ಅವರು ಯಾರನ್ನೂ ದೂರ ತಳ್ಳೋ ವ್ಯಕ್ತಿ ಅಲ್ಲ; ರಿಷಬ್ ಪರ ಬ್ಯಾಟ್ ಬೀಸಿದ ರಾಜ್ ಬಿ ಶೆಟ್ಟಿ
ರಿಷಬ್ ಶೆಟ್ಟಿ ಜೊತೆ ಭಿನ್ನಾಭಿಪ್ರಾಯದ ವದಂತಿಗಳಿಗೆ ರಾಜ್ ಬಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. 'ರಿಷಬ್ ಯಾರನ್ನೂ ದೂರ ತಳ್ಳುವ ವ್ಯಕ್ತಿ ಅಲ್ಲ' ಎಂದು ರಾಜ್ ಹೇಳಿದ್ದಾರೆ. 'ಕಾಂತಾರ: ಚಾಪ್ಟರ್ 1' ಭಾಗವಾಗದಿರುವ ಕಾರಣವನ್ನೂ ವಿವರಿಸಿದ್ದಾರೆ. ಅವರ ಮತ್ತು ರಿಷಬ್ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದು, ಚಿತ್ರರಂಗದ ಒಳಿತಿಗಾಗಿ ಬೇರೆ ಬೇರೆ ಯೋಜನೆಗಳಲ್ಲಿ ಕೆಲಸ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.

ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕನ್ನಡದ ‘RRR’ ಎಂದು ಕರೆಯಲಾಗುತ್ತದೆ. ಒಬ್ಬರ ವೃತ್ತಿ ಜೀವನಕ್ಕೆ ಮತ್ತೊಬ್ಬರು ಬೆಂಬಲ ನೀಡುತ್ತಾ ಸಾಗುತ್ತಿದ್ದಾರೆ. ಆದರೆ, ಇತ್ತೀಚೆಗೆ ರಿಷಬ್ ಹಾಗೂ ರಾಜ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತು ಕೇಳಿ ಬಂದಿದೆ. ಇತ್ತೀಚೆಗೆ ‘45’ ಸಿನಿಮಾ ಟ್ರೇಲರ್ ಬಗ್ಗೆ ಹೊಗಳುವಾಗ ರಿಷಬ್ ಅವರು ಎಲ್ಲಿಯೂ ರಾಜ್ ಹೆಸರನ್ನು ಉಲ್ಲೇಖಿಸಿಲ್ಲ. ಇದು ಚರ್ಚೆಗೆ ಕಾರಣ ಆಗಿತ್ತು. ಈ ಬಗ್ಗೆ ರಾಜ್ ಉತ್ತರಿಸಿದ್ದಾರೆ. ‘ರಿಷಬ್ ಯಾರನ್ನೂ ದೂರ ತಳ್ಳುವ ವ್ಯಕ್ತಿ ಅಲ್ಲ’ ಎಂದಿದ್ದಾರೆ.
ರಿಷಬ್ ಅವರು ಉಪೇಂದ್ರ ಹಾಗೂ ಶಿವರಾಜ್ಕುಮಾರ್ ಅವರನ್ನು ಉಲ್ಲೇಖಿಸಿ ಮಾತನಾಡಿದ್ದರು. ಆದರೆ, ರಾಜ್ ಹೆಸರನ್ನು ಹೇಳಿಲ್ಲ. ಇದು ದೊಡ್ಡ ವಿಷಯ ಅಲ್ಲ ಎನ್ನುತ್ತಾರೆ ರಾಜ್. ‘ಮೊದಲು ಐದು ನಿಮಿಷ ರಿಷಬ್ ರೆಕಾರ್ಡ್ ಮಾಡಿದ್ದರಂತೆ. ಆದರೆ, ರೆಕಾರ್ಡ್ ಆಗಿಲ್ಲ. ಮತ್ತೆ ರೆಕಾರ್ಡ್ ಮಾಡಬೇಕಾಯಿತು. ಬಹುಶಃ ಆ ಸಮಯದಲ್ಲಿ ಹೆಸರು ಹೇಳಲು ಮರೆತಿರಬಹುದು’ ಎಂದು ರಾಜ್ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ರಾಜ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಭಾಗವಾಗುವುದಿಲ್ಲ ಎಂದು ಮೊದಲೇ ಹೇಳಿದ್ದರು. ಹೀಗಾಗಿ, ಸಿನಿಮಾ ನೋಡಿದ ಬಳಿಕ ಆ ಬಗ್ಗೆ ರಾಜ್ ಏನೂ ಹೇಳಿಲ್ಲ. ‘ಸಿನಿಮಾದ ಭಾಗವಾಗುವುದಿಲ್ಲ ಎಂದು ಹೇಳಿದ ಬಳಿಕ ಮತ್ತೆ ಆ ಚಿತ್ರವನ್ನು ನೋಡಿ ಎಂದು ನಾನು ಜನರಿಗೆ ಹೇಳೋದು ಸರಿ ಅಲ್ಲ’ ಎನ್ನುತ್ತಾರೆ ರಾಜ್.
ಇದನ್ನೂ ಓದಿ: ರಿಷಬ್ ಶೆಟ್ಟಿ-ರಾಜ್ ಬಿ ಶೆಟ್ಟಿ ನಡುವೆ ಮೂಡಿದೆಯಾ ಮನಸ್ತಾಪ?
ಹಾಗಿದ್ದರೆ ರಿಷಬ್ ಹಾಗೂ ರಾಜ್ ಮಧ್ಯೆ ಎಲ್ಲವೂ ಸರಿ ಇದೆಯಾ? ಇದೆ ಎನ್ನುತ್ತಾರೆ ರಾಜ್. ‘ನಾವು ಈಗ ಒಟ್ಟಿಗೆ ಕೆಲಸ ಮಾಡುವ ಅಗತ್ಯವಿಲ್ಲ. ಹಾಗೆ ಮಾಡಿದರೆ ಚಿತ್ರರಂಗಕ್ಕೆ ನಷ್ಟ. ಎಲ್ಲರೂ ಬೇರೆ ಬೇರೆಯಾಗಿ ಕೆಲಸ ಮಾಡಿದರೆ ಚಿತ್ರರಂಗಕ್ಕೆ ಲಾಭ ಹೆಚ್ಚು. ಅವರಿಗೆ ನನ್ನ ಅಗತ್ಯ ಬಂದರೆ ನಾನು ಹೋಗಿ ಕೆಲಸ ಮಾಡುತ್ತೇನೆ. ನನ್ನ ಸಿನಿಮಾಗೆ ಅವರ ಅಗತ್ಯ ಇದ್ದರೆ ಅವರ ಬಳಿ ಸಹಾಯ ಕೇಳುತ್ತೇನೆ. ರಿಷಬ್ ಯಾರನ್ನೂ ದೂರ ತಳ್ಳುವ ವ್ಯಕ್ತಿ ಅಲ್ಲ. ಕಮಿಟ್ಮೆಂಟ್ ಕಾರಣಕ್ಕೆ ರಕ್ಷಿತ್ ಇನ್ನೂ ಸು ಫ್ರಮ್ ಸೋ ನೋಡಿಲ್ಲ. ಹಾಗಂತ ನಮ್ಮಿಬ್ಬರ ಮಧ್ಯೆ ಫ್ರೆಂಡ್ಶಿಪ್ ಇಲ್ಲ ಅನ್ನೋಕೆ ಆಗಲ್ಲ’ ಎಂದಿದ್ದಾರೆ ರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




