Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪ್ಪಿಸಿಕೊಂಡ ಹರಕೆ ಕುರಿ ಮರಳಿದೆ ಮಾರಿಯಾಗಿ, ಮಾಸ್ಟರ್ ಕ್ಲಾಸ್​ಗೆ ತಯಾರಾಗಿರಿ ಬರ್ತಿದ್ದಾನೆ ‘ಟೋಬಿ’

Toby: ರಾಜ್ ಬಿ ಶೆಟ್ಟಿಯ 'ಟೋಬಿ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಹೇಗಿದೆ? ಇಲ್ಲಿ ನೋಡಿ...

ತಪ್ಪಿಸಿಕೊಂಡ ಹರಕೆ ಕುರಿ ಮರಳಿದೆ ಮಾರಿಯಾಗಿ, ಮಾಸ್ಟರ್ ಕ್ಲಾಸ್​ಗೆ ತಯಾರಾಗಿರಿ ಬರ್ತಿದ್ದಾನೆ 'ಟೋಬಿ'
ಟೋಬಿ ಸಿನಿಮಾ
Follow us
ಮಂಜುನಾಥ ಸಿ.
|

Updated on:Aug 04, 2023 | 5:57 PM

‘ತಪ್ಪಿಸಿಕೊಂಡ ಹರಕೆ ಕುರಿ, ಮಾರಿಯಾಗಿ ಮರಳಿದೆ, ಅದೂ ಬಿಳಿ ಕುದುರೆ ಮೇಲೆ’ ರಾಜ್ ಬಿ ಶೆಟ್ಟಿ ನಟಿಸಿರುವ ‘ಟೋಬಿ‘ (Toby) ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 04) ಬಿಡುಗಡೆ ಆಗಿದ್ದು, ಈಗಾಗಲೇ ಸಿನಿಮಾದ ಬಗ್ಗೆ ಇರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ ಈ ಮಾಸ್-ಕ್ಲಾಸ್ ಮಿಶ್ರಿತ ಟ್ರೈಲರ್. ರಾಜ್ ಬಿ ಶೆಟ್ಟಿ (Raj B Shetty) ಗೆಳೆಯರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಅವರುಗಳು ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು, ಲೈಟರ್ ಬುದ್ಧ ಫಿಲಮ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಟ್ರೈಲರ್ ನೋಡಬಹುದಾಗಿದೆ.

ಟ್ರೈಲರ್​ನಲ್ಲಿ ಕತೆಯ ಸಣ್ಣ ಎಳೆಗಳನ್ನಷ್ಟೆ ಬಿಟ್ಟುಕೊಟ್ಟು ಸಿನಿಮಾ ಬಗ್ಗೆ ಕುತೂಹಲ ಮೂಡುವಂತೆ ಮಾಡಿದ್ದಾರೆ ರಾಜ್ ಬಿ ಶೆಟ್ಟಿ ಮತ್ತು ತಂಡ. ತೀರ ಅಮಾಯಕನೊಬ್ಬ ತನ್ನ ‘ಒಡೆಯರ’ ಕುತ್ಸಿತ ಕೃತ್ಯಗಳಿಗೆ ತನ್ನವರನ್ನು ಕಳೆದುಕೊಂಡು, ತನ್ನನ್ನೂ ಬಲಿ ತೆಗೆದುಕೊಳ್ಳಲು ಹವಣಿಸಿದಾಗ ಅದರಿಂದ ತಪ್ಪಿಸಿಕೊಂಡು ದುಷ್ಟರ ಸಂಹಾರಕ್ಕೆ ಸಿದ್ಧನಾಗಿ ಬರುವ ಕತೆಯನ್ನು ಈ ಸಿನಿಮಾ ಒಳಗೊಂಡಿರುವ ಅನುಮಾನವನ್ನು ಟ್ರೈಲರ್ ಮೂಡಿಸುತ್ತಿದೆ. ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮೂಗನ ಪಾತ್ರದಲ್ಲಿ ನಟಿಸಿರುವ ಅನುಮಾನವೂ ಟ್ರೈಲರ್ ನೋಡಿದವರಿಗೆ ಮೂಡದೇ ಇರದು.

ಟ್ರೈಲರ್​ನಲ್ಲಿ ರಾಜ್ ಬಿ ಶೆಟ್ಟಿ ಗಮ್ಮತ್ತಾಗಿ ಕಾಣುತ್ತಾರೆ. ಅಮಾಯಕನಾಗಿ, ಪ್ರೇಮಿಯಾಗಿ, ಕುತೂಹಲಿಯಾಗಿ, ಬೇಜವಾಬ್ದಾರಿ ವ್ಯಕ್ತಿಯಾಗಿ, ಧಣಿಯ ಸೇವಕನಾಗಿ ಕೊನೆಗೆ ಮಾರಿಯಾಗಿ ಹೀಗೆ ಹಲವು ರೂಪಗಳಲ್ಲಿ ವಿಜೃಂಭಿಸಿದ್ದಾರೆ. ರಾಜ್ ಬಿ ಶೆಟ್ಟಿ ಮಾತ್ರವೇ ಅಲ್ಲದೆ ಸಿನಿಮಾದ ಇತರ ಪಾತ್ರಗಳಿಗೂ ನಟನೆಗೆ ಭರಪೂರ ಅವಕಾಶವನ್ನು ಸಿನಿಮಾದಲ್ಲಿ ಕಲ್ಪಿಸಿರುವುದು ಟ್ರೈಲರ್​ನಿಂದಲೇ ತಿಳಿದುಬರುತ್ತಿದೆ. ಚೈತ್ರಾ ಆಚಾರ್, ಗೋಪಾಲ್ ದೇಶಪಾಂಡೆ ಇನ್ನೂ ಇತರರ ನಟನೆ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:ಟೋಬಿಗಾಗಿ ಮೂಗು ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ: ಸಹಾಯಕರು ಹೇಳಿದ ಶೆಟ್ರ ಮೂಗಿನ ಕತೆ

ಸಂಗೀತ, ಕ್ಯಾಮೆರಾ ಕೆಲಸದ ಝಲಕ್ ಸಹ ಟ್ರೈಲರ್​ನಲ್ಲಿ ಸಿಗುತ್ತದೆ. ಇದರ ಜೊತೆಗೆ ಚುರುಕಾದ ಸಂಭಾಷಣೆಯ ಕೆಲವು ತುಣುಗಳನ್ನು ಟ್ರೈಲರ್​ನಲ್ಲಿ ಅಲ್ಲಲ್ಲಿ ಸೇರಿಸಿದ್ದಾರೆ. ‘ತಣ್ಣಗಾದ್ರೆ ಸೌದೆಗೇನ್ ಬೆಲೆ, ಬೆಂಕಿ ಬಿದ್ರೆ ದೊಡ್ಡವರ ಮೈ ಕಾಯೋದು’, ‘ಕುರಿ ಹಿಂದೆ ಬಂದ್ರೆ ಅದು ಕುರಿಯಾಗಿರಲ್ಲ ಮಾರಿಯಾಗಿರುತ್ತೆ’ ಇನ್ನೂ ಕೆಲವು ಸಂಭಾಷಣೆಗಳು, ಅದನ್ನು ಹೇಳಿರುವ ಧಾಟಿ ನಾಟುತ್ತದೆ. ಮೂರಲ್ಲಿ ಮತ್ತೊಂದು ಕಮರ್ಶಿಯಲ್ ಸಿನಿಮಾ ಇದಲ್ಲ ಎಂಬುದು ಟ್ರೈಲರ್​ನಿಂದ ಸ್ಪಷ್ಟವಾಗುತ್ತಿದೆ.

‘ಟೋಬಿ’ ಸಿನಿಮಾದ ಕತೆಯನ್ನು ಟಿಕೆ ದಯಾನಂದ ಬರೆದಿದ್ದಾರೆ. ಕತೆಗೆ ಚಿತ್ರಕತೆ ರೂಪ ಕೊಟ್ಟಿರುವುದು ರಾಜ್ ಬಿ ಶೆಟ್ಟಿ. ಸಿನಿಮಾ ನಿರ್ದೇಶನ ಮಾಡಿರುವುದು ಬಾಸಿಲ್. ಸಿನಿಮಾದಲ್ಲಿ ಚೈತ್ರಾ ಆಚಾರ್, ಸಂಯುಕ್ತಾ ಹೆಗ್ಡೆ, ಗೋಪಾಲ್ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಇನ್ನೂ ಹಲವರಿದ್ದಾರೆ. ಸಿನಿಮಾಕ್ಕೆ ಮಿದುನ್ ಮುಕುಂದನ್ ಸಂಗೀತ ನೀಡಿದ್ದು, ಈ ಸಿನಿಮಾಕ್ಕೆ ನೀಡಿರುವ ಅವರ ಥೀಮ್ ಸಂಗೀತ ಈಗಾಗಲೇ ವೈರಲ್ ಆಗಿದೆ. ಸಿನಿಮಾವು ಇದೇ ಆಗಸ್ಟ್ 25 ರಂದು ತೆರೆಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Fri, 4 August 23