ಪುನೀತ್ ಪುಣ್ಯಸ್ಮರಣೆಯಂದು ಅಭಿಮಾನಿಗಳಿಗೆ ಕರೆ ಕೊಟ್ಟ ರಾಘಣ್ಣ

|

Updated on: Oct 29, 2024 | 1:12 PM

Puneeth Rajkumar death anniversary: ಪುನೀತ್ ರಾಜ್​ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದ ರಾಘವೇಂದ್ರ ರಾಜ್​ಕುಮಾರ್ ಅಪ್ಪು ಅಭಿಮಾನಿಗಳಲ್ಲಿ ಮನವಿ ಒಂದನ್ನು ಮಾಡಿದ್ದಾರೆ.

ಪುನೀತ್ ಪುಣ್ಯಸ್ಮರಣೆಯಂದು ಅಭಿಮಾನಿಗಳಿಗೆ ಕರೆ ಕೊಟ್ಟ ರಾಘಣ್ಣ
Follow us on

ಪುನೀತ್ ರಾಜ್​ಕುಮಾರ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆ ಇಂದು. ಪ್ರತಿ ವರ್ಷದಂತೆ ಪುನೀತ್ ಸಮಾಧಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡಿ ಪೂಜೆ ಮಾಡಿ, ಕೈ ಮುಗಿದಿದ್ದಾರೆ. ಪುನೀತ್ ರಾಜ್​ಕುಮಾರ್ ಕುಟುಂಬದವರು ಸಹ ಅಪ್ಪು ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಇನ್ನೂ ಹಲವು ಕುಟುಂಬ ಸದಸ್ಯರು ಅಪ್ಪು ಸಮಾಧಿಗೆ ಇಂದು ಪೂಜೆ ಮಾಡಿದ್ದಾರೆ. ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್ ಅಪ್ಪು ಅಭಿಮಾನಿಗಳ ಬಳಿ ಮನವಿಯೊಂದನ್ನು ಮಾಡಿದ್ದಾರೆ.

‘ಅಪ್ಪು ಅನ್ನು ನೆನಯದೇ ಇರುವ ದಿನವಿಲ್ಲ. ದಿನಗಳು ಬೇಗ-ಬೇಗ ಹೋಗುತ್ತಲೇ ಇವೆ, ಆದರೆ ನಾವು ಮಾತ್ರ ಪ್ರತಿದಿನವೂ ಪುನೀತ್ ಅನ್ನು ನೆನಪಿಸಿಕೊಳ್ಳುತ್ತಲೇ ಇದ್ದೀವಿ. ಜನಗಳ ಪ್ರೀತಿ-ವಿಶ್ವಾಸ ಕಡಿಮೆ ಆಗುತ್ತಲೇ ಇಲ್ಲ. ವರ್ಷದಿಂದ ವರ್ಷಕ್ಕೆ ಅದು ಹೆಚ್ಚಾಗುತ್ತಲೇ ಇದೆ. ಪ್ರತಿ ವರ್ಷ ಎಲ್ಲರೂ ಬಂದು ಇಲ್ಲಿ ಪೂಜೆ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಒಂದು ಮನವಿ ಎಂದರೆ, ಅಪ್ಪು ಮಾಡಿದ ಸೇವೆಗಳನ್ನು ನೀವು ಮಾಡಿ, ಅವರ ಸೇವಾಮನೋಭಾವ ನೀವು ಅಳವಡಿಸಿಕೊಳ್ಳಿ. ನಿಮ್ಮ ಕೈಲಾದ ಮಟ್ಟಿಗೆ ಸೇವೆ ಮಾಡಿ. ಅದೇ ಅಪ್ಪುಗೆ ನಾವು ತೋರಿಸುವ ಗೌರವ’ ಎಂದಿದ್ದಾರೆ ರಾಘವೇಂದ್ರ ರಾಜ್​ಕುಮಾರ್.

ಇದನ್ನೂ ಓದಿ:ಪುತ್ರಿಯ ಜೊತೆಗೆ ಪುನೀತ್ ಸಮಾಧಿಗೆ ಪೂಜೆ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

‘ಅಪ್ಪು ನಮಗೆಲ್ಲ ಸ್ಪೂರ್ತಿ ಅದೇ ಕಾರಣಕ್ಕೆ ಅವರ ಹುಟ್ಟುಹಬ್ಬವನ್ನು ಸ್ಪೂರ್ತಿಯ ದಿನ ಎಂದು ಆಚರಣೆ ಮಾಡಲಾಗುತ್ತಿದೆ’ ಎಂದ ರಾಘವೇಂದ್ರ ರಾಜ್​ಕುಮಾರ್, ‘ರಾಜ್ಯದ ವಿವಿಧ ಮೂಲೆಗಳಿಂದ ಜನ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲು ಬಂದಿರುವ ಬಗ್ಗೆ ಮಾತನಾಡಿದ ಅವರು, ‘ಅವರ ಪ್ರೀತಿಯ ಬಗ್ಗೆ ಮಾತನಾಡಲು ನನ್ನ ಬಳಿ ಪದಗಳಿಲ್ಲ. ಅವರ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸುತ್ತೇನೆ ವಿನಃ ಇನ್ನೇನನ್ನೂ ನಾನು ಹೇಳಲಾರೆ, ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದಿದ್ದಾರೆ ರಾಘವೇಂದ್ರ ರಾಜ್​ಕುಮಾರ್.

‘ರಾಜ್ಯದಾದ್ಯಂತ ಹಲವೆಡೆ ಅಪ್ಪು ಅಭಿಮಾನಿಗಳು ರಕ್ತದಾನ ಶಿಬಿರ, ಅನ್ನದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದಾರೆ. ಅವರನ್ನು ನಾನು ದೇವರುಗಳೆಂದೇ ಕರೆಯುತ್ತೇನೆ. ದೇವರುಗಳು ಮಾತ್ರ ಹೀಗೆ ಸೇವೆ ಮಾಡಲು ಸಾಧ್ಯ. ಆ ಅಭಿಮಾನಿಳ ಮೂಲಕವೇ ಅಪ್ಪು ಬದುಕುತ್ತಿದ್ದಾನೆ. ಅಪ್ಪು ಈಗ ನಮ್ಮ ಮನೆಯವನಲ್ಲ ಅವನು ಎಲ್ಲರ ಕುಟುಂಬದವನು’ ಎಂದಿದ್ದಾರೆ ರಾಘವೇಂದ್ರ ರಾಜ್​ಕುಮಾರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Tue, 29 October 24