ಬಿಗ್ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿರುವ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳಿವು; ಇದೆ ಭರ್ಜರಿ ನಿರೀಕ್ಷೆ
‘ಕಾಂತಾರ 2’, ‘ಮ್ಯಾಕ್ಸ್’ ಸೇರಿ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೆಡಿ ಆಗುತ್ತಿವೆ. ಇದಕ್ಕೆ ನಿರ್ಮಾಪಕರು ದೊಡ್ಡ ಮಟ್ಟದ ಹಣ ಹೂಡಿಕೆ ಮಾಡುತ್ತಿದ್ದಾರೆ. ಈ ಚಿತ್ರಗಳ ಮೇಲೆ ನಿರೀಕ್ಷೆ ಕೂಡ ಬೆಟ್ಟದಷ್ಟಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಇರುವ ನಿರೀಕ್ಷೆ ಹೆಚ್ಚುತ್ತಲೇ ಇದೆ. ಬಾಲಿವುಡ್ನವರು ಕೂಡ ಇತ್ತ ತಿರುಗಿ ನೋಡುವಂತೆ ಮಾಡಿದ ಖ್ಯಾತಿ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗಕ್ಕೆ ಸೇರುತ್ತದೆ. ಸದ್ಯ ‘ಕಾಂತಾರ 2’ (Kantara 2 Movie), ‘ಮ್ಯಾಕ್ಸ್’ ಸೇರಿ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೆಡಿ ಆಗುತ್ತಿವೆ. ಇದಕ್ಕೆ ನಿರ್ಮಾಪಕರು ದೊಡ್ಡ ಮಟ್ಟದ ಹಣ ಹೂಡಿಕೆ ಮಾಡುತ್ತಿದ್ದಾರೆ. ಈ ಚಿತ್ರಗಳ ಮೇಲೆ ನಿರೀಕ್ಷೆ ಕೂಡ ಬೆಟ್ಟದಷ್ಟಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಕಾಂತಾರ 2’
‘ಕಾಂತಾರ’ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಈ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಯಿತು. ಆ ಬಳಿಕ ಚಿತ್ರ ಹಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಿ ಯಶಸ್ಸು ಕಂಡಿತು. ಈ ಕಾರಣದಿಂದಲೇ ‘ಕಾಂತಾರ 2’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ‘ಕಾಂತಾರ’ ಚಿತ್ರದ ಪ್ರೀಕ್ವೆಲ್. ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.
ಮಾರ್ಟಿನ್
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರ ಕೂಡ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾಗೆ ಎಪಿ ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ.
‘ಕೆಡಿ’
ಕೆಡಿ ಚಿತ್ರದಲ್ಲೂ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಮ್ಯಾಕ್ಸ್
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಟೀಸರ್ ಮೂಲಕ ಗಮನ ಸೆಳೆದಿದೆ. ಕಿಚ್ಚ ಜನ್ಮದಿನಕ್ಕೆ ಚಿತ್ರದ ಟೈಟಲ್ ರಿವೀಲ್ ಆಗಿದೆ. ಈ ಚಿತ್ರದಲ್ಲಿ ಸುದೀಪ್ ಅವರು ಪೊಲೀಸ್ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಸದ್ಯ, ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ದೇವರ
‘ದೇವರ’ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ಜೂನಿಯರ್ ಎನ್ಟಿಆರ್ ಹೀರೋ. ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರ ಮೊದಲ ತೆಲುಗು ಸಿನಿಮಾ. ‘ಆದಿಪುರುಷ್’ ಬಳಿಕ ಸೈಫ್ ಅಲಿ ಖಾನ್ ಈ ಚಿತ್ರದ ಮೂಲಕ ಮತ್ತೊಮ್ಮೆ ತೆಲುಗು ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರ ದೊಡ್ಡ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.
ಇಂಡಿಯನ್ 2
ವಿವಿಧ ಗೆಟಪ್ನಲ್ಲಿ ಗಮನ ಸೆಳೆಯೋದರಲ್ಲಿ ಕಮಲ್ ಹಾಸನ್ ಸದಾ ಮುಂದಿರುತ್ತಾರೆ. ಈಗ ‘ಇಂಡಿಯನ್ 2’ ಚಿತ್ರದ ಮೂಲಕ ಹೊಸ ಗೆಟಪ್ ತಾಳಲು ಕಮಲ್ ರೆಡಿ ಆಗಿದ್ದಾರೆ. ಶಂಕರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ‘ಇಂಡಿಯನ್’ ಚಿತ್ರದ ಸೀಕ್ವೆಲ್. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಕಾರಣಾಂತರಗಳಿಂದ ಸಿನಿಮಾ ಕೆಲಸ ವಿಳಂಬ ಆಗಿದೆ.
ಸಲಾರ್
‘ಕೆಜಿಎಫ್ 2’ ಬಳಿಕ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಪರಭಾಷೆಯಲ್ಲೂ ಆ್ಯಕ್ಟೀವ್ ಆಗಿದೆ. ತೆಲುಗಿನ ‘ಸಲಾರ್’ ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ಹೀರೋ, ಶ್ರುತಿ ಹಾಸನ್ ನಾಯಕಿ. ಕನ್ನಡದ ಪ್ರಶಾಂತ್ ನೀಲ್ ನಿರ್ದೇಶನ ಚಿತ್ರಕ್ಕಿದೆ. ಸೆಪ್ಟೆಂಬರ್ 28ರಂದು ‘ಸಲಾರ್’ ರಿಲೀಸ್ ಆಗಬೇಕಿತ್ತು. ಆದರೆ, ಬಿಡುಗಡೆ ವಿಳಂಬ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ಗೇಮ್ ಚೇಂಜರ್
‘ಆರ್ಆರ್ಆರ್’ ಚಿತ್ರದ ಮೂಲಕ ರಾಮ್ ಚರಣ್ ವೃತ್ತಿ ಜೀವನದ ದಿಕ್ಕು ಬದಲಾಗಿದೆ. ಅವರು ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಇದೆ. ಈ ಚಿತ್ರದ ಪೋಸ್ಟರ್ಗಳು ಗಮನ ಸೆಳೆದಿವೆ. ಕಿಯಾರಾ ಅಡ್ವಾಣಿ ನಾಯಕಿ ಆಗಿರುವ ಈ ಚಿತ್ರ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ಕಂಗುವಾ
ಸೂರ್ಯ ಅವರು ತಮಿಳಿನ ಟ್ಯಾಲೆಂಟೆಡ್ ಹೀರೋ. ಅವರು ‘ಕಂಗುವ’ ಚಿತ್ರದಲ್ಲಿ ಆರು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಟೀಸರ್ ಗಮನ ಸೆಳೆದಿದೆ. ಈ ಸಿನಿಮಾ 2024ರಲ್ಲಿ ರಿಲೀಸ್ ಆಗಲಿದೆ. ‘ಕಂಗುವಾ’ ತಮಿಳು, ತೆಲುಗು ಸೇರಿದಂತೆ 11 ಭಾಷೆಗಳಲ್ಲಿ ಸಿದ್ಧ ಆಗುತ್ತಿದೆ ಅನ್ನೋದು ವಿಶೇಷ. ಈ ಮೂಲಕ ಹೊಸ ದಾಖಲೆ ಬರೆಯಲು ಸಿನಿಮಾ ರೆಡಿ ಆಗಿದೆ.
ಇದನ್ನೂ ಓದಿ: ಈ ಸೆಲೆಬ್ರಿಟಿಗಳ ಬಾಳಲ್ಲಿ ನಡೆದಿತ್ತು ದೊಡ್ಡ ಟ್ರ್ಯಾಜಿಡಿ; ಟ್ರೋಲ್ಗಳಿಗೆ ಆಹಾರವಾಗಿದ್ದ ಕಲಾವಿದರು
ಲಿಯೋ
ದಳಪತಿ ವಿಜಯ್ ನಟನೆಯ ‘ಲಿಯೋ’ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರ ನಿರ್ದೇಶನ ಇದೆ. ಈ ಚಿತ್ರದ ರಿಲೀಸ್ ದಿನಾಂಕ ಇನ್ನೂ ಅಧಿಕೃತ ಆಗಿಲ್ಲ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ.
‘ಕಲ್ಕಿ 2898 ಎಡಿ’
ಮಲ್ಟಿ ಸ್ಟಾರರ್ ಸಿನಿಮಾ ಆಗಿ ಹೊರ ಹೊಮ್ಮಿದೆ ‘ಕಲ್ಕಿ 2898 ಎಡಿ’ ಸಿನಿಮಾ. ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. 2024ರಲ್ಲಿ ರಿಲೀಸ್ ಆಗಲಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 am, Wed, 13 September 23