‘ಹಣ ಕೊಟ್ಟು ಟ್ರೋಲ್ ಮಾಡಿಸಿದರು, ಬೆಳೆಯದಂತೆ ತಡೆದರು’; ರಶ್ಮಿಕಾ ಮಂದಣ್ಣ ಅಸಮಾಧಾನ ಯಾರ ಬಗ್ಗೆ?
ರಶ್ಮಿಕಾ ಮಂದಣ್ಣ ಅವರು ಹಣ ನೀಡಿ ತಮ್ಮನ್ನು ಟ್ರೋಲ್ ಮಾಡಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ನಿರಂತರವಾಗಿ ಟ್ರೋಲ್ ಮಾಡಲಾಗುತ್ತಿದೆ. ಅವರು ಈ ರೀತಿಯ ನಕಾರಾತ್ಮಕತೆಯನ್ನು ಎದುರಿಸುತ್ತಿದ್ದಾರೆ ಮತ್ತು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅವರ ವೃತ್ತಿಪರ ಯಶಸ್ಸಿನ ಹೊರತಾಗಿಯೂ, ಅವರು ಈ ರೀತಿಯ ಆನ್‌ಲೈನ್ ದ್ವೇಷವನ್ನು ಎದುರಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣಗೂ ಟ್ರೋಲ್ಗಳಿಗೂ ಅವಿನಾಭಾವ ಸಂಬಂಧ. ರಶ್ಮಿಕಾ ಮಂದಣ್ಣ (Rashmika Mandanna) ಅವರು ಏನೇ ಮಾಡಿದರೂ ಚರ್ಚೆ ಆಗುತ್ತದೆ. ಅವರ ಭಾಷೆ, ಅವರು ನಡೆದುಕೊಳ್ಳುವ ರೀತಿ ಹೀಗೆ ಪ್ರತಿ ವಿಚಾರವನ್ನೂ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತದೆ. ಆದರೆ, ಇದಕ್ಕೆಲ್ಲ ರಶ್ಮಿಕಾ ಮಂದಣ್ಣ ಹೆದರುವವರಲ್ಲ. ಈಗ ರಶ್ಮಿಕಾ ಮಂದಣ್ಣ ಅವರು ಒಂದು ಗಂಭೀರ ಆರೋಪ ಮಾಡಿದ್ದಾರೆ. ಹಣ ಕೊಟ್ಟು ತಮ್ಮ ಬಗ್ಗೆ ಟ್ರೋಲ್ ಮಾಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಬಗ್ಗೆ ಸಾಕಷ್ಟು ಟ್ರೋಲ್ಗಳು ಹರಿದಾಡಿದರೂ ಅದರ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮನ್ನು ಪ್ರೀತಿಸುವ ಬಳಗ ದೊಡ್ಡದಿದೆ ಎಂದು ಅವರು ಹೆಮ್ಮೆ ಪಡುತ್ತಾರೆ. ಇತ್ತೀಚೆಗೆ ರಶ್ಮಿಕಾ ಮಾತನಾಡುವಾಗ ತಮ್ಮ ಮನದಾಳದ ನೋವುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವುಗಳನ್ನು ತಾವು ಎಲ್ಲಿಯೂ ತೋರಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
‘ನಾನು ಭಾವನಾತ್ಮಕ ಜೀವಿ. ನಾನು ಹೇಗಿದ್ದೇನೋ ಹಾಗೆಯೇ ಇರಲು ಬಯಸುತ್ತೇನೆ. ನಾನು ಇದನ್ನು ಹೊರಗೆ ತೋರಿಸಿಕೊಳ್ಳಲು ಇಷ್ಟಪಡಲ್ಲ. ಇತ್ತೀಚಿನ ದಿನಗಳಲ್ಲಿ ದಯೆ ತೋರುವುದು ಫೇಕ್ ಎಂದು ನೋಡುತ್ತಾರೆ ಅಥವಾ ದೌರ್ಬಲ್ಯ ಎಂದು ಪರಿಗಣಿಸುತ್ತಾರೆ. ಕ್ಯಾಮೆರಾಗಾಗಿ ರಶ್ಮಿಕಾ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ’ ಎಂಬುದು ರಶ್ಮಿಕಾ ಮಾತು.
‘ಹಣ ನೀಡಿ ನನ್ನ ಮೇಲೆ ಟ್ರೋಲ್ ಮಾಡಲಾಗಿತ್ತು, ನಕಾರಾತ್ಮಕ ವಿಚಾರಗಳನ್ನು ಹರಡಲಾಗಿತ್ತು. ಅದನ್ನು ನಾನು ಎದುರಿಸಿದ್ದೇನೆ. ದಯೆ ತೋರಿಸಲು ಸಾಧ್ಯವಾಗದಿದ್ದರೆ, ಮೌನವಾಗಿರಿ. ಈ ವಿಶಾಲ ಜಗತ್ತಿನಲ್ಲಿ ನಾವೆಲ್ಲರೂ ಬೆಳೆಯಲು ಸಾಕಷ್ಟು ಸ್ಥಳವಂತೂ ಇದೆ. ಯಾರಾದರೂ ಬೆಳೆಯುತ್ತಿದ್ದಾರೆ ಎಂದರೆ ಅದನ್ನು ಏಕೆ ತಡೆಯಬೇಕು? ಜನರು ಈ ರೀತಿ ಏಕೆ ಕ್ರೂರವಾಗಿ ವರ್ತಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಇದು ತುಂಬಾ ದುಃಖಕರ ವಿಷಯ’ ಎಂದು ರಶ್ಮಿಕಾ ಬೇಸರ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಕಿಂಗ್ಡಮ್’ ಗೆಲುವು, ವಿಜಯ್ ದೇವರಕೊಂಡಗೆ ರಶ್ಮಿಕಾ ಹೇಳಿದ್ದೇನು?
ರಶ್ಮಿಕಾ ಅವರು ವೃತ್ತಿ ಜೀವನದ ಉದ್ದಕ್ಕೂ ಈ ರೀತಿಯ ಅಡೆ-ತಡೆಗಳನ್ನು ಎದುರಿಸಿದ್ದಾರೆ. ಈಗ ಅವರು ಬೇಡಿಕೆಯ ನಟಿಯಾಗಿದ್ದಾರೆ. ಅವರ ಬಳಿ ಸಾಕಷ್ಟು ಸಿನಿಮಾಗಳಿವೆ. ಅವರ ನಟನೆಯ ಹಲವು ಚಿತ್ರಗಳು ಹಿಟ್ ಆಗಿವೆ. ‘ಕುಬೇರ’ ಸಿನಿಮಾದಲ್ಲಿ ಅವರು ನಟಿಸಿದ್ದು, ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ‘ಗರ್ಲ್ಫ್ರೆಂಡ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇನ್ನೂ ಕೆಲವು ಸಿನಿಮಾಗಳು ಅವರ ಬಳಿ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








