ರವಿ ಅಣ್ಣ ಬಳಿಕ ‘ಸೂರಿ ಅಣ್ಣ’ ಸದ್ದು; ಬಿಡುಗಡೆ ಆಗಿದೆ ಟೀಸರ್
‘ಸು ಫ್ರಮ್ ಸೋ’ ಸಿನಿಮಾ ನೋಡಿದವರೆಲ್ಲರೂ ರವಿ ಅಣ್ಣ.. ರವಿ ಅಣ್ಣ.. ಎನ್ನುತ್ತಿದ್ದಾರೆ. ಆದರೆ ಕನ್ನಡ ಚಿತ್ರರಂಗದಲ್ಲಿ ರವಿ ಅಣ್ಣ ಮಾತ್ರವಲ್ಲದೇ ಸೂರಿ ಅಣ್ಣ ಕೂಡ ಸದ್ದು ಮಾಡುತ್ತಿದ್ದಾರೆ! ಯಾರು ಈ ಸೂರಿ ಅಣ್ಣ? ‘ಸಲಗ’ ಸಿನಿಮಾದಲ್ಲಿ ನಟಿಸಿದ್ದ ದಿನೇಶ್ ಅವರೇ ಸೂರಿ ಅಣ್ಣ. ಈಗ ಅದೇ ಹೆಸರಿನಲ್ಲಿ ಸಿನಿಮಾ ಸಿದ್ಧವಾಗಿದ್ದು, ಟೀಸರ್ ಬಿಡುಗಡೆ ಆಗಿದೆ.

ರೌಡಿಸಂ ಕಥಾಹಂದರ ಇರುವ ‘ಸೂರಿ ಅಣ್ಣ’ ಸಿನಿಮಾದ ಟೀಸರ್ (Suri Anna Movie Teaser) ಬಿಡುಗಡೆ ಮಾಡಲಾಗಿದೆ. ಸೂಪರ್ ಹಿಟ್ ‘ಸಲಗ’ (Salaga) ಸಿನಿಮಾದ ಮೂಲಕ ಗುರುತಿಸಿಕೊಂಡ ಸೂರಿ ಅವರು ‘ಸೂರಿ ಅಣ್ಣ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮತ್ತು ನಿರ್ಮಾಣವನ್ನೂ ಮಾಡಿದ್ದಾರೆ. ಇತ್ತೀಚೆಗೆ ಅದ್ದೂರಿಯಾಗಿ ‘ಸೂರಿ ಅಣ್ಣ’ ಸಿನಿಮಾ (Suri Anna Movie) ಟೀಸರ್ ಬಿಡುಗಡೆ ಸಮಾರಂಭ ನಡೆಯಿತು. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್, ಎಚ್.ಎಂ. ಕೃಷ್ಣಮೂರ್ತಿ, ಲಹರಿ ವೇಲು, ಪಿ.ಮೂರ್ತಿ, ಗಡ್ಡ ನಾಗಣ್ಣ, ಜೀಬ್ರಾ, ಶ್ರೀರಾಮಪುರ ಮೊಟ್ಟೆ ಕಣ್ಣ, ಲಕ್ಕಿ ಅಣ್ಣ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸೂರಿ (ದಿನೇಶ್) ಅವರು ಮಾತನಾಡಿ, ‘ನಾನು ಈ ಸಿನಿಮಾ ನಿರ್ಮಾಣ ಮಾಡಲು ಇಲ್ಲಿ ಬಂದಿರುವ ಸಾಕಷ್ಟು ಜನರು ಸ್ಪೂರ್ತಿ. ನಮ್ಮ ತಂದೆ ಕೆ. ದೊರೈ ಮತ್ತು ತಾಯಿ ಜ್ಯೋತಿಯಮ್ಮ ಅವರ ಆಶೀರ್ವಾದವೇ ಕಾರಣ. ನನ್ನ ಸಹೋದರ ವಿಜಯ್ ಅವರು ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾದಲ್ಲಿ ರೌಡಿಸಂ ಕಥಾಹಂದರ ಇದೆ. ಆದರೆ ಯಾರೂ ಕೂಡ ರೌಡಿಸಂ ಮಾಡಬೇಡಿ ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ’ ಎಂದರು.
‘ಸಲಗ ಚಿತ್ರದ ನಂತರ ಸೂರಿ ಅಣ್ಣ ಎಂದೇ ಎಲ್ಲರೂ ನನ್ನನ್ನು ಗುರುತಿಸುತ್ತಾರೆ. ಸೂರಿ ಅಣ್ಣ ಸಿನಿಮಾದಲ್ಲಿ ನಾನೇ ನಾಯಕನಾಗಿ ನಟಿಸಿದ್ದೇನೆ. ಸಂಭ್ರಮಶ್ರೀ ಅವರು ನಾಯಕಿ ಆಗಿದ್ದಾರೆ. ರವಿ ಕಾಳೆ, ಕಾಕ್ರೋಜ್ ಸುಧೀ, ಹರೀಶ್ ರಾಯ್, ಎಸ್.ಕೆ. ಉಮೇಶ್, ಪ್ರಕಾಶ್ ತುಮಿನಾಡು, ಪ್ರಸಾದ್, ವೇಡಿ ಅಣ್ಣ, ಚಿತ್ರಲ್ ರಂಗಸ್ವಾಮಿ, ಯಶಸ್ವಿನಿ ಗೌಡ, ಬೆನಕ ನಂಜಪ್ಪ, ಬೇಬಿ ಮರಿಶಾ, ಪ್ರವೀಣ್ ರಾಜ್ ಮುಂತಾದವರು ನನ್ನ ಜೊತೆ ನಟಿಸಿದ್ದಾರೆ’ ಎಂದು ಸೂರಿ ಅಣ್ಣ ಹೇಳಿದರು.
‘ಸೂರಿ ಅಣ್ಣ’ ಸಿನಿಮಾದ ಟೀಸರ್:
ಎಂ.ಬಿ. ಅಳ್ಳಿಕಟ್ಟಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಎನ್.ಎಂ. ವಿಶ್ವ ಅವರ ಸಂಕಲನ ಈ ಸಿನಿಮಾಗಿದೆ. ಎನ್. ರಾಜ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ವಿಶ್ವ ಜಿ. ಕಲಾ ನಿರ್ದೇಶನ, ಜಾಗ್ವಾರ್ ಸಣ್ಣಪ್ಪ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಐದು ಹಾಡುಗಳಿದ್ದು, ಕೆ.ಎಂ. ಇಂದ್ರ ಅವರು ಸಂಗೀತ ನೀಡಿದ್ದಾರೆ. ಶ್ರೀಧರ್ ಕಶ್ಯಪ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: ‘ಕರಾವಳಿ’ಯಲ್ಲಿ ಮಹಾವೀರನಾದ ‘ಕರುಣಾಕರ ಗುರೂಜಿ’ ಟೀಸರ್ ಬಿಡುಗಡೆ
‘ಸೂರಿ ಅಣ್ಣ’ ಸಿನಿಮಾದ ಕ್ರಿಯೇಟಿವ್ ಹೆಡ್ ಆಗಿ ರಂಜಿತ್ ತಿಗಡಿ ಅವರು ಕೆಲಸ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಮುಕ್ತಾಯ ಆಗಿದೆ. ಸದ್ಯದಲ್ಲೇ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಎಂಆರ್ಜಿ ಮ್ಯೂಸಿಕ್ ಮೂಲಕ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




