ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿ ಜನವರಿಯಲ್ಲಿ ಜಾಮೀನಿನ ಆಧಾರದಲ್ಲಿ ಹೊರಬಂದಿದ್ದಾರೆ. ಹೀಗೆ ಹೊರಬರುತ್ತಿದ್ದಂತೆ ಅವರ ಅದೃಷ್ಟ ಖುಲಾಯಿಸಿದೆ. ಸಾಲುಸಾಲು ಸಿನಿಮಾಗಳು ಕೈಹಿಡಿಯುತ್ತಿವೆ. ಈಗಾಗಲೇ ಕರ್ವ 3 ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವ ತುಪ್ಪದ ಬೆಡಗಿ, ಇದೀಗ ಜಾನಿ ವಾಕರ್ ಎಂಬ ಚಿತ್ರಕ್ಕೂ ಸಹಿ ಮಾಡಿದ್ದಾರೆ. ಇದರಲ್ಲಿ ರಾಗಿಣಿಯವರು ಪೊಲೀಸ್ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನು ಜಾನಿ ವಾಕರ್ ಸಿನಿಮಾವನ್ನು ವೇದಿಕ್ ನಿರ್ದೇಶನ ಮಾಡಲಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರಾಗಿಣಿ ದ್ವಿವೇದಿ, ಜಾನಿ ವಾಕರ್ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಖಡಕ್ ಆಗಿದೆ. ವಿಭಿನ್ನವಾಗಿದೆ. ನನ್ನ ಪಾತ್ರದ ಸುತ್ತಮುತ್ತಲೂ ಕಥೆ ಸಾಗುತ್ತದೆ. ಈ ಸಿನಿಮಾದಲ್ಲಿ ನಟಿಸಲು ತುಂಬ ಎಕ್ಸೈಟ್ ಆಗಿ ಕಾಯುತ್ತಿದ್ದೇನೆ. ಇಂಥ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದುಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ರಾಗಿಣಿ ಈ ಚಿತ್ರದಲ್ಲಿ ಭಾರತೀಯ ಹಾಗೂ ಪಾಶ್ಚಿಮಾತ್ಯ ಎರಡೂ ವಿಧದ ಉಡುಪುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ರಾಗಿಣಿ ದ್ವಿವೇದಿ ತಮ್ಮ ಇನ್ಸ್ಟಾಗ್ರಾಂ ಮೂಲಕ ಕರ್ವ 3 ಸಿನಿಮಾಕ್ಕೆ ಸಹಿ ಹಾಕಿದ್ದಾಗಿ ಘೋಷಿಸಿದ್ದರು. ಈ ಮಧ್ಯೆ ಗಾಂಧಿಗಿರಿ ಎನ್ನುವ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಗಿಣಿಯವರ ಸಿನಿ ಪ್ರಯಾಣ ಶುರುವಾಗಿದ್ದು 2009ರಲ್ಲಿ, ವೀರ ಮದಕರಿ ಚಿತ್ರದ ಮೂಲಕ. ಇದರಲ್ಲಿ ಕಿಚ್ಚ ಸುದೀಪ್ ಜತೆ ನಟಿಸಿದ್ದ ರಾಗಿಣಿ ನಂತರದ ದಿನಗಳಲ್ಲಿ, ಶಂಕರ್ ಐಪಿಎಸ್, ಕೆಂಪೇಗೌಡ, ಆರಕ್ಷಕ, ಶಿವ, ರಾಗಿಣಿ ಐಪಿಎಸ್, ಬಂಗಾರಿ.. ಹೀಗೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ. ಆದರೆ ಅವರ ದುರದೃಷ್ಟವೆಂಬಂತೆ ಕೆಲವು ತಿಂಗಳುಗಳ ಹಿಂದೆ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಸುಮಾರು ಮೂರೂವರೆ ತಿಂಗಳ ಬಳಿಕ ಅಂದರೆ 2021ರ ಜನವರಿಯಲ್ಲಿ ಬಿಡುಗಡೆಯಾಗಿದ್ದಾರೆ. ಇವರು ಜೈಲಿನಲ್ಲಿದ್ದಾಗ ಕುಟುಂಬದವರು ಕಾನೂನು ಹೋರಾಟಕ್ಕಾಗಿ ತುಂಬ ಕಷ್ಟಪಟ್ಟಿದ್ದರು.
ಇದನ್ನೂ ಓದಿ: ನಟಿ ರಾಗಿಣಿ ದ್ವಿವೇದಿ ಬ್ಯಾಕ್ ಟು ಸಿನಿಮಾ…!
Ragini Dwivedi: ಅಭಿಮಾನಿಗಳ ಮೆಸೇಜ್ಗಳನ್ನು ನೋಡಿ Live ನಲ್ಲೇ ಕಣ್ಣೀರಿಟ್ಟ ರಾಗಿಣಿ ದ್ವಿವೇದಿ
Published On - 4:13 pm, Mon, 22 March 21