Rajkumar Death Anniversary: ಡಾ. ರಾಜ್​ ನಿಧನರಾದ ದಿನ ಆಕಾಶ ನೋಡಿಕೊಂಡು ದೇವರಿಗೆ ಬೈಯ್ದಿದ್ದ ಮೊಮ್ಮಗಳು ಧನ್ಯಾ!

| Updated By: ರಾಜೇಶ್ ದುಗ್ಗುಮನೆ

Updated on: Apr 11, 2021 | 5:24 PM

ಡಾ. ರಾಜ್​ಕುಮಾರ್​ ಪುಣ್ಯತಿಥಿ: ‘ಪ್ರತಿವರ್ಷ ಏ.12 ಬಂದಾಗ ಈ ದಿನವೇ ನಮ್ಮ ತಾತ ನಮ್ಮನ್ನು ಬಿಟ್ಟು ಹೋಗಿದ್ದು ಅಂತ ನಾನು ಅಂದುಕೊಳ್ಳುವುದಿಲ್ಲ. ಈ ದಿನ ನಾನು ಅವರನ್ನು ಕೊನೆಯದಾಗಿ ನೋಡಿದ್ದು ಅಂದುಕೊಳ್ಳುತ್ತೇನೆ’ ಎನ್ನುವ ಡಾ. ರಾಜ್​ಕುಮಾರ್​ ಮೊಮ್ಮಗಳು​ ಧನ್ಯಾ ರಾಮ್​ಕುಮಾರ್​ ಅವರ ಮನದಲ್ಲಿ ಮೇರುನಟನ ನೆನಪು ಹಚ್ಚ ಹಸಿರಾಗಿದೆ.

Rajkumar Death Anniversary: ಡಾ. ರಾಜ್​ ನಿಧನರಾದ ದಿನ ಆಕಾಶ ನೋಡಿಕೊಂಡು ದೇವರಿಗೆ ಬೈಯ್ದಿದ್ದ ಮೊಮ್ಮಗಳು ಧನ್ಯಾ!
ಧನ್ಯಾ ರಾಮ್​ಕುಮಾರ್​ - ಡಾ. ರಾಜ್​ಕುಮಾರ್​
Follow us on

ಕನ್ನಡ ಚಿತ್ರರಂಗ ಎಂದೂ ಮರೆಯಲು ಸಾಧ್ಯವೇ ಇಲ್ಲದ ಹೆಸರು ಡಾ. ರಾಜ್​ಕುಮಾರ್​. ಅವರು ಇಹಲೋಕ ತ್ಯಜಿಸಿ 15 ವರ್ಷ ಕಳೆದಿದೆ. ಎಷ್ಟೇ ವರ್ಷಗಳು ಉರುಳಿದರೂ ಸಿನಿಮಾಗಳ ಮೂಲಕ ಅವರು ಅಭಿಮಾನಿಗಳ ಎದೆಯಲ್ಲಿ ಸದಾ ಜೀವಂತವಾಗಿ ಇರುತ್ತಾರೆ. ಪ್ರತಿ ದಿನವೂ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ಅಣ್ಣಾವ್ರ ಪುಣ್ಯಸ್ಮರಣೆ (ಏ.12) ಮತ್ತು ಜನ್ಮದಿನದ (ಏ.24) ಸಂದರ್ಭದಲ್ಲಂತೂ ಅವರನ್ನು ಅಭಿಮಾನಿಗಳು ವಿಶೇಷವಾಗಿ ಸ್ಮರಿಸುತ್ತಾರೆ. ಇನ್ನು, ಡಾ. ರಾಜ್​ ಕುಟುಂಬದ ಸದಸ್ಯರ ಮನದಲ್ಲಂತೂ ಮೇರುನಟನ ನೆನಪುಗಳಿಗೆ ವಿಶೇಷ ಸ್ಥಾನವಿದೆ. ಆ ಬಗ್ಗೆ ರಾಜ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಅವರು ರಾಜ್​ಕುಮಾರ್​ ಬಗ್ಗೆ ‘ಟಿವಿ9 ಡಿಜಿಟಲ್​’ ಜೊತೆ ಮಾತನಾಡಿದ್ದಾರೆ.

2006ರ ಏ.12 ಎಂಬುದು ರಾಜ್​ ಅಭಿಮಾನಿಗಳು ಬೆಚ್ಚಿಬಿದ್ದ ದಿನ. ಕೋಟ್ಯಂತರ ಅಭಿಮಾನಿಗಳು ಆರಾಧಿಸುವ ‘ನಟಸಾರ್ವಭೌಮ’ ಅಂದು ಎಲ್ಲರನ್ನೂ ಬಿಟ್ಟುಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆಗ ರಾಜ್​ ಮೊಮ್ಮಗಳು (ರಾಮ್​ಕುಮಾರ್​-ಪೂರ್ಣಿಮಾ ದಂಪತಿಯ ಪುತ್ರಿ) 3 ಅಥವಾ 4ನೇ ತರಗತಿಯಲ್ಲಿ ಓದುತ್ತಿದ್ದರು. ‘ಅಂದಿನ ದಿನವನ್ನು ನೆನಪಿಸಿಕೊಳ್ಳುವುದು ಎಂದರೆ ನಿಜಕ್ಕೂ ಕಷ್ಟ ಎನಿಸುತ್ತದೆ’ ಎನ್ನುತ್ತಲೇ ಆ ದಿನದ ನೆನಪಿನ ಪುಟಗಳನ್ನು ತೆರೆಯುತ್ತಾರೆ ಧನ್ಯಾ.

‘ನಮ್ಮ ಮನೆ ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೇ ಅದು ಕರಾಳ ದಿನ. ಅಂದು ಶಾಲೆಯಲ್ಲಿ ಪೇರೆಂಟ್​-ಟೀಚರ್​ ಮೀಟಿಂಗ್​ ಮುಗಿಸಿಕೊಂಡು ತಾತನ ಮನೆಗೆ ಬಂದಿದ್ದೆ. ತಾತನನ್ನು ಮಾತನಾಡಿಸಿದೆ. ಪರೀಕ್ಷೆಯೆಲ್ಲಾ ಹೇಗೆ ಮಾಡಿದ್ದೀಯಾ ಎಂದು ಕೇಳಿದರು. ಚೆನ್ನಾಗಿ ಮಾಡಿದ್ದೇನೆ ಎಂದು ಹೇಳಿದೆ. ಸಹೋದರ ಧೀರೇನ್​ ಸಂಸ್ಕೃತ ಓದುತ್ತಿದ್ದ. ಅದರಲ್ಲಿ ಅವನು ಚೆನ್ನಾಗಿ ಮಾಡಿದ್ದಾನೆ ಎಂದು ಕೇಳಿ ತಾತ ಖುಷಿಪಟ್ಟರು. ನಂತರ ನಾನು ಪಕ್ಕದ ಮನೆಗೆ ಆಟ ಆಡಲು ಹೋದೆ. ನಾನು ಹೋಗುವುದಕ್ಕೂ ಮುನ್ನ ಸೋಫಾದ ಮೇಲೆ ತಾತ ಮಲಗಿದ್ದರು’ ಎನ್ನುತ್ತಾರೆ ಧನ್ಯಾ. ನಂತರ ಕೆಲವೇ ನಿಮಿಷಗಳಲ್ಲಿ ಅನಿರೀಕ್ಷಿತ ಕಹಿ ಘಟನೆ ನಡೆಯುತ್ತದೆ ಎಂಬ ಸೂಚನೆ ಯಾರಿಗೂ ಇರಲಿಲ್ಲ.

‘ನಾನು ಪಕ್ಕದ ಮನೆಗೆ ಹೋಗಿ 10 ನಿಮಿಷ ಕಳೆಯುವುದರೊಳಗೆ ಅಮ್ಮ ಜೋರಾಗಿ ಕಿರುಚುತ್ತಿರುವ ಶಬ್ದ ಕೇಳಿಸಿತು. ಆಗ ಮನೆಗೆ ವಾಪಸ್​ ಬಂದೆ. ವಾತಾವರಣ ಸ್ವಲ್ಪ ಪ್ಯಾನಿಕ್​ ಆಗಿತ್ತು. ನಂತರ ತಾತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಇದ್ದವರು ಪದೇಪದೇ ಆಸ್ಪತ್ರೆಗೆ ಫೋನ್​ ಮಾಡಿ ವಿಚಾರಿಸುತ್ತಿದ್ದರು. ಅವರು ಹೋಗಿಬಿಟ್ರು ಎಂಬ ಸುದ್ದಿ ಕೇಳಿದ ತಕ್ಷಣ ಎಲ್ಲರೂ ಕುಸಿದುಬಿಟ್ಟೆವು. ಅಮ್ಮು ಎಂಬ ನನ್ನ ಕಸಿನ್​ ಒಬ್ಬಳು ಮನೆಯಿಂದ ಹೊರಗೆ ಹೋಗಿ ಆಕಾಶ ನೋಡಿಕೊಂಡು ದೇವರನ್ನು ಬೈಯ್ಯುತ್ತಿದ್ದಳು. ಅದು ನನಗೆ ಚೆನ್ನಾಗಿ ನೆನಪಿದೆ. ನಾನು ಚಿಕ್ಕವಳಾದ್ದರಿಂದ, ಅವಳನ್ನೇ ಅನುಸರಿಸಿ ನಾನು ಕೂಡ ಬಯ್ಯಲು ಶುರು ಮಾಡಿದೆ’ ಎಂಬ ವಿವರಗಳು ಧನ್ಯಾ ಅವರ ನೆನಪಿನ ಪುಟಗಳಲ್ಲಿವೆ.

‘ನಂತರ ತಾತನ ನೇತ್ರದಾನ ಪ್ರಕ್ರಿಯೆ ಮಾಡಿದ್ದು ನನಗೆ ನೆನಪಿದೆ. ಮನೆಯ ಪಾರ್ಕಿಂಗ್​ ಏರಿಯಾದಲ್ಲಿನ ರೂಮ್​ನಲ್ಲಿ ನೇತ್ರದಾನದ ಕೆಲಸ ಆಗುತ್ತಿತ್ತು. ನಾವು ಚಿಕ್ಕವರಾದ್ದರಿಂದ ನೋಡಲು ಪ್ರಯತ್ನಿಸಿದೆವು. ವಾತಾವರಣ ಶಾಂತಿಯುತವಾಗಿದ್ದ ಕೊನೇ ಕ್ಷಣ ಅಂತ ನನಗೆ ನೆನಪಿರುವುದು ಅದು ಮಾತ್ರ. ಅದಾದ ನಂತರ ಗಲಾಟೆ ಶುರುವಾಯಿತು. ನಾವು ಚಿಕ್ಕವರಾದ ಕಾರಣ ಏನಾದರೂ ತೊಂದರೆ ಆಗಬಹುದು ಅಂತ ನಮ್ಮನ್ನೆಲ್ಲ ರೂಮ್​ನಲ್ಲಿ ಲಾಕ್​ ಮಾಡಿದರು. ಅಮ್ಮನ ಜೊತೆ ನಾನು ಅಂದು ಮಾತನಾಡಲಿಲ್ಲ. ಯಾಕೆಂದರೆ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅಮ್ಮನ ಜೊತೆಗೆ ಇರು, ಅಮನನ್ನು ಬಿಟ್ಟು ಎಲ್ಲಿಯೂ ಹೋಗಬೇಡ ಅಂತ ಅಪ್ಪ ಹೇಳಿದ್ದರು’ ಎಂದು ಆ ದಿನವನ್ನು ಧನ್ಯಾ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ವರನಟ ಡಾ. ರಾಜ್​ಕುಮಾರ್​ಗೆ ಮೊದಲು ಗೌರವ ಡಾಕ್ಟರೇಟ್ ನೀಡಿ 45 ವರ್ಷ ಪೂರ್ಣ: ಇದು ಮೈಸೂರು ವಿಶ್ವವಿದ್ಯಾಲಯದ ಗೌರವ

National Film Awards 2019: ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ‘ಅಕ್ಷಿ’ ಚಿತ್ರಕ್ಕೂ ಡಾ. ರಾಜ್​ಕುಮಾರ್​​ಗೂ ಇದೆ ಸಂಬಂಧ!