ಪುನೀತ್ ರಾಜ್ಕುಮಾರ್ಗೆ ಒಮ್ಮೆ ಬಿದ್ದಿತ್ತು ಲಾಠಿ ಏಟು: ಮಾಡಿದ್ದ ತಪ್ಪೇನು?
ಪುನೀತ್ ರಾಜ್ಕುಮಾರ್ ಅಗಲಿ ಮೂರು ವರ್ಷಗಳಾಗಿವೆ. ಇಂದಿಗೂ ಅವರ ನೆನಪು ಮಾಸಿಲ್ಲ. ಈ ಹಿಂದೆ ಪುನೀತ್ ಕನ್ನಡದ ಕೋಟ್ಯಧಿಪತಿ ನಡೆಸಿಕೊಡುವಾಗ ತಮ್ಮ ಜೀವನದ ಸ್ವಾರಸ್ಯಕರ ಘಟನೆಗಳನ್ನು ಸ್ಪರ್ಧಿಗಳೊಟ್ಟಿಗೆ ಹಂಚಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ತಮಗೆ ಒಮ್ಮೆ ಪೊಲೀಸರ ಲಾಠಿ ಏಟು ಬಿದ್ದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

ಪುನೀತ್ ರಾಜ್ಕುಮಾರ್ ಅವರು ಇಂದು ನಮ್ಮ ಜೊತೆಗೆ ಇಲ್ಲ. ಅವರಿಲ್ಲ ಎಂಬ ನೋವು ಯಾವಾಗಲೂ ನಮ್ಮಲ್ಲಿ ಇರುತ್ತದೆ. ಇಂದು (ಅಕ್ಟೋಬರ್ 29) ಅಪ್ಪುನ ಪುಣ್ಯತಿಥಿ. ಈ ವೇಳೆ ಅವರ ಅಭಿಮಾನಿಗಳು ಪುನೀತ್ ಅನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಪುನೀತ್ ಅವರ ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ಒಂದು ಅಪರೂಪದ ವಿಡಿಯೋ ಕೂಡ ವೈರಲ್ ಆಗಿದೆ.
ಪುನೀತ್ ರಾಜ್ಕುಮಾರ್ ಮೊದಲಿನಿಂದಲೂ ಶಿಸ್ತಿನಿಂದ ನಡೆದುಕೊಂಡು ಬಂದ ವ್ಯಕ್ತಿ. ತಂದೆಯ ಜೊತೆ ಅವರು ಹೆಚ್ಚು ಸಮಯ ಕಳೆದಿದ್ದಾರೆ. ಅವರು ರಾಜ್ಕುಮಾರ್ ಹಾಕಿಕೊಟ್ಟ ಮಾರ್ಗದರ್ಶನಗಳನ್ನು ತಪ್ಪದೆ ಪಾಲಿಸಿದವರು. ಅಪ್ಪನ ಮೇಲೆ ಅವರಿಗೆ ಅಪಾರ ಪ್ರೀತಿ ಇತ್ತು. ಒಮ್ಮೆ ಪುನೀತ್ ರಾಜ್ಕುಮಾರ್ ಅವರು ಲಾಠಿ ಏಟು ತಿಂದಿದ್ದರು. ಈ ವಿಚಾರವನ್ನು ಅವರು ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಹೇಳಿದ್ದರು.
‘ಕನ್ನಡದ ಕೋಟ್ಯಧಿಪತಿ’ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ಶೋ. ಪುನೀತ್ ಇದನ್ನು ನಡೆಸಿಕೊಡುತ್ತಿದ್ದರು. ಈ ಮೂಲಕ ಅವರು ಅನೇಕರಿಗೆ ಇಷ್ಟ ಆದರು. ಈ ಸಂದರ್ಭದಲ್ಲಿ ಎದುರು ಕುಳಿತುಕೊಳ್ಳುವ ವ್ಯಕ್ತಿಯ ಜೊತೆ ಅವರು ಒಂದಷ್ಟು ಮಾಹಿತಿ ಹಂಚಿಕೊಳ್ಳುತ್ತಿದ್ದರು. ಅವರ ಎದುರು ಒಮ್ಮೆ ಪೊಲೀಸ್ ಕುಳಿತಾಗ ಒಂದು ಫನ್ನಿ ವಿಚಾರವನ್ನು ಹೇಳಿದ್ದರು.
ಇದನ್ನೂ ಓದಿ:ಪುನೀತ್ ರಾಜ್ಕುಮಾರ್ ಮೂರನೇ ಪುಣ್ಯಸ್ಮರಣೆ ನಿಮಿತ್ತ ಕಂಠೀರವ ಸ್ಟುಡಿಯೋದಲ್ಲಿ ಅನ್ನಸಂತಪರ್ಣೆ
‘ಮಂಡ್ಯದಲ್ಲಿ ಕಾರ್ಯಕ್ರಮ ನಡೆಯುತ್ತಾ ಇತ್ತು. ನನ್ನ ತಂದೆ ಟ್ರಕ್ನಲ್ಲಿ ರ‍್ಯಾಲಿಯಲ್ಲಿ ಹೋಗುತ್ತಿದ್ದರು. ನಾನು ಲೇಟ್ ಆಗಿ ಹೋದೆ. ಹೀಗಾಗಿ ಬೇರೆ ರಸ್ತೆಯಲ್ಲಿ ಬಂದು ಹತ್ತಿಕೊಳ್ಳುತ್ತಿದ್ದೆ. ಆಗಿನ್ನೂ ಸಿನಿಮಾ ಮಾಡಿರಲಿಲ್ಲ. ಲಾರಿ ಹತ್ತುವಾಗ ಪೊಲೀಸರು ಲಾಠಿಯಿಂದ ಹೊಡೆದರು. ನಾಲ್ಕೈದು ಏಟು ಲಾಠಿಯಿಂದ ಬಿದ್ದಿತ್ತು’ ಎಂದಿದ್ದರು ಪುನೀತ್ ರಾಜ್ಕುಮಾರ್.
ಈ ಘಟನೆ ನಡೆದಿದ್ದು 1995ರಲ್ಲಿ. ಪುನೀತ್ ಆಗಿನ್ನೂ ಚಿತ್ರರಂಗಕ್ಕೆ ಬಂದಿರಲಿಲ್ಲ. ಹೀಗಾಗಗಿ, ಪೊಲೀಸರಿಗೆ ಆಗಿನ್ನೂ ಪುನೀತ್ ಪರಿಚಯ ಇರಲಿಲ್ಲ. ‘ಅಯ್ಯೋ ನನ್ನ ಮಗ’ ಎಂದು ರಾಜ್ಕುಮಾರ್ ಹೇಳಿದ ಬಳಿಕ ಪೊಲೀಸರು ಪುನೀತ್ ಬಳಿ ಕ್ಷಮೆ ಕೇಳಿದ್ದರು. ‘ಇರಲಿ ಬಿಡಿ ಸರ್, ಸೂಪರ್ ಶಾಟ್’ ಎಂದಿದ್ದರಂತೆ ಪುನೀತ್ ರಾಜ್ಕುಮಾರ್. ಪುನೀತ್ ರಾಜ್ಕುಮಾರ್ ಅವರು ಅಕ್ಟೋಬರ್ 29ರಂದು ನಿಧನ ಹೊಂದಿದರು. ಅವರಿಗೆ ಹೃದಯಾಘಾತ ಆಗಿತ್ತು. ಅವರಿಲ್ಲ ಎಂಬ ನೋವು ಎಂದಿಗೂ ಮರೆಯಾಗುವಂಥದ್ದಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Tue, 29 October 24