ಶರಣ್ ಹೀರೋ ಆಗಲು ರವಿಚಂದ್ರನ್ ಕಾರಣ; ‘ಛೂಮಂತರ್’ ಹಾಡಿನ ಬಿಡುಗಡೆ ವೇಳೆ ಫ್ಲ್ಯಾಶ್ಬ್ಯಾಕ್
‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರು ‘ಛೂಮಂತರ್’ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶರಣ್, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್ ಮುಂತಾದವರು ನಟಿಸಿದ್ದಾರೆ. ನವನೀತ್ ಅವರು ನಿರ್ದೇಶನ ಮಾಡಿದ್ದು, ತರುಣ್ ಶಿವಪ್ಪ ಮತ್ತು ಮಾನಸಾ ತರುಣ್ ನಿರ್ಮಾಣ ಮಾಡಿದ್ದಾರೆ.
ನಟ ಶರಣ್ (Sharan) ಅವರು ಹಾಸ್ಯ ಕಲಾವಿದನಾಗಿ ಬ್ಯುಸಿ ಆಗಿದ್ದರು. ಆ ಬಳಿಕ ಅವರು ಹೀರೋ ಆಗಿ ಬಡ್ತಿ ಪಡೆದರು. ಈಗ ಅವರು ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಾಯಕ ನಟನಾಗಿ ಗುರುತಿಸಿಕೊಂಡಿದ್ದಾರೆ. ಅಚ್ಚರಿ ಏನೆಂದರೆ ತಾವು ಹೀರೋ ಆಗಬೇಕು ಎಂಬ ಹಂಬಲ ಶರಣ್ ಮನದಲ್ಲಿ ಹುಟ್ಟಲು ರವಿಚಂದ್ರನ್ ಕಾರಣ. ಆ ವಿಚಾರದ ಬಗ್ಗೆ ಶರಣ್ ಮಾತನಾಡಿದ್ದಾರೆ. ಅವರು ನಟಿಸಿರುವ ‘ಛೂಮಂತರ್’ (Choomantar Movie) ಸಿನಿಮಾದ ಶೀರ್ಷಿಕೆ ಗೀತೆ ಬಿಡುಗಡೆ ವೇಳೆ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ರವಿಚಂದ್ರನ್ (Ravichandran) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಅವರೇ ಟೈಟಲ್ ಸಾಂಗ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
‘ತರುಣ್ ಸ್ಟುಡಿಯೋಸ್’ ಬ್ಯಾನರ್ನಲ್ಲಿ ತರುಣ್ ಶಿವಪ್ಪ ಮತ್ತು ಮಾನಸಾ ತರುಣ್ ಅವರು ‘ಛೂಮಂತರ್’ ಸಿನಿಮಾವನ್ನು ನಿರ್ಮಿಸಿದ್ದಾರೆ. ನವನೀತ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶರಣ್ ಅವರ ಜೊತೆ ಅದಿತಿ ಪ್ರಭುದೇವ ಮತ್ತು ಮೇಘನಾ ಗಾಂವ್ಕರ್ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ‘ಆನಂದ್ ಆಡಿಯೋ’ ಮೂಲಕ ಈ ಹಾಡು ಬಿಡುಗಡೆ ಆಗಿದೆ.
‘ನಾನು ಹೀರೋ ಆಗಲು ರವಿಚಂದ್ರನ್ ಅವರೇ ಕಾರಣ. ಅವರ ಜೊತೆ ನಾನು ‘ಹಠವಾದಿ’ ಚಿತ್ರದಲ್ಲಿ ನಟಿಸುತ್ತಿರುವಾಗ ನೀನು ಇನ್ನೂ ಹೀರೋ ಆಗಿಲ್ವಾ ಎಂದು ಕೇಳಿದ್ದರು. ಅಲ್ಲಿಯವರೆಗೆ ನಾಯಕನಾಗಬೇಕು ಅಂತ ಯಾವತ್ತೂ ಅಂದುಕೊಂಡಿರದ ನಾನು ರವಿಚಂದ್ರನ್ ಅವರು ಹೇಳಿದ 2 ವರ್ಷಗಳಲ್ಲೇ ಹೀರೋ ಆದೆ. ರವಿಚಂದ್ರನ್ ಅವರದ್ದು ಅಷ್ಟು ಒಳ್ಳೆಯ ಮನಸ್ಸು. ಇಂದು ಅವರು ನಮ್ಮ ಸಿನಿಮಾದ ಹಾಡನ್ನು ಬಿಡುಗಡೆ ಮಾಡಿದ್ದು ಸಂತಸ ತಂದಿದೆ’ ಎಂದು ಶರಣ್ ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡದಲ್ಲಿ ಸಿದ್ಧವಾಗುತ್ತಿದೆ ‘ರಾವೆನ್’ ಸಿನಿಮಾ; ಕಾಗೆಯಿಂದ ಒಳ್ಳೆಯದಾಗೋ ಕಥೆ
‘ಸಿನಿಮಾ ತಂಡದವರ ಮಾತು ಕೇಳಿದಾಗ ಈ ಟೀಮ್ನಿಂದ ಒಳ್ಳೆಯ ಸಿನಿಮಾ ಮೂಡಿಬರುವ ಎಲ್ಲಾ ಲಕ್ಷಣಗಳು ಇವೆ ಎನಿಸಿತು. ಶರಣ್ ಓರ್ವ ಒಳ್ಳೆಯ ನಟ. ಆತನ ಚಿತ್ರದಲ್ಲಿ 2 ಗೀತೆಗಳು ಖಂಡಿತಾ ಹಿಟ್ ಆಗುತ್ತವೆ. ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಾಂಗ್ ಕೂಡ ಚೆನ್ನಾಗಿದೆ. ನಿರ್ಮಾಪಕ ತರುಣ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಈ ಸಿನಿಮಾ ಯಶಸ್ವಿಯಾಗಲಿ’ ಎಂದು ರವಿಚಂದ್ರನ್ ಶುಭ ಕೋರಿದ್ದಾರೆ. ‘ಛೂಮಂತರ್’ ಸಿನಿಮಾದ ಟೈಟಲ್ ಸಾಂಗ್ ಅನ್ನು ವಿಜಯ್ ಈಶ್ವರ್ ಬರೆದಿದ್ದಾರೆ. ದರ್ಶಿನಿ ಅವರು ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ.
ಇದನ್ನೂ ಓದಿ: ನಟ, ನಿರ್ದೇಶಕ ವಿಕ್ಕಿ ವರುಣ್ ಕಾನ್ಸೆಪ್ಟ್ನಲ್ಲಿ ಹೊರಬಂತು ‘ಸೌಂಡ್ಸ್ ಆಫ್ ಕಾಲಾಪತ್ಥರ್’ ವಿಡಿಯೋ
‘ನಾವು ರವಿಚಂದ್ರನ್ ಅವರಿಗೆ ಒಂದಷ್ಟು ದಿನಗಳ ಮೊದಲೇ ಟೀಸರ್ ತೋರಿಸಿದ್ದೆವು. ಶೀರ್ಷಿಕೆ ಗೀತೆಯನ್ನು ನೀವೇ ರಿಲೀಸ್ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದೆವು. ಇಂದು ರವಿಚಂದ್ರನ್ ಅವರು ಬಂದು ಈ ಸಾಂಗ್ ರಿಲೀಸ್ ಮಾಡಿದ್ದಕ್ಕೆ ಬಹಳ ಖುಷಿ ಆಗಿದೆ. ಈ ಸಿನಿಮಾ ಟೈಟಲ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮತ್ತು ಕಥೆಯನ್ನು ಮೆಚ್ಚಿಕೊಂಡು ಪ್ರೋತ್ಸಾಹ ನೀಡಿರುವ ತರುಣ್ ಸುಧೀರ್ಗೆ ಧನ್ಯವಾದಗಳು. ಶೀಘ್ರದಲ್ಲೇ ಟ್ರೇಲರ್ ಕೂಡ ರಿಲೀಸ್ ಆಗಲಿದೆ’ ಎಂದು ನಿರ್ಮಾಪಕ ತರುಣ್ ಶಿವಪ್ಪ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.