Maha Shivaratri 2022: ಶಿವರಾತ್ರಿಯಂದು ಮಾಡಬೇಕಾದ ಮೂರು ಸರಳ ಕರ್ತವ್ಯಗಳು ಯಾವುವು ಗೊತ್ತಾ?
ಒಂದೊಂದು ದೇವರ ಹಬ್ಬಕ್ಕೂ ಒಂದೊಂದು ರೀತಿಯ ವ್ರತ ನಿಯಮಗಳು ಆಚರಣೆಯಲ್ಲಿ ಬರುತ್ತವೆ. ಹಾಗೆ ಮಾಡಿದರೆ ಮಾತ್ರವೇ ಆ ಹಬ್ಬ ಹರಿದಿನಗಳು ಸಾರ್ಥಕವಾಗಿ ಸಫಲವಾಗುತ್ತವೆ. ಹೀಗೆಯೇ ಶಿವರಾತ್ರಿ ಹಬ್ಬಕ್ಕೂ ಕೆಲವು ವ್ರತ ನಿಯಮಗಳುಂಟು.
ಒಂದೊಂದು ದೇವರ ಹಬ್ಬಕ್ಕೂ ಒಂದೊಂದು ರೀತಿಯ ವ್ರತ ನಿಯಮಗಳು ಆಚರಣೆಯಲ್ಲಿ ಬರುತ್ತವೆ. ಹಾಗೆ ಮಾಡಿದರೆ ಮಾತ್ರವೇ ಆ ಹಬ್ಬ ಹರಿದಿನಗಳು ಸಾರ್ಥಕವಾಗಿ ಸಫಲವಾಗುತ್ತವೆ. ವರಸಿದ್ಧಿ ವಿನಾಯಕನಿಗೆ ಕರಿಗಡುಬು; ಶ್ರೀರಾಮ ನವಮಿ ಮತ್ತು ನರಸಿಂಹ ಜಯಂತಿಗಳಲ್ಲಿ ಪಾನಕ ಕೋಸಂಬರಿ; ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಕ್ಕುಲಿ, ಕೋಡುಬಳೆ, ತೇಂಗೊಳಲು, ಅವಲಕ್ಕಿ, ಮೊಸರು; ಏಕಾದಶಿ ದಿನ ಹಣ್ಣುಹಂಪಲು; ಯುಗಾದಿ ದೀಪಾವಳಿಯಲ್ಲಿ ಅಭ್ಯಂಜನ ಸ್ನಾನ ಮತ್ತು ಹೋಳಿಗೆ ಊಟ.. ಇತ್ಯಾದಿ ಇತ್ಯಾದಿ. ಹೀಗೆಯೇ ಶಿವರಾತ್ರಿ ಹಬ್ಬಕ್ಕೂ ಕೆಲವು ವ್ರತ ನಿಯಮಗಳುಂಟು.
ಶಿವನ ಭಕ್ತರು ಶಿವರಾತ್ರಿಯಂದು ಕೆಳಗಿನ ಈ ಮೂರು ನಿಯಮಗಳನ್ನು ಪಾಲಿಸಬೇಕು:
- ಮೂರು ಕರ್ತವ್ಯ: ನಾಲ್ಕೂ ಜಾವಗಳಲ್ಲಿ ಶಿವನಿಗೆ ಅಭಿಷೇಕಾದಿ ಪೂಜೆ, 2) ಜಾಗರಣೆ ಮತ್ತು 3) ಉಪವಾಸ. ಈ ಮೂರರಿಂದ ಪರಮ ಶಿವನು ಸಂತುಷ್ಟನಾಗಿ ತನ್ನ ಭಕ್ತರಿಗೆ ವರಪ್ರದನಾಗುತ್ತಾನೆ. ಈ ಮೂರು ನಿಯಮಗಳ ಅರ್ಥ ಕೆಳಗೆ ವಿವರಿಸಲಾಗಿದೆ.
- ಶಿವಪೂಜೆ: ಶಿವಾಲಯಗಳಿಗೆ ಹೋಗಿ ಅಥವಾ ತಮ್ಮ ಮನೆಯಲ್ಲಿಯೇ ಶಿವಲಿಂಗವನ್ನು ಇಟ್ಟುಕೊಂಡು ಅದಕ್ಕೆ ಅಭಿಷೇಕ, ಅಷ್ಟೋತ್ತರ, ಸಹಸ್ರನಾಮ ಪೂಜೆಯನ್ನು ಯಥಾಶಕ್ತಿ ಮಾಡಬಹುದು. ಬಿಲ್ವ ಪತ್ತೆ ದಳಗಳಿಂದ ಪೂಜಿಸಿದರೆ ತುಂಬಾ ಶ್ರೇಷ್ಠ. ಶಿವರಾತ್ರಿಯಂದು ಸಾಯಂಕಾಲ 6 ಗಂಟೆಯಿಂದ ಪ್ರಾರಂಭಿಸಿ ಮಾರನೆಯ ದಿವಸ ಬೆಳಿಗ್ಗೆ 6 ಗಂಟೆಯವರೆಗೂ ನಾಲ್ಕೂ ಜಾವಗಳಲ್ಲಿ ಶಿವನ ಪೂಜೆಯನ್ನು ಮಾಡಬೇಕು.
- ಜಾಗರಣೆ: ಅಂದು ರಾತ್ರಿಯೆಲ್ಲ ಶಿವನನ್ನು ಪೂಜಿಸುತ್ತಾ ಶಿವ ಪಂಚಾಕ್ಷರೀ ಮಂತ್ರವನ್ನು ಜಪಿಸುತ್ತಾ, ಶಿವನ ಧ್ಯಾನದಲ್ಲಿಯೇ ಮಗ್ನರಾಗಿರಬೇಕು. ಅಂದು ರಾತ್ರಿ ಮಲಗಬಾರದು. ನಿದ್ರೆಯನ್ನು ತಡೆಯುವುದಕ್ಕಾಗಿ ಸಿನಿಮಾ ಮಂದಿರಗಳಿಗೆ ಹೋಗಿ ಕಾಲ ಕಳೆಯಬಾರದು. ಪರಮೇಶ್ವರನ ಪೂಜೆಯನ್ನು ಮಾಡುತ್ತಾ ಇದ್ದರೆ ನಿದ್ರೆಯೇ ಬರುವುದಿಲ್ಲ!
- ಉಪವಾಸ: ಶಿವರಾತ್ರಿಯ ದಿನದಂದು ಬೇಯಿಸಿದ ಆಹಾರಗಳನ್ನು ತಿನ್ನಬಾರದು. ಕೇವಲ ಹಾಲು ಹಣ್ಣುಗಳನ್ನು ಮಾತ್ರ ಲಘುವಾಗಿ ಸ್ವೀಕರಿಸಬೇಕು. ಶಕ್ತಿ-ಸಾಮರ್ಥ್ಯಗಳಿದ್ದರೆ ಇದನ್ನೂ ತೆಗೆದುಕೊಳ್ಳದೇ ಕೇವಲ ನೀರನ್ನು ಕುಡಿದುಕೊಂಡೇ ಇರಬೇಕು. ಹೀಗೆ ಉಪವಾಸವಿದ್ದು, ರಾತ್ರಿಯೆಲ್ಲಾ ಜಾಗರಣೆ ಮಾಡುತ್ತಾ ಶಿವನಿಗೆ ಅಭಿಷೇಕ, ಅಷ್ಟೋತ್ತರ ಪೂಜೆಗಳನ್ನು ಮಾಡಿದಾಗ ಅದು ಅನ್ವರ್ಥ ಶಿವರಾತ್ರಿಯಾಗುತ್ತದೆ.