‘ನನ್ನ ಮಗನಿಗೆ ಮೊದಲು ಕಲಿಸಿ, ಆಮೇಲೆ ಬೆಳೆಸಿ’: ಯುವ ಸಿನಿಮಾ ನೋಡಿ ರಾಘಣ್ಣ ಪ್ರತಿಕ್ರಿಯೆ

‘ಈಗ ನನ್ನ ಮಗನ ಜರ್ನಿ ಆರಂಭ ಆಗಿದೆ. ಒಂದೇ ಸಿನಿಮಾದಲ್ಲಿ ಜೀವನವನ್ನು ಸಾಬೀತು ಮಾಡೋಕಾಗಲ್ಲ. ಒಂದೊಂದಾಗಿಯೇ ಬರುತ್ತಿರುತ್ತದೆ. ಅಭಿಮಾನಿಗಳು ಅವನನ್ನು ಕೇವಲ ಬೆಳೆಸಿ ಅಂತ ನಾನು ಹೇಳಲ್ಲ. ಕಲಿಸಿ, ಕಲಿಸಿ, ಕಲಿಸಿ, ಆಮೇಲೆ ಬೆಳೆಸಿ’ ಎಂದು ರಾಘವೇಂದ್ರ ರಾಜಕುಮಾರ್​ ಅವರು ಹೇಳಿದ್ದಾರೆ. ‘ಯುವ’ ಸಿನಿಮಾವನ್ನು ನೋಡಿದ ನಂತರ ಅವರು ಮಾತನಾಡಿದ್ದಾರೆ.

‘ನನ್ನ ಮಗನಿಗೆ ಮೊದಲು ಕಲಿಸಿ, ಆಮೇಲೆ ಬೆಳೆಸಿ’: ಯುವ ಸಿನಿಮಾ ನೋಡಿ ರಾಘಣ್ಣ ಪ್ರತಿಕ್ರಿಯೆ
ಯುವ ರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​

Updated on: Mar 29, 2024 | 10:45 PM

ನಟ ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ಅವರ ಎರಡನೇ ಮಗ ಯುವ ರಾಜ್​ಕುಮಾರ್​ (Yuva Rajkumar) ಅವರು ಚಂದನವನಕ್ಕೆ ಎಂಟ್ರಿ ನೀಡಿದ್ದಾರೆ. ‘ಯುವ’ ಸಿನಿಮಾ (Yuva Movie) ಮೂಲಕ ಅವರು ಹೀರೋ ಆಗಿ ಜನರ ಎದುರು ಬಂದಿದ್ದಾರೆ. ಆ ಸಿನಿಮಾ ಇಂದು (ಮಾರ್ಚ್​ 29) ಬಿಡುಗಡೆ ಆಗಿದೆ. ಸಂತೋಷ್​ ಆನಂದ್​ರಾಮ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದು, ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣ ಮಾಡಿದೆ. ಇಂದು ಮಗನ ಸಿನಿಮಾ ನೋಡಿದ ಬಳಿಕ ರಾಘವೇಂದ್ರ ರಾಜ್​ಕುಮಾರ್​ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಒಟ್ಟಾರೆ ಸಿನಿಮಾ ಬಗ್ಗೆ ಹೇಳಬೇಕು ಎಂದರೆ, ನನ್ನ ಮಗನನ್ನು ಪರಿಚಯಿಸಲು ಈ ಸಿನಿಮಾ ಮಾಡಿಲ್ಲ. ಒಂದು ಒಳ್ಳೆಯ ಸಿನಿಮಾ ಮಾಡಿ, ಅದರಲ್ಲಿ ನನ್ನ ಮಗನನ್ನು ಪರಿಚಯಿಸಿದ್ದೇವೆ. ಅದು ನನಗೆ ಇಷ್ಟ ಆಗಿದೆ’ ಎಂದು ರಾಘಣ್ಣ ಹೇಳಿದ್ದಾರೆ.

‘ನನ್ನನ್ನು, ಶಿವಣ್ಣನನ್ನು ಹಾಗೂ ನನ್ನ ತಮ್ಮನನ್ನು ಪರಿಚಯ ಮಾಡುವಾಗ ನಮ್ಮ ಜೊತೆ 3 ಶಕ್ತಿ ಇತ್ತು. ತಂದೆ, ತಾಯಿ ಹಾಗೂ ಚಿಕ್ಕಪ್ಪ ಇದ್ದರು. ಆದರೆ ಯುವ ಬಂದಾಗ ಯಾರೂ ಇಲ್ಲ. ನನ್ನ ಮಗ ಒಂದು ರೀತಿಯಲ್ಲಿ ಅನಾಥ ಆದನಲ್ಲ, ನನಗೂ ಹುಷಾರು ತಪ್ಪಿತು ಎಂಬ ಚಿಂತೆ ಕಾಡಿತು. ಇಂಥ ಸಮಯದಲ್ಲಿ ದೇವರು ಎರಡು ವ್ಯಕ್ತಿಗಳನ್ನು ಕಳಿಸಿಕೊಡುತ್ತಾನೆ. ತಂದೆಯ ರೀತಿ ಹೊಂಬಾಳೆಯ ವಿಜಯ್​ ಬರುತ್ತಾರೆ. ತಾಯಿ ರೀತಿ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಬರುತ್ತಾರೆ. ಅವರು ಬಂದು ನಮ್ಮ ಜಾಗವನ್ನು ತುಂಬಿಕೊಂಡರು’ ಎಂದಿದ್ದಾರೆ ರಾಘವೇಂದ್ರ ರಾಜ್​ಕುಮಾರ್​.

‘ಹೊಂಬಾಳೆ ಫಿಲ್ಮ್ಸ್​ ಮತ್ತು ಸಂತೋಷ್​ ಆನಂದ್​ರಾಮ್​ ಅವರು ನನ್ನ ಮಗನಿಗೆ ಒಂದೊಳ್ಳೆಯ ಪರಿಚಯ ಮಾಡಿಕೊಟ್ಟರು. ನಾನು ಜೀವಂತವಾಗಿ ಇರುವ ತನಕ ಅವರನ್ನು ಮರೆಯೋದಿಲ್ಲ. ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರ. ಒಳ್ಳೆಯ ಹೆಜ್ಜೆ ಹಾಕಿಕೊಟ್ಟಿದ್ದಾರೆ. ಇನ್ನು ನಡೆದುಕೊಂಡು ಹೋದರೆ ಅಭಿಮಾನಿಗಳು ಅವನನ್ನು ಕರೆದುಕೊಂಡು ಹೋಗುತ್ತಾರೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಮಗನ ಸಿನಿಮಾ ನೋಡಲು ಬಂದ ರಾಘಣ್ಣ ಅಭಿಮಾನಿಗಳೊಟ್ಟಿಗೆ ಸಖತ್ ಸ್ಟೆಪ್ಸ್

‘ಇದರಲ್ಲಿ ತಂದೆ-ಮಗನ ನೋಡಿದಾಗ ನಾನು-ನನ್ನ ಮಗ ಅಂತ ಅನಿಸಲಿಲ್ಲ. ನನ್ನ ತಮ್ಮ ಹಾಗೂ ನನ್ನ ಮಗ ಅನಿಸಿತು. ಎಲ್ಲ ಕಡೆ ಅವರೇ ಕಾಣಿಸುತ್ತಿದ್ದರು. ಅವನ ಛಾಯೆ ಬಂದು ಬಂದು ಹೋಗುತ್ತದೆ. ಒಂದು ಸ್ಟಂಪ್​ನಲ್ಲಿ ಪವರ್​ ಅಂತ ಇರುತ್ತದೆ. ಡಾ. ಪುನೀತ್​ ರಾಜ್​ಕುಮಾರ್ ರಸ್ತೆ ಅಂತ ಬರುತ್ತದೆ. ಕೊನೆವರೆಗೂ ನನ್ನ ಮಗನಿಗೆ ಆಶೀರ್ವಾದ ಮಾಡುತ್ತಾ ಹೋಗಿದ್ದಾನೆ. ಗುರು ಸಿನಿಮಾ ನೀವು ಮಾಡಬೇಕು ಅಂತ ಹೊಂಬಾಳೆ ಅವರ ಬಳಿ ಅಶ್ವಿನಿ ಮತ್ತು ಅಪ್ಪು ಕೇಳಿಕೊಂಡಿದ್ದರು. ಏನೇ ಬಂದರೂ ಅವರಿಬ್ಬರಿಗೆ ಇದನ್ನು ಅರ್ಪಿಸುತ್ತೇನೆ. ಇದನ್ನು ಅಪ್ಪು ಹಾಕಿದ ಭಿಕ್ಷೆ ಎಂದುಕೊಳ್ಳುತ್ತೇನೆ. ನಾನು ಮಾಡಬೇಕಾದ ಕೆಲಸವನ್ನು ಅವರು ಮಾಡಿದ್ದಾರೆ. ಈಗ ಮಗನ ಜರ್ನಿ ಶುರುವಾಗಿದೆ. ಒಂದೇ ಸಿನಿಮಾದಲ್ಲಿ ಜೀವನವನ್ನು ಸಾಬೀತು ಮಾಡೋಕೆ ಆಗಲ್ಲ. ಒಂದೊಂದಾಗಿಯೇ ಬರುತ್ತದೆ. ಒಳ್ಳೆಯ ಗೆಲುವು ನೀಡಿದ್ದಾರೆ. ಅಭಿಮಾನಿಗಳು ಅವನನ್ನು ಬರೀ ಬೆಳೆಸಿ ಅಂತ ನಾನು ಹೇಳಲ್ಲ. ಕಲಿಸಿ, ಕಲಿಸಿ, ಕಲಿಸಿ. ಆಮೇಲೆ ಬೆಳೆಸಿ’ ಎಂದು ರಾಘವೇಂದ್ರ ರಾಜಕುಮಾರ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.