‘ಕರಾವಳಿ’ಯಲ್ಲಿ ಮಹಾವೀರನಾದ ‘ಕರುಣಾಕರ ಗುರೂಜಿ’ ಟೀಸರ್ ಬಿಡುಗಡೆ

Karavali Kannada movie: ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ತನ್ನ ಪೋಸ್ಟರ್, ಟೀಸರ್​ಗಳಿಂದ ಈಗಾಗಲೇ ಬಹಳ ಗಮನ ಸೆಳೆದಿದೆ. ‘ಕರಾವಳಿ’ ಸಿನಿಮಾವನ್ನು ಗುರುದತ್ ಗಣಿಗ ಅದ್ಧೂರಿಯಾಗಿ, ಭಿನ್ನವಾಗಿ ನಿರ್ದೇಶಿಸುತ್ತಿರುವುದು ಪೋಸ್ಟರ್, ಟೀಸರ್​ಗಳಿಂದ ತಿಳಿದು ಬರುತ್ತಿದೆ. ಇದೀಗ ಈ ಸಿನಿಮಾಕ್ಕೆ ಕನ್ನಡ ಸಿನಿಮಾ ಪ್ರೇಮಿಗಳ ಮೆಚ್ಚಿನ ‘ಕರುಣಾಕರ ಗುರೂಜಿ’ ಸೇರಿಕೊಂಡಿದ್ದಾರೆ.

‘ಕರಾವಳಿ’ಯಲ್ಲಿ ಮಹಾವೀರನಾದ ‘ಕರುಣಾಕರ ಗುರೂಜಿ’ ಟೀಸರ್ ಬಿಡುಗಡೆ
Raj B Shetty

Updated on: Aug 07, 2025 | 12:11 PM

ಪ್ರಜ್ವಲ್ ದೇವರಾಜ್ (Prajwal Devaraj) ನಟಿಸಿ ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿರುವ ‘ಕರಾವಳಿ’ ಸಿನಿಮಾ ಪ್ರಾರಂಭವಾದಾಗಿನಿಂದಲೂ ಗಮನ ಸೆಳೆಯುತ್ತಲೇ ಬಂದಿದೆ. ಅದ್ಭುತ ಪೋಸ್ಟರ್​ಗಳು, ಟೀಸರ್​ಗಳ ಮೂಲಕ ಸಿನಿಮಾ ಈಗಾಗಲೇ ಸಿನಿ ಪ್ರೇಮಿಗಳ ಕುತೂಹಲ ಕೆರಳಿಸಿದೆ. ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ಮಿತ್ರ, ರಮೇಶ್ ಇಂದಿರಾ ಅವರ ಪಾತ್ರಗಳು ಸಹ ಸಖತ್ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ತಂಡಕ್ಕೆ ಮತ್ತೊಬ್ಬ ಪವರ್​ಫುಲ್ ನಟ ಸೇರಿಕೊಂಡಿದ್ದಾರೆ. ಅದುವೇ ರಾಜ್ ಬಿ ಶೆಟ್ಟಿ.

ಹೌದು, ನಟ ರಾಜ್​ ಬಿ ಶೆಟ್ಟಿ ಅವರು ‘ಕರಾವಳಿ’ ಸಿನಿಮಾದ ಭಾಗವಾಗಿದ್ದಾರೆ. ಪ್ರಸ್ತುತ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿರುವ ‘ಸು ಫ್ರಂ ಸೋ’ ಸಿನಿಮಾನಲ್ಲಿ ಕರುಣಾಕರ ಗುರೂಜಿ ಹೆಸರಿನ ಹಾಸ್ಯ ಪಾತ್ರ ಮಾಡಿರುವ ರಾಜ್ ಬಿ ಶೆಟ್ಟಿ ‘ಕರಾವಳಿ’ ಸಿನಿಮಾನಲ್ಲಿ ‘ಮಹಾವೀರ’ ಹೆಸರಿನ ಪವರ್​ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಪರಿಚಯಕ್ಕಾಗಿ ಟೀಸರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಮಿತ್ರ ಅವರ ಜೊತೆಗೆ ಇರುವ ಪಾತ್ರ ಅವರದ್ದು, ಟೀಸರ್ ನೋಡಿದರೆ ಮಿತ್ರ ಅವರ ಪುತ್ರನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ ಎಂದು ತೋರುತ್ತಿದೆ. ವಿಶೇಷವೆಂದರೆ ಈ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ತಲೆಯಲ್ಲಿ ಕೂದಲಿದೆ. ಅವರ ಸಿಗ್ನೇಚರ್ ಬೊಕ್ಕ ತಲೆ ಈಗ ಬಿಡುಗಡೆ ಆಗಿರುವ ಪೋಸ್ಟರ್​​ನಲ್ಲಿ ಕಾಣುತ್ತಿಲ್ಲ.

ಕಂಬಳದ ಕೋಣಗಳನ್ನು ಹಿಡಿದುಕೊಂಡು, ಕೋಣಗಳ ಕಡೆಗೆ ಅಕ್ಕರೆಯಿಂದ ರಾಜ್ ಬಿ ಶೆಟ್ಟಿ ನೋಡುತ್ತಿರುವ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಟೀಸರ್​ನ ಹಿನ್ನೆಲೆ ಸಂಗೀತ, ರಾಜ್ ಬಿ ಶೆಟ್ಟಿ ಅವರ ಪಾತ್ರ ಬಲು ಪವರ್​ಫುಲ್ ಪಾತ್ರವಾಗಿರಲಿದೆ ಎಂಬ ಸುಳಿವು ನೀಡುತ್ತಿದೆ. ಮಿತ್ರ ಪಾತ್ರ ‘ಸಾಯುವ ಮೊದಲು ರಥಬೀದಿಯಲ್ಲಿ ಕಂಬಳದ ಕೋಣಗಳ ಮೆರವಣಿಗೆ ಮಾಡಬೇಕು’ ಎಂದು ದುಃಖದಿಂದ ಆಗ್ರಹಿಸುತ್ತಿರುವ ಹಿನ್ನೆಲೆ ಧ್ವನಿ ಟೀಸರ್​​ನಲ್ಲಿದೆ.

ಇದನ್ನೂ ಓದಿ:‘ಸು ಫ್ರಂ ಸೋ’ ಸಿನಿಮಾದ ಬಜೆಟ್ ಎಷ್ಟು? ಕೊನೆಗೂ ಉತ್ತರಿಸಿದ ರಾಜ್ ಬಿ ಶೆಟ್ಟಿ

‘ಕರಾವಳಿ’ ಸಿನಿಮಾ ಪ್ರಾದೇಶಿಕ ಕತೆಯನ್ನು ಹೊಂದಿದ್ದು, ಸಿನಿಮಾನಲ್ಲಿ ಕಂಬಳ, ಅಸಮಾನತೆ, ಕ್ರೈಂ ಥ್ರಿಲ್ಲರ್, ಪ್ರೇಮಕತೆ ಹೀಗೆ ಹಲವು ಅಂಶಗಳು ಇವೆ. ಸಿನಿಮಾದ ಸಿನಿಮಾಟೊಗ್ರಫಿ ಮತ್ತು ಸಂಗೀತ ಈಗಾಗಲೇ ಬಿಡುಗಡೆ ಆಗಿರುವ ಟೀಸರ್​​ಗಳಲ್ಲಿ ಗಮನ ಸೆಳೆದಿದೆ. ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕಿ ಸ್ಪಂದನ ಹುಲಿವನ. ಸಿನಿಮಾಕ್ಕೆ ಗುರುದತ್ ಗಣಿಗ ಸೇರಿದಂತೆ ಹಲವು ನಿರ್ಮಾಪಕರಿದ್ದಾರೆ. ಸಚಿನ್ ಬಸ್ರೂರು ಸಂಗೀತ ನೀಡಿದ್ದಾರೆ. ಅಭಿಮನ್ಯು ಸದಾನಂದ ಅವರು ಸಿನಿಮಾದ ಸಿನಿಮಾಟೊಗ್ರಾಫರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Thu, 7 August 25