‘ಯಾರ ಜೊತೆ ಬೇಕಾದರೂ ಹೋಗಿ ಮಲಗು’: ಕನ್ನಡದ ನಟಿಗೆ ಗಂಡನಿಂದ ಕಿರುಕುಳ
ನಟಿ ಜೋಶಿತಾ ಅವರ ಸಂಸಾರದಲ್ಲಿ ಬಿರುಕು ಮಾಡಿದ್ದು, ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ತಮಗೆ ಗಂಡ ಸುರೇಶ್ ನಾಯ್ಡು ನೀಡಿದ ಕಿರುಕುಳದ ಬಗ್ಗೆ ಜೋಶಿತಾ ಅವರು ವಿವರಿಸಿದ್ದಾರೆ. ಇಲ್ಲಿದೆ ಮಾಹಿತಿ..

ಕನ್ನಡ ಚಿತ್ರರಂಗದಲ್ಲಿ ಜೋಶಿತಾ (Joshitha) ಅವರು ಸಹ-ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮೇಲೆ ಗಂಡನಿಂದಲೇ ಹಲ್ಲೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಪತಿ ಸುರೇಶ್ ನಾಯ್ಡು (Suresh Naidu) ನೀಡಿದ ಕಿರುಕುಳಗಳ ಬಗ್ಗೆ ಜೋಶಿತಾ ಅವರು ಮಾತನಾಡಿದ್ದಾರೆ. ಜೋಶಿತಾ ಅವರ ತಾಯಿ ಮೇಲೆಯೂ ಹಲ್ಲೆ ಮಾಡಲಾಗಿದೆ. ಅಷ್ಟಕ್ಕೂ ಅವರ ಸಂಸಾರದಲ್ಲಿ ಕಿರಿಕ್ ಶುರುವಾಗಲು ಕಾರಣ ಏನು ಎಂಬುದನ್ನು ಜೋಶಿತಾ ವಿವರಿಸಿದ್ದಾರೆ. ಟಿವಿ9 ಜೊತೆ ಅವರು ಮಾತನಾಡಿದ್ದು, ತಮ್ಮ ಮೇಲೆ ಏನೆಲ್ಲ ಕಿರುಕುಳ (Harassment) ನೀಡಲಾಗಿದೆ ಎಂಬುದನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.
‘ನಾವು ಮದುವೆ ಆಗಿ 2 ವರ್ಷ ಆಯಿತು. ನಮ್ಮ ಮಗುವಿಗೆ ಈಗ ಒಂದು ವರ್ಷ ಮೂರು ತಿಂಗಳು. ಹೆಣ್ಣು ಮಗು ಆಗಿದೆ. ಮದುವೆ ಆದಾಗಿನಿಂದ ನನಗೆ ಯಾವತ್ತೂ ನೆಮ್ಮದಿ ಇಲ್ಲ. ಅತ್ತೆ, ಮಾವನ ಕಿರುಕುಳು ಇತ್ತು. ಯಾವಾಗಲೂ ಕೆಲಸ ಮಾಡುತ್ತಲೇ ಇರಬೇಕು. ನನ್ನನ್ನು ಕೆಲಸದವಳ ರೀತಿ ಇಟ್ಟುಕೊಂಡಿದ್ದರು. ಎಲ್ಲಿಗೂ ನನ್ನನ್ನು ಕರೆದುಕೊಂಡು ಹೋಗಿರಲಿಲ್ಲ’ ಎಂದು ಜೋಶಿತಾ ಅವರು ಹೇಳಿದ್ದಾರೆ.
‘ಮಗು ಆಗುವ ತನಕ ನಾನು ಎಲ್ಲವನ್ನೂ ಸಹಿಸಿಕೊಂಡು, ಕೆಲಸ ಮಾಡಿಕೊಂಡು ಇದ್ದೆ. ಮಗು ಆದ ನಂತರ ನನಗೆ ಸ್ವಲ್ಪ ವಿಶ್ರಾಂತಿ ಬೇಕಿತ್ತು. ಅಮ್ಮನ ಮನೆಯಲ್ಲಿ ಒಂದೇ ತಿಂಗಳು ಬಾಣಂತನ ಮಾಡಿಕೊಂಡು ಬಂದು ಬಿಡಬೇಕು ಅಂತ ಆಸ್ಪತ್ರೆಯಲ್ಲೇ ಜಗಳ ಮಾಡಿದರು. ಹಾಗೆಲ್ಲ ಮಾಡಿದ್ದಕ್ಕೆ ಅವರ ಅಪ್ಪ ಅಮ್ಮ ನೋಡಿಕೊಳ್ಳಲ್ಲ ಎಂದರು. ಕೈ-ಕಾಲು ಹಿಡಿದುಕೊಂಡು ಅಪ್ಪ-ಅಮ್ಮನ ಮನೆಗೆ ಬಿಟ್ಟ’ ಎಂದು ಜೋಶಿತಾ ಹೇಳಿದ್ದಾರೆ.
‘ಮತ್ತೆ 2-3 ತಿಂಗಳು ಕಳೆದ ಬಳಿಕ ಜಗಳ ಮಾಡಿಕೊಂಡು ಅವರ ಮನೆಗೆ ಕರೆದುಕೊಂಡು ಹೋದ. ಆವಾಗಿಂದಲೇ ಸಮಸ್ಯೆ ಶುರು ಆಗಿದ್ದು. ಪಬ್, ಕ್ಲಬ್ಗೆ ಹೋಗೋಣ, ನೀನು ಯಾರ ಜೊತೆಗೆ ಬೇಕಾದರೂ ಹೋಗಿ ಮಲಗು. ನಾನು ನನಗೆ ಬೇಕಾದವರ ಜೊತೆ ಹೋಗುತ್ತೇನೆ. ನೀನು ನೋಡೋಕೆ ಚೆನ್ನಾಗಿ ಇದ್ದೀಯ. ಸಿನಿಮಾಗೆ ಕಮಿಟ್ ಆಗು ಎನ್ನಲು ಶುರು ಮಾಡಿದ. ಇಂಥ ವ್ಯಕ್ತಿತ್ವ ಇರುವವನನ್ನು ಮದುವೆ ಆದೆನಲ್ಲ ಅಂತ ನನಗೆ ನಾಚಿಕೆ ಆಯಿತು’ ಎಂದಿದ್ದಾರೆ ಜೋಶಿತಾ.
ಇದನ್ನೂ ಓದಿ: ಖ್ಯಾತ ನಟಿಗೆ ಲೈಂಗಿಕ ಕಿರುಕುಳ ನೀಡಿದ 6 ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
‘ಇದು ಸರಿ ಆಗುತ್ತಿಲ್ಲ ಅಂತ ನಾನು ಅವನನ್ನು ಬಿಟ್ಟು ಬಂದೆ. ನಾನು ಅಪ್ಪ-ಅಮ್ಮನ ಮನೆಯಲ್ಲಿ ಇದ್ದೆ. ಅಪ್ಪನಿಗೆ ಸ್ಟ್ರೋಕ್ ಆಗಿರುವುದರಿಂದ ಬ್ರೇನ್ ಆಪರೇಷನ್ ಆಗಿದೆ. ಅವರಿಗೆ ಟೆನ್ಷನ್ ಕೊಡಬಾರದು ಅಂತ ನಾನು ವಿಷಯ ಮುಚ್ಚಿಟ್ಟುಕೊಂಡೆ. ಬಳಿಕ ವಾಪಸ್ ನನ್ನನ್ನು ಗಂಡನ ಮನೆಗೆ ಬಿಟ್ಟುಬಂದರು. ಒಂದೇ ದಿನದಲ್ಲಿ ಜಗಳ ಆಯಿತು. ಬಿಟ್ಟು ಬಂದೆ. 11 ತಿಂಗಳು ಆಯಿತು. ನಾನು ಅವರ ಮನೆಗೆ ಕಾಲಿಟ್ಟಿಲ್ಲ’ ಎಂದು ಜೋಶಿತಾ ಹೇಳಿದ್ದಾರೆ.
‘ಮಗು ನನ್ನ ಜೊತೆ ಇತ್ತು. ಮಗು ಹುಟ್ಟಿದಾಗಿನಿಂದ ನಿನ್ನೆಯ ತನಕ ನಮ್ಮ ಮನೆಯಲ್ಲಿ ನಮ್ಮ ತಾಯಿಯೇ ನೋಡಿಕೊಳ್ಳುತ್ತಿದ್ದರು. ನಾನು ಡಿವೋರ್ಸ್ ಕೇಳುತ್ತಿದ್ದೆವು. ಕೊಡ್ತೀನಿ, ಕೊಡಲ್ಲ ಅಂತ ತುಂಬ ಆಟ ಆಡಿಸುತ್ತಿದ್ದ. ಬನ್ನಿ ಮಾತನಾಡೋಣ ಅಂತ ಅವರ ಮನೆ ಬಳಿ ನಮ್ಮನ್ನು ಕರೆಸಿಕೊಂಡ. ದುಡ್ಡು ಕೊಡಲ್ಲ ಏನು ಬೇಕಾದರೂ ಮಾಡಿಕೋ ಅಂದ. ಹಾಗಾದರೆ ನಿನ್ನ ಮಗು ನೀನು ಇಟ್ಟುಕೊ, ಅದರ ಖರ್ಚು ನೋಡಿಕೋ ಅಂತ ಮಗು ಕೊಡಲು ಹೋದೆ. ಅವನು ಎತ್ತಿಕೊಳ್ಳಲಿಲ್ಲ. ಅಲ್ಲಿಂದ ಮಾತು ಬೆಳೆದು ನನ್ನ ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ’ ಎಂದು ಜೋಶಿತಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



