ನಟ, ನಿರ್ದೇಶಕ ವಿಕ್ಕಿ ವರುಣ್ ಕಾನ್ಸೆಪ್ಟ್ನಲ್ಲಿ ಹೊರಬಂತು ‘ಸೌಂಡ್ಸ್ ಆಫ್ ಕಾಲಾಪತ್ಥರ್’ ವಿಡಿಯೋ
ನಿರ್ದೇಶಕ ‘ದುನಿಯಾ’ ಸೂರಿ ಅವರ ಬಳಿ ನಿರ್ದೇಶನದ ಪಾಠಗಳನ್ನು ಕಲಿತು ಬಂದಿರುವ ವಿಕ್ಕಿ ವರುಣ್ ಅವರು ಈಗ ‘ಕಾಲಾಪತ್ಥರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದ ಹಾಡುಗಳನ್ನು ಪರಿಚಯಿಸುವ ರೀತಿಯಲ್ಲಿ ಒಂದು ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿವೆ.
‘ಕಾಲಾಪತ್ಥರ್’ ಸಿನಿಮಾದ (Kaalapatthar Movie) ಹಾಡುಗಳ ಝಲಕ್ ತೋರಿಸುವಂತಹ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ‘ಕೆಂಡ ಸಂಪಿಗೆ’ ಖ್ಯಾತಿಯ ವಿಕ್ಕಿ ವರುಣ್ (Vikky Varun) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮುಖ್ಯ ಭೂಮಿಕೆಯಲ್ಲೂ ಅವರೇ ನಟಿಸಿದ್ದಾರೆ. ‘ಭುವನ್ ಮೂವೀಸ್’ ಬ್ಯಾನರ್ನಲ್ಲಿ ಭುವನ್ ಸುರೇಶ್ ಮತ್ತು ನಾಗರಾಜ್ ಬಿಲ್ಲಿನಕೋಟೆ ಅವರು ನಿರ್ಮಿಸಿರುವ ಈ ಸಿನಿಮಾಗೆ ಅನೂಪ್ ಸೀಳಿನ್ (Anoop Seelin) ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಐದು ಹಾಡುಗಳು ಇವೆ. ಯಾವ ಸಾಂಗ್ ಯಾವ ಫ್ಲೇವರ್ನಲ್ಲಿ ಇದೆ ಎಂಬುದನ್ನು ತೋರಿಸಲು ಅವುಗಳ ತುಣುಕುಗಳನ್ನು ಸೇರಿಸಿ ‘ಸೌಂಡ್ಸ್ ಆಫ್ ಕಾಲಾಪತ್ಥರ್’ ಎಂಬ ಹೆಸರಿನಲ್ಲಿ ಟೀಸರ್ ಅನಾವರಣ ಮಾಡಲಾಗಿದೆ. ಈ ವೇಳೆ ಚಿತ್ರದ ಬಗ್ಗೆ ತಂಡದವರು ಮಾತನಾಡಿದ್ದಾರೆ.
ಸಂಗೀತ ಅನೂಪ್ ಸೀಳಿನ್ ಅವರು ಸಿನಿಮಾದ ಆಡಿಯೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಇದರಲ್ಲಿ ಐದು ಹಾಡುಗಳು ಇವೆ. ವಿ. ನಾಗೇಂದ್ರ ಪ್ರಸಾದ್ ಮತ್ತು ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್, ಅಭಿಷೇಕ್, ಐಶ್ವರ್ಯಾ ರಂಗರಾಜನ್, ಸಾಯಿ ವಿಘ್ನೇಶ್, ಸಿದ್ದಾರ್ಥ್ ಬೆಳ್ಮಣ್ಣು ಮತ್ತು ಶಿವಾನಿ ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಈಗ ನಾವು ಬಿಡುಗಡೆ ಮಾಡಿರುವ ಸೌಂಡ್ಸ್ ಆಫ್ ಕಾಲಾಪತ್ಥರ್ ಎಂಬುದು ವಿಕ್ಕಿ ವರುಣ್ ಅವರ ಪರಿಕಲ್ಪನೆ’ ಎಂದು ಅನೂಪ್ ಸೀಳಿನ್ ಹೇಳಿದ್ದಾರೆ.
‘ಸೌಂಡ್ಸ್ ಆಫ್ ಕಾಲಾಪತ್ಥರ್’ ವಿಡಿಯೋ:
ನಿರ್ದೇಶಕ ದುನಿಯಾ ಸೂರಿ ಅವರ ಬಳಿ ನಿರ್ದೇಶನದ ಪಾಠಗಳನ್ನು ಕಲಿತು ಬಂದಿರುವ ವಿಕ್ಕಿ ವರುಣ್ ಅವರು ಈಗ ‘ಕಾಲಾಪತ್ಥರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ನಿರ್ದೇಶನ ಎಂಬುದು ನನ್ನ ಡ್ರೀಮ್. ನನ್ನ ಆ ಕನಸನ್ನು ನನಸು ಮಾಡಿದ ನಿರ್ಮಾಪಕರಿಗೆ ನಾನು ಆಭಾರಿ ಆಗಿದ್ದೇನೆ. ಸೂರಿ ಅವರ ಬಳಿ 10 ವರ್ಷಗಳ ಕಾಲ ಕೆಲಸ ಮಾಡಿದ್ದರಿಂದ ನಿರ್ದೇಶನ ನನಗೆ ಕಷ್ಟ ಆಗಲಿಲ್ಲ. ಡೈರೆಕ್ಷನ್ ಮತ್ತು ನಟನೆ ಎರಡೂ ಒಟ್ಟಿಗೆ ನಿಭಾಯಿಸುವುದು ಕೊಂಚ ಕಷ್ಟ. ಹಾಗಿದ್ದರೂ ನಮ್ಮ ಟೀಮ್ನ ಸಹಕಾರದಿಂದ ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದು ವಿಕ್ಕಿ ವರಣ್ ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಹೆಸರಲ್ಲಿ ಸಿನಿಮಾ ಮಾಡ್ತಿರೋದೇಕೆ?: ‘ಕಾಲಾಪತ್ಥರ್’ ಟೈಟಲ್ ವಿರುದ್ಧ ಮಾಜಿ ರೌಡಿಶೀಟರ್ ಗರಂ
‘ಏನಾದರೂ ಹೊಸದಾಗಿ ಮಾಡಬೇಕು ಎನಿಸಿದಾಗ ಸೌಂಡ್ಸ್ ಆಫ್ ಕಾಲಾಪತ್ಥರ್ ವಿಡಿಯೋ ಮಾಡುವ ಐಡಿಯಾ ಬಂತು. ಹಾಗಾಗಿ ಇದನ್ನು ಬಿಡುಗಡೆ ಮಾಡಿದ್ದೇವೆ. ‘ಕಾಲಾಪತ್ಥರ್’ ಎಂಬ ಶೀರ್ಷಿಕೆ ಬಗ್ಗೆ ಹೇಳಿದರೆ, ಕಥೆ ಹೇಳಿದಂತೆ ಆಗುತ್ತದೆ. ಸಿನಿಮಾ ನೋಡಿದಾಗ ಅದರ ಬಗ್ಗೆ ತಿಳಿಯುತ್ತದೆ’ ಎಂದು ವಿಕ್ಕಿ ವರುಣ್ ಮಾಹಿತಿ ತಿಳಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾದ ಬಿಡುಗಡೆ ದಿನಾಂಕ ತಿಳಿಸುವುದಾಗಿ ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲಿನಕೋಟೆ ಹೇಳಿದ್ದಾರೆ. ಡಾ. ರಾಜ್ ಕುಟುಂಬದ ನಟಿ ಧನ್ಯಾ ರಾಮ್ಕುಮಾರ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿ ಅವರು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗಂಗಾ ಎಂಬ ಹೆಸರಿನ ಶಿಕ್ಷಕಿಯ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.