‘ಸು ಫ್ರಂ ಸೋ’ ಸಿನಿಮಾದ ಬಜೆಟ್ ಎಷ್ಟು? ಕೊನೆಗೂ ಉತ್ತರಿಸಿದ ರಾಜ್ ಬಿ ಶೆಟ್ಟಿ
Su From So Movie Budget: ಜೆಪಿ ತುಮ್ಮಿನಾಡ್ ನಿರ್ದೇಶಿಸಿ, ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿರುವ ‘ಸು ಫ್ರಂ ಸೋ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಆದರೆ ಸಿನಿಮಾದ ಬಜೆಟ್ ಬಗ್ಗೆ ಕೆಲವು ಅಂತೆ-ಕಂತೆ ಕತೆಗಳು ಹರಿದಾಡುತ್ತಿವೆ. ಸಿನಿಮಾದ ಬಜೆಟ್ ಅಷ್ಟಂತೆ, ಇಷ್ಟಂತೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಅಂತೆ-ಕಂತೆಗಳಿಗೆ ಸ್ವತಃ ರಾಜ್ ಬಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ರಾಜ್ ಬಿ ಶೆಟ್ಟಿ (Raj B Shetty) ನಿರ್ಮಾಣ ಮಾಡಿ ಜೆಪಿ ತುಮ್ಮಿನಾಡ್ ನಿರ್ದೇಶನ ಮಾಡಿರುವ ‘ಸು ಫ್ರಂ ಸೋ’ ಕನ್ನಡ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಅತ್ಯಂತ ಸರಳ ಕತೆ, ಪ್ರತಿಭಾವಂತ ಕಲಾವಿದರ ದಂಡನ್ನು ಇಟ್ಟುಕೊಂಡು ಜೆಪಿ ತುಮ್ಮಿನಾಡ್ ಒಂದೊಳ್ಳೆ ಸಿನಿಮಾ ನೀಡಿದ್ದಾರೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದ್ದು ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ದಾಖಲೆಗಳನ್ನು ಮಾಡುತ್ತಿದೆ. ಇದೀಗ ಸಿನಿಮಾ ಕರ್ನಾಟಕದ ಗಡಿ ದಾಟಿ, ಕೇರಳ ಹಾಗೂ ಆಂಧ್ರ-ತೆಲಂಗಾಣಗಳಿಗೂ ಕಾಲಿಟ್ಟಿದೆ. ಈ ನಡುವೆ ಸಿನಿಮಾದ ಬಜೆಟ್ ಬಗ್ಗೆ ಕೆಲವು ಅಂತೆ-ಕಂತೆಗಳು ಹರಿದಾಡುತ್ತಿದ್ದವು, ರಾಜ್ ಬಿ ಶೆಟ್ಟಿ, ಇದೀಗ ಬಜೆಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
‘ಸು ಫ್ರಂ ಸೋ’ ಸಿನಿಮಾವನ್ನು ಕೇವಲ 1.50 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ನಿನ್ನೆಯಷ್ಟೆ ಹೈದರಾಬಾದ್ನಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ರಾಜ್ ಬಿ ಶೆಟ್ಟಿಗೆ ಅಲ್ಲಿಯೂ ಇದೇ ಪ್ರಶ್ನೆ ಎದುರಾಗಿದೆ. ‘ನಿಮ್ಮ ಸಿನಿಮಾದ ಬಜೆಟ್ ಕೇವಲ 1.50 ಕೋಟಿ ರೂಪಾಯಿಗಳಂತಲ್ಲಾ, ಇದು ನಿಜವೇ?’ ಎಂದು ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ.
ಪ್ರಶ್ನೆಗೆ ಉತ್ತರಿಸಿರುವ ರಾಜ್ ಬಿ ಶೆಟ್ಟಿ, ‘ಸಣ್ಣ ಸಿನಿಮಾಗಳು ದೊಡ್ಡ ಯಶಸ್ಸು ಗಳಿಸಿದಾಗ ಇಂಥಹಾ ಸುದ್ದಿಗಳು ಹುಟ್ಟಿಕೊಳ್ಳುತ್ತವೆ, ಬಹಳ ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡಲಾಗಿದೆ ಎಂದು ಹೇಳಿ ಸಿನಿಮಾದ ಯಶಸ್ಸನ್ನು ಇನ್ನಷ್ಟು ದೊಡ್ಡದು ಮಾಡುವ ಪ್ರಯತ್ನ ಮಾಡಲಾಗುತ್ತದೆ. ಆದರೆ ನಮ್ಮ ಸಿನಿಮಾದ ಬಜೆಟ್ 1.50 ಕೋಟಿ ಅಲ್ಲ. ನಾನು ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮಾಡಿದಾಗಲೇ ಆ ಸಿನಿಮಾದ ಬಜೆಟ್ 1.80 ಕೋಟಿ ಆಗಿತ್ತು. ಆಗಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಈಗೆಲ್ಲ ಅಷ್ಟು ಕಡಿಮೆ ಬಜೆಟ್ನಲ್ಲಿ ಚಿತ್ರಮಂದಿರದ ಎಕ್ಸ್ಪೀರಿಯನ್ಸ್ ಕೊಡುವ ಸಿನಿಮಾ ಮಾಡಲು ಆಗದು’ ಎಂದಿದ್ದಾರೆ.
ಇದನ್ನೂ ಓದಿ:50 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’; ಎಲ್ಲಿಂದ ಎಷ್ಟು ಬಂತು? ಇಲ್ಲಿದೆ ವಿವರ
ಮುಂದುವರೆದು ಮಾತನಾಡಿ, ‘ನಮ್ಮಲ್ಲಿ ಕೆಲವು ಒಳ್ಳೆಯ ಮತ್ತು ಬ್ಯುಸಿ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಸುಮಾರು 30 ಮಂದಿ ರಂಗಭೂಮಿ ಹಿನ್ನೆಲೆಯ, ಅನುಭವಿ ಕಲಾವಿದರನ್ನು ಬಳಸಿ ಸುಮಾರು 50ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಅವರಿಗೆಲ್ಲ ಒಳ್ಳೆಯ ಸಂಭಾವನೆಯನ್ನೇ ಕೊಟ್ಟಿದ್ದೇವೆ. ಇನ್ನು ಸಂಗೀತ, ಪೋಸ್ಟ್ ಪ್ರೊಡಕ್ಷನ್ಗೆಲ್ಲ ಸಾಕಷ್ಟು ಹಣ ಖರ್ಚಾಗಿದೆ. ನಿಖರವಾಗಿ ಹೇಳುವುದಾದರೆ ನಮ್ಮ ನಿರ್ಮಾಣ ವೆಚ್ಚವೇ 4.50 ಕೋಟಿ ಆಗಿದೆ. ಅದರ ಮೇಲೆ ಪ್ರಚಾರಕ್ಕೆ ಸುಮಾರು 1 ಕೋಟಿ ವರೆಗೂ ಖರ್ಚಾಗಿದೆ’ ಎಂದಿದ್ದಾರೆ.
ಅಲ್ಲಿಗೆ, ಸ್ವತಃ ರಾಜ್ ಬಿ ಶೆಟ್ಟಿಯವರೇ ಹೇಳಿರುವಂತೆ ಸಿನಿಮಾಕ್ಕೆ 5.50 ಕೋಟಿ ರೂಪಾಯಿ ಖರ್ಚಾಗಿದೆ. ಆದರೆ ಸಿನಿಮಾ ಬಿಡುಗಡೆ ಆಗಿ 13 ದಿನಗಳಲ್ಲಿ 50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಾಕಿದ ಬಜೆಟ್ನ 10 ಪಟ್ಟು ಲಾಭವನ್ನು ಈಗಾಗಲೇ ಸಿನಿಮಾ ಗಳಿಸಿದ್ದು, ಇಂದಿನಿಂದ (ಆಗಸ್ಟ್ 7) ಆಂಧ್ರ-ತೆಲಂಗಾಣಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ನವರು ಸಿನಿಮಾದ ವಿತರಣೆ ಮಾಡಿದ್ದಾರೆ. ಅಲ್ಲಿಯೂ ಸಹ ಉತ್ತಮ ಗಳಿಕೆ ಆಗುವ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




