ಶಿವರಾತ್ರಿ ಪ್ರಯುಕ್ತ ಶಿವನ ವಿಶೇಷ ಹಾಡು; ಹಬ್ಬಕ್ಕೆ ಉಡುಗೊರೆ ನೀಡಿದ ‘ವೀರಂ’ ಚಿತ್ರತಂಡ
‘ವೀರಂ’ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ‘ಶಿವ ಶಿವ..’ ಹಾಡಿಗೆ ಖ್ಯಾತ ಗಾಯಕಿ ಅನನ್ಯಾ ಭಟ್ ಧ್ವನಿ ನೀಡಿದ್ದಾರೆ.
ಶಿವರಾತ್ರಿ (Shivaratri 2022) ಹಬ್ಬದ ಆಚರಣೆಗೆ ಎಲ್ಲರೂ ಸಜ್ಜಾಗಿದ್ದಾರೆ. ಪರಮೇಶ್ವರನನ್ನು ಭಕ್ತಿ-ಭಾವದಿಂದ ಪೂಜಿಸಲು ಸಕಲ ತಯಾರಿ ನಡೆದಿದೆ. ಈ ಸಮಯದಲ್ಲಿ ಎಲ್ಲೆಲ್ಲೂ ಶಿವನ ಗಾನ ಕೇಳಿಸುತ್ತದೆ. ಈ ಸಂದರ್ಭಕ್ಕೆ ಸರಿಯಾಗಿ ‘ವೀರಂ’ ಸಿನಿಮಾದಿಂದ ಒಂದು ವಿಶೇಷ ಹಾಡು ಬಿಡುಗಡೆ ಆಗಿದೆ. ಪ್ರಜ್ವಲ್ ದೇವರಾಜ್ ಅಭಿನಯದ ಈ ಚಿತ್ರದಿಂದ ಶಿವನ ಹಾಡನ್ನು ರಿಲೀಸ್ ಮಾಡಲಾಗಿದೆ. ಶಿವರಾತ್ರಿಯ ಪ್ರಯುಕ್ತ ಈ ಗೀತೆ ಹೊರಬಂದಿದ್ದು, ಜನಮೆಚ್ಚುಗೆ ಪಡೆದುಕೊಳ್ಳುತ್ತಿದೆ. ‘ವೀರಂ’ (Veeram Kannada Movie) ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರು ಸಂಗೀತ ನೀಡಿದ್ದಾರೆ. ಶಶಿಧರ ಕೆ.ಎಂ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೇ 6ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ‘ಶಿವ ಶಿವ..’ ಹಾಡಿನ ಮೂಲಕ ಚಿತ್ರತಂಡ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ (Prajwal Devaraj) ಜೊತೆ ಹಿರಿಯ ನಟಿ ಶ್ರುತಿ ಅಭಿನಯಿಸಿದ್ದಾರೆ. ತಾಯಿ-ಮಗನ ಪಾತ್ರದಲ್ಲಿ ಅವರಿಬ್ಬರು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಶ್ರೀನಗರ ಕಿಟ್ಟಿ, ಅಚ್ಯುತ್ ಕುಮಾರ್ ಅವರಂತಹ ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಸದ್ಯ ಬಿಡುಗಡೆ ಆಗಿರುವ ‘ಶಿವ ಶಿವ..’ ಹಾಡಿಗೆ ಖ್ಯಾತ ಗಾಯಕಿ ಅನನ್ಯಾ ಭಟ್ ಧ್ವನಿ ನೀಡಿದ್ದಾರೆ. ‘ಖದರ್’ ಕುಮಾರ್ ಅವರು ಈ ಚಿತ್ರದ ನಿರ್ದೇಶಕರು.
‘ವೀರಂ’ ಸಿನಿಮಾದಲ್ಲಿ ಹಿರಿಯ ನಟಿ ಶ್ರುತಿ ಅವರು ಶಿವನ ಭಕ್ತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಕಥೆಯ ಪ್ರಮುಖ ಘಟ್ಟದಲ್ಲಿ ‘ಶಿವ ಶಿವ..’ ಹಾಡು ಬರುತ್ತದೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ತಿಂಗಳು ಸಮಯ ಇದೆಯಾದರೂ ಶಿವರಾತ್ರಿ ಹಬ್ಬವೇ ಈ ಹಾಡಿನ ಬಿಡುಗಡೆಗೆ ಸೂಕ್ತ ಸಮಯ ಎಂದು ನಿರ್ಧರಿಸಿ ರಿಲೀಸ್ ಮಾಡಲಾಗಿದೆ.
ಅನನ್ಯಾ ಭಟ್ ಅವರಿಗೂ ಶಿವನ ಗೀತೆಗೂ ಗಾಢ ನಂಟು ಇದೆ ಎಂದೇ ಹೇಳಬಹುದು. ಈ ಹಿಂದೆ ಅವರು ‘ಸೋಜುಗಾದ ಸೂಜು ಮಲ್ಲಿಗೆ..’ ಹಾಡು ಹೇಳಿ ದೇಶಾದ್ಯಂತ ಫೇಮಸ್ ಆಗಿದ್ದರು. ಯೂಟ್ಯೂಬ್ನಲ್ಲಿ ಆ ಗೀತೆ ಕೋಟ್ಯಂತರ ಭಾರಿ ವೀಕ್ಷಣೆ ಕಂಡಿದೆ. ಈಗ ಅವರ ಕಂಠದಲ್ಲಿಯೇ ಶಿವನ ಮತ್ತೊಂದು ಹಾಡು ಮೂಡಿಬಂದಿದೆ. ಅನೂಪ್ ಸಿಳೀನ್ ಸಂಗೀತ ಮತ್ತು ಅನನ್ಯಾ ಭಟ್ ಗಾಯನದಲ್ಲಿ ಇತ್ತೀಚೆಗೆ ಮೂಡಿಬಂದ ‘ಬಾಗ್ಲಿ ತೆಗಿ ಮೇರಿ ಜಾನ್’ ಹಾಡು ಸೂಪರ್ ಹಿಟ್ ಆಗಿ ಮುನ್ನುತ್ತಿದೆ. ಈಗ ‘ವೀರಂ’ ಚಿತ್ರದ ಈ ಗೀತೆ ಕೂಡ ಅವರಿಬ್ಬರ ಕಾಂಬಿನೇಷನ್ನಲ್ಲಿ ಸಿದ್ಧವಾಗಿದೆ.
ಈ ಹಾಡಿಗೆ ಖ್ಯಾತ ಸಾಹಿತಿ ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ‘ನಾಗೇಂದ್ರ ಪ್ರಸಾದ್ ಅವರಿಗೆ ಈ ಟ್ಯೂನ್ ತುಂಬ ಇಷ್ಟ ಆಯಿತು. ಹಾಗಾಗಿ ಕೆಲವೇ ನಿಮಿಷಗಳಲ್ಲಿ ಈ ಗೀತೆಯನ್ನು ಬರೆದುಕೊಟ್ಟರು. ಈ ಸಿನಿಮಾದಲ್ಲಿ ಒಟ್ಟು 5 ಹಾಡು ಇರಲಿದೆ. ಆ ಪೈಕಿ ಮೊದಲ ಗೀತೆಯನ್ನು ಈಗ ರಿಲೀಸ್ ಮಾಡಿದ್ದೇವೆ’ ಎಂದಿದ್ದಾರೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್.
‘ವೀರಂ’ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಮೇ 6ರಂದು ಅದ್ದೂರಿಯಾಗಿ ಈ ಚಿತ್ರ ರಿಲೀಸ್ ಆಗಲಿದೆ. ಇದರಲ್ಲಿ ಪ್ರಜ್ವಲ್ ದೇವರಾಜ್ ಅವರು ವಿಷ್ಣುವರ್ಧನ್ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:
Maha Shivaratri 2022: ಶಿವರಾತ್ರಿಯಂದು ಮಾಡಬೇಕಾದ ಮೂರು ಸರಳ ಕರ್ತವ್ಯಗಳು ಯಾವುವು ಗೊತ್ತಾ?
Mahashivratri 2022: ಶಿವರಾತ್ರಿಯಂದು ಜಾಗರಣೆ ಮಾಡುವ ಭಕ್ತರಿಗೆ ಇಲ್ಲಿವೆ ಕನ್ನಡ ಭಕ್ತಿಗೀತೆಗಳು