ಕನ್ನಡದ ಖ್ಯಾತ ನಟಿ ರಚಿತಾ ರಾಮ್ (Rachita Ram) ಅವರು ಸೋಮವಾರ (ಆಗಸ್ಟ್ 14) ಲಾಲ್ಬಾಗ್ಗೆ ತೆರಳಿದ್ದಾಗ ಒಂದು ಅಚಾತುರ್ಯ ನಡೆದಿತ್ತು. ಫಲಪುಷ್ಪ ಪ್ರದರ್ಶನ ನೋಡಲು ಬಂದಿದ್ದಾಗ ಅವರ ಕಾರು ಪೌರ ಕಾರ್ಮಿಕರೊಬ್ಬರಿಗೆ ಡಿಕ್ಕಿ (Car Accident) ಆಗಿತ್ತು. ಚಾಲಕನ ಅಜಾಗರೂಕತೆಯಿಂದ ಈ ತಪ್ಪು ಜರುಗಿತ್ತು. ಆದರೆ ಕಾರಿನ ವೇಗ ಕಡಿಮೆ ಇದ್ದ ಕಾರಣದಿಂದ ಕೂದಲೆಳೆಯಲ್ಲಿ ದುರಂತ ತಪ್ಪಿ ಹೋಯಿತು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಒಂದು ದಿನ ಕಳೆದ ಬಳಿಕ ರಚಿತಾ ರಾಮ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೇ, ಆ ಪೌರ ಕಾರ್ಮಿಕರನ್ನು (Pourakarmika) ಭೇಟಿಯಾಗಿ ಕ್ಷಮೆ ಕೇಳಿದ್ದಾರೆ. ರಚಿತಾ ರಾಮ್ ಅವರ ಈ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ತಪ್ಪನ್ನು ತಿದ್ದಿಕೊಳ್ಳುವ ಗುಣವನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.
‘ಎಲ್ಲರಿಗೂ ನಮಸ್ಕಾರ. ಇವತ್ತು ಸ್ವಾತಂತ್ರ್ಯ ದಿನಾಚರಣೆ. ನಾನು ಇವರಿಂದ ವಿಶ್ ಮಾಡಿಸುತ್ತೇನೆ’ ಎನ್ನುವ ಮೂಲಕ ರಚಿತಾ ರಾಮ್ ಅವರು ವಿಡಿಯೋದಲ್ಲಿ ಮಾತು ಆರಂಭಿಸಿದ್ದಾರೆ. ‘ನಿನ್ನೆ ಲಾಲ್ಬಾಗ್ಗೆ ಹೋದಾದ ಆಕಸ್ಮಿಕವಾಗಿ ಒಂದು ಘಟನೆ ನಡೆಯಿತು. ನನ್ನ ಗಾಡಿ ಇವರಿಗೆ ಟಚ್ ಆಯಿತು. ನಿನ್ನೆ ಈ ಘಟನೆ ಆದಾಗ ನನ್ನ ಗಮನಕ್ಕೆ ಬರಲಿಲ್ಲ. ನಾನು ಸ್ವಲ್ಪ ಟೆನ್ಷನ್ನಲ್ಲಿ ಇದ್ದೆ. ನನ್ನ ಕಡೆಯಿಂದ, ನನ್ನ ಡ್ರೈವರ್ ಕಡೆಯಿಂದ ತಪ್ಪಾಗಿದೆ. ನನ್ನ ಡ್ರೈವರ್ ಕೂಡ ಒಬ್ಬ ಕಾರ್ಮಿಕ. ಅವನ ಪರವಾಗಿ ಮತ್ತು ನನ್ನ ಕಡೆಯಿಂದ ನಾನು ಕ್ಷಮೆ ಕೇಳುತ್ತೇನೆ. ತಪ್ಪಾಯ್ತು ಅಣ್ಣ. ಕ್ಷಮಿಸಿ’ ಎಂದು ರಚಿತಾ ರಾಮ್ ಹೇಳಿದ್ದಾರೆ.
‘ಏನಮ್ಮಿ..’ ಬಳಿಕ ಮತ್ತೊಂದು ಹಿಟ್ ಹಾಡು ನೀಡಿದ ರಚಿತಾ ರಾಮ್-ಸತೀಶ್ ನೀನಾಸಂ; ‘ಮ್ಯಾಟ್ನಿ’ ಗೀತೆಗೆ ಮೆಚ್ಚುಗೆ
‘ಆಕಸ್ಮಿಕವಾಗಿ ಅದು ನಡೆಯಿತು. ಉದ್ದೇಶಪೂರ್ವಕವಾಗಿ ಮಾಡಿದ ತಪ್ಪು ಅಲ್ಲ. ಮನಸಾರೆ ನಾನು ಕ್ಷಮೆ ಕೇಳುತ್ತೇನೆ. ನಿನ್ನೆಯ ಘಟನೆಯಿಂದ ಕಾರ್ಮಿಕರಿಗೆ ಬೇಸರ ಆಗಿದ್ದರೆ ದಯವಿಟ್ಟು ಕ್ಷಮಿಸಿ. ಇಂದು ಸ್ವಾತಂತ್ರ್ಯ ದಿನಾಚರಣೆ. ಇದು ನನಗೆ ಸ್ಮರಣೀಯವಾಗಿರುತ್ತದೆ. ಈ ರೀತಿ ವಿಶ್ ನನ್ನ ಕಡೆಯಿಂದ ಯಾವತ್ತೂ ಬಂದಿರಲಿಲ್ಲ’ ಎಂದು ಹೇಳಿದ್ದಾರೆ ರಚಿತಾ ರಾಮ್.
ಅಂದಹಾಗೆ, ಲಾಲ್ಬಾಗ್ನಲ್ಲಿ ಕೆಲಸ ಮಾಡುವ ಈ ಪೌರ ಕಾರ್ಮಿಕರ ಹೆಸರು ರಂಗಪ್ಪ. ‘ನಿನ್ನೆಯಿಂದ ನಾನು ಇವರಿಗಾಗಿ ಕಾಯುತ್ತಿದ್ದೆ. ನಾವೇ ವಿಡಿಯೋ ಮಾಡಿ ಬಿಡುವ ಬದಲು ಪರ್ಸನಲ್ ಆಗಿ ಭೇಟಿ ಮಾಡಿ ಕ್ಷಮೆ ಕೇಳಬೇಕು. ಹಾಗಾಗಿ ಅವರ ಮುಂದೆಯೇ ಕ್ಷಮೆ ಕೇಳುತ್ತಿದ್ದೇನೆ. ಇಂಥ ಘಟನೆ ಮತ್ತೊಮ್ಮೆ ಆಗದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತೇನೆ’ ಎಂದು ರಚಿತಾ ರಾಮ್ ಹೇಳಿದ್ದಾರೆ. ನೆಟ್ಟಿಗರು ಈ ವಿಡಿಯೋಗೆ ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನಿಮ್ಮದು ವಿಶಾಲ ಹೃದಯ’ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:51 pm, Tue, 15 August 23