
ರಾಜ್ ಬಿ ಶೆಟ್ಟಿ (Raj B Shetty) ಪ್ರಸ್ತುತ ಕನ್ನಡ ಚಿತ್ರರಂಗದ ಬಲು ವರ್ಸಟೈಲ್ ನಟ, ಭಿನ್ನ ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಹೀರೋ, ಕಮಿಡಿಕ್ ಹಿರೋ, ವಿಲನ್, ಸಾಮಾನ್ಯ ವ್ಯಕ್ತಿ, ಅಂಗವಿಕಲ ಹೀಗೆ ನಾನಾ ರೀತಿಯ ಪಾತ್ರಗಳಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ಶೆಟ್ಟರು ಮತ್ತೊಂದು ಭಿನ್ನ ರೀತಿಯ ಪಾತ್ರದಲ್ಲಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ‘ರಕ್ಕಸಪುರದೊಳ್’ ಹೆಸರಿನ ಮಾಸ್ ಥ್ರಿಲ್ಲರ್ ಸಿನಿಮಾನಲ್ಲಿ ನಾಯಕನಾಗಿ ರಾಜ್ ಬಿ ಶೆಟ್ಟಿ ನಟಿಸಿದ್ದು, ಸಿನಿಮಾದ ಟ್ರೈಲರ್ ಇಂದು (ಜನವರಿ 29) ಬಿಡುಗಡೆ ಆಗಿದೆ.
‘ರಕ್ಕಸಪುರದೊಳ್’ ಸಿನಿಮಾದ ಹೆಸರೇ ಹೇಳುವಂತೆ ಇದು ಒಂದು ಊರಿನ ಕತೆ, ಆ ಊರಿನಲ್ಲಿ ನಡೆಯುವ ಅಪರಾಧಗಳ ಹಿಂದಿನ ಕತೆ. ರಾಜ್ ಬಿ ಶೆಟ್ಟಿ ಈ ವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಇಲ್ಲಿ ಮೊದಲ ಬಾರಿಗೆ ಸಖತ್ ಎಲಿವೇಷನ್ ದೃಶ್ಯಗಳುಳ್ಳ ಮಾಸ್ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರದ್ದು ಸಖತ್ ಮಾಸ್ ಪೊಲೀಸ್ ಅಧಿಕಾರಿಯ ಪಾತ್ರ.
‘ರಕ್ಕಸಪುರದೊಳ್’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಆಕ್ಷನ್ ಮತ್ತು ಕಾಮಿಡಿಯನ್ನೂ ಹೊಂದಿದೆ ಎಂಬ ಸುಳಿವನ್ನು ಇಂದು ಬಿಡುಗಡೆ ಆಗಿರುವ ಟ್ರೈಲರ್ ನೀಡುತ್ತಿದೆ. ಟ್ರೈಲರ್ನಲ್ಲಿ ರಾಜ್ ಬಿ ಶೆಟ್ಟಿಯ ಎಂಟ್ರಿ ಹಾಗೂ ಕೆಲವು ಸಖತ್ ಆಕ್ಷನ್ ದೃಶ್ಯಗಳ ತುಣುಕುಗಳನ್ನು ತೋರಿಸಲಾಗಿದೆ. ಶೆಟ್ಟರಂತೂ ಪೊಲೀಸ್ ಪಾತ್ರದಲ್ಲಿ ಸಖತ್ ಮಿಂಚಿದ್ದಾರೆ. ಆದರೆ ಟ್ರೈಲರ್ನಲ್ಲೆಲ್ಲೂ ಅವರು ಸಮವಸ್ತ್ರ ಧರಿಸಿದ್ದು ಕಾಣುತ್ತಿಲ್ಲ!
ಇದನ್ನೂ ಓದಿ:ಅವರು ಯಾರನ್ನೂ ದೂರ ತಳ್ಳೋ ವ್ಯಕ್ತಿ ಅಲ್ಲ; ರಿಷಬ್ ಪರ ಬ್ಯಾಟ್ ಬೀಸಿದ ರಾಜ್ ಬಿ ಶೆಟ್ಟಿ
ಒಂದು ಊರಿನಲ್ಲಿ ಕೊಲೆಗಳು ನಡೆಯುತ್ತಿವೆ. ಆ ಕೊಲೆಗಳ ಹಿಂದೆ ದೆವ್ವ, ಪಿಶಾಚಿಯ ಕೈವಾಡ ಇದೆಯೆಂಬುದು ಊರಿನವರ ನಂಬಿಕೆ. ಆ ಕೊಲೆಗಳ ತನಿಖೆಯನ್ನು ನಡೆಸಲು ಬರುವ ಪೊಲೀಸ್ ಅಧಿಕಾರಿ ರಾಜ್ ಬಿ ಶೆಟ್ಟಿ. ಇವರ ಪಾತ್ರ ಆದರ್ಶಪ್ರಾಯ ಪೊಲೀಸನದ್ದಲ್ಲ, ಗಡ್ಡ ಬಿಟ್ಟ, ಸದಾ ಕುಡಿಯುವ, ಕೈಗೆ ಸಿಕ್ಕವರನ್ನು ಮುಖಾ-ಮೂತಿ ನೋಡದೆ ಚೆಚ್ಚುವ ಪೊಲೀಸ್ ಅವರು. ಇದೀಗ ಬಿಡುಗಡೆ ಆಗಿರುವ ಟ್ರೈಲರ್, ಸಿನಿಮಾ ನೋಡುವ ಕುತೂಹಲವನ್ನಂತೂ ಹುಟ್ಟುಹಾಕುತ್ತಿದೆ.
‘ರಕ್ಕಸಪುರದೊಳ್’ ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಕೆಎನ್ ಎಂಟರ್ಪೈಸಸ್ನ ರವಿ ವರ್ಮಾ, ಕೆವಿಎನ್ ಪ್ರೊಡಕ್ಷನ್ಸ್ ನವರು ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದಾರೆ. ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಸ್ವಾತಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಫೆಬ್ರವರಿ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Thu, 29 January 26