಚಿಕೊಂಡಿದ್ದಾರೆ. ಹಾಡು ಮತ್ತು ಸಿನಿಮಾದ ತುಣುಕುಗಳನ್ನು ನೋಡಿದ ಬಳಿಕ ಆರ್. ಚಂದ್ರು ಅವರು ‘ಧರ್ಮಂ’ (Dhramam Movie) ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ನೀನೇ ತಂದ ಒಲವಾ ಒಡವೆ’ ಹಾಡು ಅಕ್ಟೋಬರ್ 13ರಂದು ಬಿಡುಗಡೆ ಆಗಿದೆ.
ಸಾಯಿ ಶಶಿ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ವರ್ಣಿಕಾ ಶೆಟ್ಟಿ ಅವರು ನಾಯಕಿ ಆಗಿದ್ದಾರೆ. ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನೆಲ್ ಮೂಲಕ ‘ಧರ್ಮಂ’ ಸಿನಿಮಾದ ಹಾಡು ಬಿಡುಗಡೆ ಆಗಿದೆ. ಹಲವು ವಿಭಿನ್ನ ಲೋಕೇಶನ್ಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಮಲೆ ಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ‘ಧರ್ಮಂ’ ಸಿನಿಮಾ ತಂಡದವರು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಸರವಣ ಸುಬ್ರಮಣಿಯಂ ಅವರು ‘ಧರ್ಮಂ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅನುರಾಧಾ ಭಟ್ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ನಾಗಶೆಟ್ಟಿ ಅವರು ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಸಿನಿಮಾದ ಪೋಸ್ಟರ್ಗಳು ಗಮನ ಸೆಳೆದಿವೆ. ಆ ಮೂಲಕ ಕೌತುಕ ಮೂಡಿಸಲಾಗಿದೆ.
‘ಈ ಹಾಡನ್ನು ಬಿಡುಗಡೆ ಮಾಡಿದ್ದು ನನಗೆ ಬಹಳ ಖುಷಿ ಆಯಿತು. ಈ ಹಾಡು ಭರವಸೆ ಮೂಡಿಸುವಂತಿದೆ. ಧರ್ಮಂ ಸಿನಿಮಾವನ್ನು ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಸಾಯಿ ಶಶಿ ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಟೀಸರ್, ಟ್ರೇಲರ್ ಮತ್ತು ಸಾಂಗ್ ನಾನು ನೋಡಿದ್ದೇನೆ. ನಿಮಗೆ ಒಳ್ಳೆಯದಾಗಲಿ’ ಎಂದು ಆರ್. ಚಂದ್ರು ಅವರು ಹಾರೈಸಿದರು.
ಇದನ್ನೂ ಓದಿ: ‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ನಿರ್ಮಾಪಕ ರಾಮಕೃಷ್ಣ ಅವರಿಗೆ ಬಿಡುಗಡೆಗೆ ಚಡಪಡಿಕೆ ಇದೆ. ನಿರ್ದೇಶಕರು ಮೇಕಿಂಗ್ ತುಂಬ ಚೆನ್ನಾಗಿ ಮಾಡಿದ್ದಾರೆ. ಯಾರೇ ಹೊಸಬರು ಬಂದರೂ ನಾನು ಪ್ರೀತಿಯಿಂದ ನೋಡುತ್ತೇನೆ. ತಾತ್ಸಾರದಿಂದ ನೋಡಲ್ಲ. ಯಾಕೆಂದರೆ ಆ ನೋವು ನನಗೆ ಗೊತ್ತಿದೆ. ಧರ್ಮಂ ಸಿನಿಮಾ ನಿಜಕ್ಕೂ ಚೆನ್ನಾಗಿದೆ. ಸಾಯಿ ಅವರು ರೆಟ್ರೋ ರೀತಿ ನಟಿಸಿದ್ದಾರೆ. ತುಂಬ ಶ್ರಮ ಹಾಕಿ ಕೆಲಸ ಮಾಡಿದ್ದಾರೆ’ ಎಂದು ಆರ್. ಚಂದ್ರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.