ಮಲಯಾಳಂಗೆ ‘ಟೋಬಿ’, ಶೀಘ್ರವೇ ಬಿಡುಗಡೆ

|

Updated on: Sep 12, 2023 | 10:02 PM

Raj B Shetty: ರಾಜ್ ಬಿ ಶೆಟ್ಟಿ ನಟಿಸಿ, ಚಿತ್ರಕತೆ ಬರೆದಿರುವ 'ಟೋಬಿ' ಸಿನಿಮಾ ಮಲಯಾಳಂ ಭಾಷೆಗೆ ಡಬ್ ಆಗಿದ್ದು, ಸೆಪ್ಟೆಂಬರ್ 22 ರಂದು ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ಪ್ರಶಂಸೆಗೆ ಪಾತ್ರವಾದ ಈ ಸಿನಿಮಾ ಮಲಯಾಳಂನಲ್ಲಿಯೂ ಸದ್ದು ಮಾಡುವ ವಿಶ್ವಾಸ ಚಿತ್ರತಂಡದ್ದು.

ಮಲಯಾಳಂಗೆ ಟೋಬಿ, ಶೀಘ್ರವೇ ಬಿಡುಗಡೆ
ಟೋಬಿ
Follow us on

ರಾಜ್ ಬಿ ಶೆಟ್ಟಿ (Raj B Shetty) ನಟಿಸಿರುವ ‘ಟೋಬಿ’ ಸಿನಿಮಾ ಆಗಸ್ಟ್ 25ರಂದು ಬಿಡುಗಡೆ ಆಗಿದೆ. ಕನ್ನಡದಲ್ಲಿ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ. ‘ಟೋಬಿ’ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರವೇ ಬಿಡುಗಡೆ ಆಗಿತ್ತು. ಇದೀಗ ‘ಟೋಬಿ’ ಸಿನಿಮಾ ಮಲಯಾಳಂನಲ್ಲಿಯೂ ಬಿಡುಗಡೆ ಆಗಲಿದೆ. ಸಿನಿಮಾದ ಮಲಯಾಳಂ ಪೋಸ್ಟರ್ ಬಿಡುಗಡೆ ಆಗಿದ್ದು, ಬಿಡುಗಡೆ ದಿನದ ಮಾಹಿತಿಯೂ ಪೋಸ್ಟರ್​ನಲ್ಲಿದೆ.

ಮಲಯಾಳಂನಲ್ಲಿ ‘ಟೋಬಿ’ ಸಿನಿಮಾ ಇದೇ ತಿಂಗಳು 22ಕ್ಕೆ ಬಿಡುಗಡೆ ಆಗಲಿದೆ. ತಮ್ಮ ಸಿನಿಮಾದ ಪ್ರಚಾರವನ್ನು ರಾಜ್ ಬಿ ಶೆಟ್ಟಿ ಮತ್ತು ತಂಡ ಕೇರಳದಲ್ಲಿಯೂ ಮಾಡುವ ಸಾಧ್ಯತೆ ಇದೆ. ರಾಜ್ ಬಿ ಶೆಟ್ಟಿ ಈಗಾಗಲೇ ಒಂದು ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಅಲ್ಲದೆ ಅವರ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಸಿನಿಮಾಕ್ಕೆ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಈಗ ‘ಟೋಬಿ’ ಸಿನಿಮಾವನ್ನು ಮಲಯಾಳಂನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

‘ಟೋಬಿ’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದ್ದ ರಾಜ್ ಬಿ ಶೆಟ್ಟಿ, ‘ನಾವು ‘ಟೋಬಿ’ ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ. ಬೇರೆ ಭಾಷೆಗಳಲ್ಲಿ ಡಬ್ ಮಾಡಿ ರೆಡಿ ಇಟ್ಟಿದ್ದೇವೆ ಆದರೆ ಸಿನಿಮಾಕ್ಕೆ ಸಿಗುವ ಪ್ರತಿಕ್ರಿಯೆಯ ಮೂಲಕ ಯಾವ ಭಾಷೆಗಳಲ್ಲಿ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸುತ್ತೇವೆ ಎಂದಿದ್ದರು. ‘ಕಾಂತಾರ’ ಸಿನಿಮಾದ ಮಾದರಿ ನಮ್ಮ ಸಿನಿಮಾ ಸ್ವತಃ ಬೇರೆ ಬೇರೆ ಕಡೆ ಟ್ರಾವೆಲ್ ಮಾಡಬೇಕು ಎಂಬುದು ನಮ್ಮ ಆಶಯ” ಎಂದಿದ್ದರು. ಅಂತೆಯೇ ಈಗ ‘ಟೋಬಿ’ ಮಲಯಾಳಂ ಭಾಷೆಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:ಮೈಸೂರು ಘಟನೆ ಬಗ್ಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ: ‘ಅಲ್ಲಿ ನಡೆದಿದ್ದು ಬೇರೆ, ಆದರೆ ಆತ ಮಾಡಿದ್ದು ಅಕ್ಷಮ್ಯ’

‘ಟೋಬಿ’ ಸಿನಿಮಾದ ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ಕತೆ ಟಿಕೆ ದಯಾನಂದ ಅವರದ್ದು. ನಿಜ ವ್ಯಕ್ತಿಯೊಬ್ಬನನ್ನು ಆಧರಿಸಿ ‘ಟೋಬಿ’ ಕತೆಯನ್ನು ದಯಾನಂದ ಬರೆದಿದ್ದರು. ಅದಕ್ಕೆ ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ಸಿನಿಮಾವನ್ನು ರಾಜ್ ಅವರ ತಂಡದ ಸದಸ್ಯ ಬಾಸಿಲ್ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಮಿದುನ್ ಮುಕುಂದನ್ ನೀಡಿದ್ದಾರೆ.

‘ಟೋಬಿ’ ಸಿನಿಮಾವು ಮೂಗ ವ್ಯಕ್ತಿಯೊಬ್ಬನ ಕತೆಯನ್ನು ಒಳಗೊಂಡಿದೆ. ಮೂಕ ವ್ಯಕ್ತಿಯ ಭಾವುಕತೆ, ಮಗಳೊಟ್ಟಿಗೆ ಅವನ ಬಂಧ ಇನ್ನಿತರೆ ವಿಷಯಗಳು ಸಿನಿಮಾದಲ್ಲಿ ಬಂದು ಹೋಗಿವೆ. ಸಾಮಾನ್ಯ ವ್ಯಕ್ತಿಯೊಬ್ಬ ತನ್ನನ್ನು ತುಳಿದವರ ವಿರುದ್ಧ ದ್ವೇಷ ತೀರಿಸಿಕೊಳ್ಳುವ ಕತೆ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಚೈತ್ರಾ ಆಚಾರ್, ಸಂಯುಕ್ತಾ ಹೊರನಾಡು, ಗೋಪಾಲ್ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ