ಉಪೇಂದ್ರ ವೀಕ್ನೆಸ್ ಏನು ಎಂದು ಕಂಡು ಹಿಡಿದುಕೊಂಡ ರಾಜ್: ನಿಮ್ಗೂ ಅಚ್ಚರಿ ಆಗುತ್ತೆ
45 movie scene: ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ. ಟಿವಿ9 ಜೊತೆಗೆ ಮಾತನಾಡಿರುವ ರಾಜ್ ಬಿ ಶೆಟ್ಟಿ, ತಾವು ಉಪೇಂದ್ರ ಅವರ ವೀಕ್ನೆಸ್ ಅನ್ನು ಕಂಡು ಹಿಡಿದಿರುವುದಾಗಿ ಹೇಳಿಕೊಂಡಿದ್ದಾರೆ. ಏನದು?

ರಾಜ್ ಬಿ. ಶೆಟ್ಟಿ, ಉಪೇಂದ್ರ (Upendra), ಶಿವರಾಜ್ಕುಮಾರ್ ಅವರು ‘45’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿದೆ. ಈಗ ಚಿತ್ರದ ಪ್ರಚಾರದ ಭಾಗವಾಗಿ ರಾಜ್, ಉಪೇಂದ್ರ ಹಾಗೂ ಸಿನಿಮಾ ನಿರ್ದೇಶಕ ಅರ್ಜುನ್ ಜನ್ಯ ಅವರು ಸಂದರ್ಶನ ನೀಡಿದ್ದಾರೆ.ಈ ಸಂದರ್ಶನದಲ್ಲಿ ಹಲವು ವಿಷಗಳನ್ನು ಇವರು ಹಂಚಿಕೊಂಡಿದ್ದಾರೆ. ಅದರಲ್ಲೂ ರಾಜ್ ಹೇಳಿದ ಒಂದು ಮಾತು ಗಮನ ಸೆಳೆಯಿತು.
ಟಿವಿ9 ಕನ್ನಡಕ್ಕೆ ಉಪೇಂದ್ರ, ರಾಜ್ ಹಾಗೂ ಅರ್ಜುನ್ ಸಂದರ್ಶನ ನೀಡಿದರು ಮತ್ತು ಈ ಸಂದರ್ಶನ ಉಪೇಂದ್ರ ಮನೆಯಲ್ಲೇ ನಡೆಯಿತು ಅನ್ನೋದು ವಿಶೇಷ. ಉಪೇಂದ್ರ ಅವರ ಮೈನಸ್ ಪಾಯಿಂಟ್ ಏನು ಎಂದು ಹೇಳೋದು ತುಂಬಾನೇ ಕಷ್ಟ. ಆದರೆ, ರಾಜ್ ಅವರು ಇದನ್ನು ಕಂಡು ಹಿಡಿದ್ದಾರೆ. ಇತ್ತೀಚೆಗೆ ಆ ವಿಷಯ ಅವರಿಗೆ ಗೊತ್ತಾಗಿದೆಯಂತೆ.
ರಾಜ್ ಅವರ ಬಗ್ಗೆ ಉಪೇಂದ್ರ ಮಾತನಾಡಿದರು. ‘ರಾಜ್ ಅವರು ಪ್ರತಿ ವಿಷಯವನ್ನು ಪದರ ಪದರವಾಗಿ ನೋಡುತ್ತಾರೆ. ತುಂಬಾನೇ ಆಳವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನೀವು ಇದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಉಪೇಂದ್ರ ಅವರು ರಾಜ್ಗೆ ಹೇಳಿದರು. ಇದನ್ನು ರಾಜ್ ಅವರು ಒಪ್ಪಲು ಸಿದ್ಧರೇ ಇರಲಿಲ್ಲ. ‘ನೀವು ತುಂಬಾನೇ ಜನರಿಗೆ ಸ್ಫೂರ್ತಿ ನೀಡಿದ್ದೀರಾ’ ಎಂದು ಉಪೇಂದ್ರ ಹೇಳಿದರು. ಆ ರಾಜ್ ಒಂದು ಅಚ್ಚರಿಯ ವಿಷಯ ಹೇಳಿದರು.
ಇದನ್ನೂ ಓದಿ:ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
‘ನಾನು ಇತ್ತೀಚೆಗೆ ಉಪೇಂದ್ರ ಅವರ ಒಂದು ಮೈನಸ್ ಪಾಯಿಂಟ್ ಕಂಡು ಹಿಡಿದುಕೊಂಡಿದ್ದೇನೆ. ಅವರನ್ನು ಹೊಗಳಿದರೆ ಅವರಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡೋಕೆ ಆಗಲ್ಲ. ಈಗಲೂ ಹಾಗೆಯೇ ಮಾಡುತ್ತಿದ್ದಾರೆ’ ಎಂದರು ರಾಜ್. ‘ನೀವು ಹಾಗೆ ಮಾಡ್ತೀರಾ’ ಎಂದರು ಉಪೇಂದ್ರ. ಈ ವಿಷಯವನ್ನು ರಾಜ್ ಒಪ್ಪಿದರು.
ಸಾಮಾನ್ಯವಾಗಿ ಯಾರಾದರೂ ಹೊಗಳಿದರೆ ಆ ಬಗ್ಗೆ ಖುಷಿ ಆಗುತ್ತದೆ. ಆದರೆ, ಇಲ್ಲಿ ಉಪೇಂದ್ರ ಹಾಗೂ ರಾಜ್ ಮಾತ್ರ ಭಿನ್ನ. ತುಂಬಿದ ಕೊಡ ತುಳುಕುವುದಿಲ್ಲ ಎಂಬುದಕ್ಕೆ ಇದು ಉತ್ತಮ ಉದಾಹರಣೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



